ಎಸ್ಸೆಸ್ ಕೇರ್ ಟ್ರಸ್ಟ್ ನಿಂದ ನಮ್ಮ ನಡೆ ಆರೋಗ್ಯದೆಡೆಗೆ

ಎಸ್ಸೆಸ್ ಕೇರ್ ಟ್ರಸ್ಟ್ ನಿಂದ ನಮ್ಮ ನಡೆ ಆರೋಗ್ಯದೆಡೆಗೆ

ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ರೋಗ ಪತ್ತೆ ಹಚ್ಚಿ  ಮುಕ್ತಿಹೊಂದಲು ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ 

ದಾವಣಗೆರೆ, ಫೆ. 16 – ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ ಎಂದು ಎಸ್.ಎಸ್.ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ 2023ರ ವಿಶ್ವ ಕ್ಯಾನ್ಸರ್ ದಿನ ಹಾಗೂ ವಿಶ್ವ ಗ್ಲಾಕೋಮಾ ವಾರದ ಪ್ರಯುಕ್ತ ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ಉಚಿತ ತಪಾಸಣೆ, ಸಲಹೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಮಹಿಳೆಯರಲ್ಲಿ ಕ್ಯಾನ್ಸರ್‌ ನಲ್ಲಿ ಸ್ತನ ಕ್ಯಾನ್ಸರ್ ನಂ.1 ಆಗಿದ್ದು, ಸ್ತನ ಕ್ಯಾನ್ಸರ್ ಮನೆಯಲ್ಲಿಯೇ  ಸ್ವಯಂ ಪರೀಕ್ಷಿಸಿಕೊಳ್ಳಲು ಸಹ ವೈದ್ಯರು ಶಿಬಿರದಲ್ಲಿ ಸಲಹೆ ನೀಡಲಿದ್ದು, ರೋಗ ಲಕ್ಷಣಗಳನ್ನು ಪರಿಶೀಲಿಸಲು ಮತ್ತು ಹೆಚ್ಚಿನ ಮೌಲ್ಯಮಾಪನದ ಅವಶ್ಯಕತೆ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಗತ್ಯವಿದ್ದು, ಸ್ಕ್ರೀನಿಂಗ್ ಮ್ಯಾಮೊಗ್ರಾಮ್ ಮೂಲಕ ಅನೇಕ ಗಡ್ಡೆಗಳನ್ನೂ ಪತ್ತೆ ಮಾಡಬಹುದು. ಉಚಿತ ತಪಾಸಣೆಯ ಉಪಯೋಗ ಪಡೆಯಲು ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಆಶಯದಂತೆ ಎಸ್.ಎಸ್.ಕೇರ್ ಟ್ರಸ್ಟ್, ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ
ಹೆಚ್ಚಿನ ಗಮನಹರಿಸಿ ರೋಗ ಬರುವ
ಮುನ್ನವೇ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಈ ರೀತಿಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

2023ರ ವಿಶ್ವ ಕ್ಯಾನ್ಸರ್ ದಿನ ಹಾಗೂ ವಿಶ್ವ ಗ್ಲಾಕೋಮಾ ವಾರದ ಪ್ರಯುಕ್ತ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವಂತೆ ಅರಸಾಪುರ, ಕಕ್ಕರಗೊಳ್ಳ, ಹದಡಿ, ದೊಡ್ಡಬಾತಿ, ಆಲೂರು, ಆಲೂರು ಹಟ್ಟಿ, ಶ್ಯಾಗಲೆ ಮತ್ತು ತೋಳಹುಣಸೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್, ದಂತ ಮತ್ತು ಕಣ್ಣುಗಳ ಉಚಿತ ತಪಾಸಣೆ, ಸಲಹೆ ಹಾಗೂ ಚಿಕಿತ್ಸೆ ಶಿಬಿರವನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೇತ್ರ ತಜ್ಞರಾದ
ಡಾ. ಶಾಂತಲಾ, ಸಮುದಾಯ ಆರೋಗ್ಯ ವಿಭಾಗದ ಕೋ ಆರ್ಡಿನೇಟರ್ ಹರೀಶ್, ಹದಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

error: Content is protected !!