ಸಾಹಿತ್ಯವನ್ನು ಪಾಮರರ ಸೊತ್ತಾಗಿಸಿದ ಕೀರ್ತಿ ವಚನಕಾರರದ್ದು

ಸಾಹಿತ್ಯವನ್ನು ಪಾಮರರ ಸೊತ್ತಾಗಿಸಿದ ಕೀರ್ತಿ ವಚನಕಾರರದ್ದು

ಲೇಖಕರಾದ ಶ್ರೀಮತಿ ಎಂ.ಎಸ್. ಮಂಜುಳಾ ಮಂಜಪ್ಪ ಅವರ `ಹೆಜ್ಜೆಯ ಗುರುತು’ ಹಾಗೂ ಸಮಕಾಲೀನ ವಚನಧಾರೆ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ. ನಾ. ಲೋಕೇಶ್‌ ಒಡೆಯರ್

ದಾವಣಗೆರೆ, ಫೆ. 12- ಪಂಡಿತರ ಸೊತ್ತಾಗಿದ್ದ ಸಾಹಿತ್ಯವನ್ನು ಪಾಮರರ (ಸಾಮಾನ್ಯರ) ಸೊತ್ತಾಗಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಮುಂದೆ ಹರಿದಾಸರು ಕೂಡ ಕೀರ್ತನೆಗಳ ಮೂಲಕ ಸಾಹಿತ್ಯವನ್ನು ಸಾಮಾನ್ಯರ ಮನಮುಟ್ಟುವಂತೆ ರಚಿಸಿದರು. ಸಾಹಿತ್ಯ ಪ್ರಕಾರಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಅನುಭವದಿಂದ ಆಡಿದ ಮಾತೇ ಸಾಹಿತ್ಯ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ನಾ. ಲೋಕೇಶ್‌ ಒಡೆಯರ್ ಹೇಳಿದರು.

ನಗರದ ಮಾಗನೂರು ಬಸಪ್ಪ ಶಾಲಾ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ ಮಿಂಚು ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಲೇಖಕರಾದ ಶ್ರೀಮತಿ ಎಂ.ಎಸ್. ಮಂಜುಳಾ ಮಂಜಪ್ಪ ಅವರ `ಹೆಜ್ಜೆಯ ಗುರುತು’ ಹಾಗೂ ಸಮಕಾಲೀನ ವಚನಧಾರೆ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿಗಳ ಕುರಿತು ಆಶಯ ನುಡಿಗಳನ್ನಾಡಿದರು.

ನವೋತ್ತರದ ಸಾಹಿತ್ಯ ಶ್ರೀ ಸಾಮಾನ್ಯರ ತಲುಪುವಲ್ಲಿ ಅಗಾಧ ಪರಿಣಾಮ ಉಂಟುಮಾಡಿದೆ. ವಚನಕಾರರ ಪ್ರಭಾವ ಆಧುನಿಕ ಸಾಹಿತಿಗಳ ಮೇಲೆ ಬಹಳವಾಗಿದೆ. ಅದರ ಮಾರ್ಗಗಳನ್ನು ಅನುಸರಿಸಿ, ಅನೇಕ ವಚನಗಳನ್ನು ಬರೆಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ ಗದ್ಯದಂತಿರುವ ಚೌಪದಿ, ತ್ರಿಪದಿಗಳನ್ನು ಮುಕ್ತ ಛಂದಸ್ಸಿನಲ್ಲಿ ಬರೆಯುತ್ತಿದ್ದಾರೆ. ಕವಯತ್ರಿ ಮಂಜುಳಾ ಅವರು ನಾಲ್ಕು ಸಾಲಿನಲ್ಲಿ ಮೂರು ಸಾಲಿನಲ್ಲಿ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಕವನ ರಚಿಸಿದ್ದಾರೆಂದು ಹೇಳಿದರು.

