ಶಿವಗೋಷ್ಠಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಮತಿ ಜಯಪ್ಪ
ದಾವಣಗೆರೆ, ಫೆ. 12- ಕಲ್ಯಾಣ ಕ್ರಾಂತಿಯಲ್ಲಿ ಶರಣ ಧರ್ಮ ರಕ್ಷಣೆ, ವಚನ ಸಾಹಿತ್ಯದ ಉಳಿವಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಪಾತ್ರ ಪ್ರಮುಖವಾದುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ, ಹಿರಿಯ ಉಪನ್ಯಾಸಕರೂ ಆದ ಶ್ರೀಮತಿ ಸುಮತಿ ಜಯಪ್ಪ ಹೇಳಿದರು.
ನಗರದ ತರಳಬಾಳು ಬಡಾ ವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ವತಿಯಿಂದ ನಿನ್ನೆ ಹಮ್ಮಿ ಕೊಂಡಿದ್ದ `ಶಿವಗೋಷ್ಠಿ-292, ಸ್ಮರಣೆ- 64′ ಕಾರ್ಯಕ್ರಮದಲ್ಲಿ `ಅಂಬಿಗರ ಚೌಡಯ್ಯ ನವರ ವಚನಗಳು’ ಕುರಿತು ಮಾತನಾಡಿದರು.
ತುಂಗಭದ್ರಾ ನದಿಯಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಾ ಕಂದಾ ಚಾರ, ಮೂಢನಂಬಿಕೆಗಳನ್ನು ಖಂಡಿಸುತ್ತಾ, ಸಮಾಜದಲ್ಲಿನ ಅನ್ಯಾಯ, ವೈದಿಕತೆಯನ್ನು ವಿರೋಧಿಸುತ್ತಾ ಶಿವಾನುಭವ, ವಚನಗಳ ಚಿಂತನೆ, ಶರಣ ತತ್ವವನ್ನು ಪಸರಿಸುವ ಕೆಲಸವನ್ನು ಶುದ್ಧ ಮನಸ್ಸಿನಿಂದ ಮಾಡುತ್ತಿದ್ದ ನಿಜಶರಣ ಎಂದು ಬಣ್ಣಿಸಿದರು.
12 ನೇ ಶತಮಾನದಲ್ಲಿನ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವಜ್ಞಾನಿ ಯಾಗಿ, ವಚನಕಾರರಾಗಿ, ಕ್ರಾಂತಿಯ ಕೆಂಡದುಂಡೆಯಾಗಿ ಹೊರಹೊಮ್ಮುತ್ತಾರೆ. ಏಕದೇವ ಉಪಾಸಕರಾಗಿದ್ದರು ಎಂದರು.
ಕಲ್ಯಾಣ ಕ್ರಾಂತಿಯಲ್ಲಿ ಎಲ್ಲವೂ ನಾಶ ವಾಗಿ ಕೇವಲ 330 ವಚನಗಳು ನಮಗೆ ಲಭ್ಯವಿದ್ದು, ಇವರ ವಚನಗಳ ಬಗ್ಗೆ ಇನ್ನೂ ಸಂಶೋಧನೆಗಳು ಆಗಬೇಕಾಗಿವೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಲಿಂ. ವೈ.ಜಿ. ರುದ್ರಪ್ಪ ಅವರ ಸ್ಮರಣೆ ಮಾಡಿದ ಚನ್ನಗಿರಿ ಕಾಲೇಜಿನ ಉಪನ್ಯಾಸಕ ಎಂ.ಆರ್. ಶಿವಕುಮಾರ್ ಅವರು, ಮಾದರಿ ವ್ಯಕ್ತಿತ್ವದ, ಸರಳ, ಸಜ್ಜನಿಕೆಯ, ಆದರ್ಶ ವ್ಯಕ್ತಿತ್ವದ ವೈ.ಜಿ. ರುದ್ರಪ್ಪ ಅವರು ಸ್ಮರಣೀಯರು ಎಂದರು.
ತರಳಬಾಳು ವಿದ್ಯಾಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು ಜನಾನುರಾಗಿಯಾಗಿ, ಶಿಕ್ಷಣ ಕ್ಷೇತ್ರವಲ್ಲದೇ ಸಮಾಜ ಸೇವಾ ಕ್ಷೇತ್ರದಲ್ಲೂ ಜನಮಾನಸದಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡಿದ್ದಾರೆಂದರು.
ಶಿವಗೋಷ್ಠಿ ಸಮಿತಿ ಅಧ್ಯಕ್ಷರಾದ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸಿದ್ದರು. ವಿಮಲಮ್ಮ ದಿ. ವೈ.ಜಿ. ರುದ್ರಪ್ಪ, ಮುಖಂಡರಾದ ಕೆಂಚನಗೌಡ್ರು, ವೈ.ಜಿ. ಪ್ರಕಾಶ್, ಎಸ್.ಕೆ. ಹಲಗಣ್ಣನವರ್ ಮತ್ತಿತರರಿದ್ದರು.