ಇವರು ಬರೆದಿರುವ ವಚನಗಳನ್ನು ಓದುವುದರ ಮೂಲಕ ನಮ್ಮ ಓರೆಕೋರೆಗಳನ್ನು ತಿದ್ದಿಕೊಳ್ಳಲು ಓದುಗರಿಗೆ ಸಾಧ್ಯವಿದೆ. ಒಟ್ಟಾರೆ ಇವರು ಬರೆದಿರುವ ವಚನಗಳು ಗಂಭೀರ ಆಲೋಚನೆಗೆ ತೊಡಗಿಸು ವಂತಿದೆ. ಮಂಜುಳ ಎಂಬ ಪದಕ್ಕೆ ಮಧುರವಾದ, ಸುಂದರವಾದ ಅರ್ಥವಿದೆ. ಮಂಜುಳ ಮಂಜಪ್ಪ ರಚನೆಯ ವಚನಗಳು ಲಲಿತವಾಗಿ,  ಮಧುರವಾಗಿವೆ. ಆಧುನಿಕ ವಚನಕಾರರ ಸಾಲಿನಲ್ಲಿ ಇವರಿಗೂ ಸ್ಥಾನವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಕಾವ್ಯ ಸೃಷ್ಠಿಗೆ ಪ್ರತಿಭೆ ಜೊತೆಗೆ ಸತತ ಅಭ್ಯಾಸ ಇರಬೇಕು. ಕಾವ್ಯ ನಮ್ಮನ್ನು ಸನ್ಮಾರ್ಗದ ಕಡೆ ಕೊಂಡೊಯ್ಯುವ ಕೆಲಸ ಮಾಡಬೇಕಾಗಿದೆ ಎಂದರು.

ಯಾರು ಕ್ರಿಯಾಶೀಲರಾಗಿರುತ್ತಾರೋ ಅವರು ಮಾಧ್ಯಮ, ಅಕ್ಷರಗಳ ಮೂಲಕ ಪ್ರತಿಕ್ರಿಯೆ ಕೊಟ್ಟೇ ಕೊಡುತ್ತಾರೆ. ಸುಸ್ಥಿರ ಸಮಾಜ ನಿರ್ಮಾಣವನ್ನು ಸಾಹಿತ್ಯದಿಂದ ಮಾಡಬೇಕಾಗಿದೆ ಎಂದು ಹೇಳಿದರು.

ಮಂಜುಳ ನಿವೃತ್ತರಾದ ಮೇಲೆ ಸಾಹಿತ್ಯ ಕೃಷಿಯತ್ತ ಮುಖಮಾಡಿದ್ದು, ತೆರೆದ ಕಣ್ಣಿನಿಂದ ಸಮಾಜವನ್ನು ನೋಡಿ, ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ವನ್ನು ಸಾಹಿತ್ಯದ ಮೂಲಕ ಮಾಡುತ್ತಿದ್ದಾರೆ ಎಂದರು.

ಕೃತಿ ಕುರಿತು ಸಾಹಿತಿ, ಜಾನಪದ ವಿದ್ವಾಂಸರೂ ಆದ ಡಾ. ಬಸವರಾಜ ನೆಲ್ಲಿಸರ ಕೃತಿಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜಿಲ್ಲಾ  ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಎಸ್.ಎಸ್. ಮಲ್ಲಮ್ಮ ಮಾತನಾಡಿದರು. 

ಸಾಹಿತಿ ಮಂಜುಳಾ ಮಂಜಪ್ಪ, ಡಾ. ಎಸ್. ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಮಂಜುಳಾ ಪ್ರಾರ್ಥಿಸಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ವೀಣಾ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅನ್ನಪೂರ್ಣ ಪಾಟೀಲ್ ಸ್ವಾಗತಿಸಿದರು. ಶ್ರೀಮತಿ ಮಮತಾ ನಾಗರಾಜ್ ನಿರೂಪಿಸಿದರು. ನಟರಾಜ್, ಸಿದ್ಧಪ್ಪ ಸಾರಥಿ ಕೃತಿಕಾರರ ಕುರಿತು ಮಾತನಾಡಿದರು.

error: Content is protected !!