ಮಲೇಬೆನ್ನೂರು, ಫೆ.9- ಎಸ್ಸಿ-ಎಸ್ಟಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವುದೇ ನಮ್ಮ ಸರ್ಕಾರದ ಗುರಿಯಾಗಿದ್ದು, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಷೆಡ್ಯೂಲ್‌ಗೆ ಸೇರಿಸುವ ಪ್ರಕ್ರಿಯೆ ಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಗುರುವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ 5ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಾಗಮೋಹನ್ ದಾಸ್ ವರದಿಯಂತೆ ತುಳಿತಕ್ಕೊಳಗಾಗಿರುವ ಸಮಾಜದವರ ಪರವಾಗಿ ನ್ಯಾಯ ನೀಡಲಾಗಿದೆ. ಎಸ್ಸಿ ವರ್ಗಕ್ಕೆ ಶೇ.15 ರಿಂದ ಶೇ.17 ಮತ್ತು ಎಸ್ಟಿ ಗೆ 3 ರಿಂದ ಶೇ.7 ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ತಳ ಸಮುದಾಯದ ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಈ ಹೆಚ್ಚಳಕ್ಕೆ ಕಾನೂನಿನ ರಕ್ಷಣೆಯನ್ನು ಈಗಾಗಲೇ ಸರ್ಕಾರ ನೀಡಿದೆ. ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವ ರನ್ನು ಕುಟುಕಿದರು. ಮೀಸಲಾತಿ ಹೆಚ್ಚಳವನ್ನು ಸರ್ಕಾರ ಜನವರಿ 10 ರಿಂದಲೇ ಜಾರಿ ಮಾಡಿದ್ದು, ಸರ್ಕಾರದ ನೇಮಕಾತಿಗಳಲ್ಲಿ ಈ ನಿಯಮವನ್ನು ಈಗಾಗಲೇ ಪಾಲಿಸಲಾಗುತ್ತಿದೆ ಎಂದರು.
ಪ್ರತ್ಯೇಕ ಸಚಿವಾಲಯ : ಪರಿಶಿಷ್ಟ ಪಂಗ ಡದ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲು ಪ್ರತ್ಯೇಕ ಸಚಿವಾಲಯ ವನ್ನು ಸ್ಥಾಪಿಸಲಾಗಿದೆ. 75 ಯೂನಿಟ್ ಉಚಿತ ವಿದ್ಯುತ್ , ಸಮುದಾಯದ ರೈತರಿಗೆ ಜಮೀನು ಖರೀದಿಗೆ 25 ಲಕ್ಷದವರೆಗೆ ಅನುದಾನ, ಮನೆ ನಿರ್ಮಾಣಕ್ಕೆ 2 ಲಕ್ಷ, ಎಸ್ಟಿ ಹಾಸ್ಟೆಲ್ ಗಳನ್ನು ಹೆಚ್ಚಳ ಮಾಡಲಾಗಿದೆ. ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಸಹಕಾರ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಕೂಡ ನೀಡಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾಗಿದ್ದಾರೆ. ಸಮುದಾಯದ ಜನನಾಯಕರಿಗೆ ನಮ್ಮ ಸರ್ಕಾರದಲ್ಲಿ ಪ್ರಮುಖ ಸ್ಥಾನಮಾನಗಳನ್ನು ನೀಡಲಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯವನ್ನು ರಕ್ಷಣೆ ಮಾಡುವಲ್ಲಿ ವಾಲ್ಮೀಕಿ ಸಮಾಜ ಮಹತ್ವದ ಪಾತ್ರ ವಹಿಸಿದೆ. ಮದಕರಿ ನಾಯಕ, ರಾಜ್ಯದ ಇತಿಹಾಸದಲ್ಲಿ ಪ್ರಮುಖರು. ವಾಲ್ಮೀಕಿ ರಚಿಸಿರುವ ರಾಮಾಯಣ ಜಗತ್ತಿನ 10 ಶ್ರೇಷ್ಠ ಗ್ರಂಥಗಳಲ್ಲಿ ಒಂದು. ಮನುಷ್ಯ ಸಂಬಂಧಗಳನ್ನು ಉತ್ತಮವಾಗಿ ಅತ್ಯುತ್ತಮವಾಗಿ ಬಿಂಬಿಸಿ, ದುಷ್ಟಶಕ್ತಿಗಳನ್ನು ಸಂಹರಿಸುವ ಪರಿಯನ್ನು ರಾಮಾಯಣದಲ್ಲಿ ವಾಲ್ಮೀಕಿ ಅವರು ತೋರಿದ್ದಾರೆ. ವೀರ ಸಿಂಧೂರ ಲಕ್ಷ್ಮಣ, ಬೇಡರ ಕಣ್ಣಪ್ಪ, ಏಕಲವ್ಯ ಈ ಸಮುದಾಯದವರೇ. ತಳಸಮುದಾಯವನ್ನು ಸದೃಢಗೊಳಿಸಿದರೆ ನಾಡು ಸದೃಢಗೊಳಿಸಿದಂತೆ ಎಂದರು.
ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಶ್ರೀಗಳ ಬದ್ಧತೆ ಎಲ್ಲರಿಗೂ ಇಷ್ಟವಾಗಿದೆ. ಸಮಾಜಕ್ಕಾಗಿ 252 ದಿನ ಧರಣಿ ನಡೆಸಿದ್ದು ಸುಲಭದ ಕೆಲಸವಲ್ಲ. ಅವರನ್ನು ಅಷ್ಟು ದಿನ ಕೂರಿಸಿಕೊಂಡಿದ್ದಕ್ಕೆ ನಮಗೂ ನೋವು ಇದೆ. ಅದಕ್ಕಾಗಿ ಅವರ ಕ್ಷಮೆ ಕೇಳುತ್ತೇವೆ. ಶ್ರೀಗಳ ಆಸೆಯಂತೆ ಉದ್ಯೋಗ ಮೇಳ ಮಾಡಿದ್ದೇವೆ. ಸಂದರ್ಶನಕ್ಕೆ ಹಾಜರಾಗಿದ್ದ ವರಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.
ಸಚಿವ ಆನಂದ್‌ಸಿಂಗ್ ಮಾತನಾಡಿ, ನೂತನ ರಥವನ್ನು ನಿರ್ಮಿಸಿಕೊಟ್ಟಿರುವುದಕ್ಕೆ ಖುಷಿ ಇದೆ. ಈ ದಿನ ಜೀವನದ ಸಂತೋಷದ ದಿನವಾಗಿದ್ದು, ಇದು ಪುಣ್ಯ ಎಂದು ಭಾವುಕರಾದರು. ಈ ವೇಳೆ ಆನಂದ್‌ಸಿಂಗ್ ಅವರಿಗೆ `ಮದಕರಿ ನಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ಎನ್.ವೈ. ಗೋಪಾಲಕೃಷ್ಣ, ಶಾಸಕ ರಾಜಣ್ಣ ಗೌಡ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಎಸ್.ವಿ. ರಾಮಚಂದ್ರ ಅವರು ಸಿಎಂ ಗೆ ಶ್ರೀರಾಮನ ಬೆಳ್ಳಿ ವಿಗ್ರಹ ನೀಡಿ ಕೃತಜ್ಞತೆ ಸಲ್ಲಿಸಿದರು.
ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಂ. ಕೃಷ್ಣಾರೆಡ್ಡಿ, ಅರುಣ್‌ಕುಮಾರ್ ಪೂಜಾರ್, ರಾಜಾ ವೆಂಕಟಪ್ಪ ನಾಯಕ, ಪ್ರೊ. ಎನ್. ಲಿಂಗಣ್ಣ, ವಿರುಪಾಕ್ಷಪ್ಪ ಬಳ್ಳಾರಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜನಾಯ್ಕ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ನೇಮಿರಾಜ ನಾಯ್ಕ, ಚಂದ್ರಾನಾಯ್ಕ, ನಿಗಮ ಮಂಡಳಿ ಅಧ್ಯಕ್ಷರಾದ ಹೆಚ್.ಟಿ. ಬಳಿಗಾರ್, ಎಂ.ಎನ್. ಈಟೇರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಜಾತ್ರಾ ಸಮಿತಿ ಸಂಚಾಲಕ ಕೆ.ಪಿ. ಪಾಲಯ್ಯ, ಹೊದಿಗೆರೆ ರಮೇಶ್, ಹರ್ತಿಕೋಟೆ ವೀರೇಂದ್ರಸಿಂಹ, ಮಾಯಕೊಂಡ ಕ್ಷೇತ್ರದ ಮಧು, ಹೋರಾಟಗಾರರಾದ ಸಿರಿಗೆರೆ ತಿಪ್ಪೇಶ್, ಬಸವರಾಜನಾಯ್ಕ ಮತ್ತಿತರರು ಹಾಜರಿದ್ದರು.
ಶ್ರೀಮಠಕ್ಕೆ ಬೆಳ್ಳಿ ಸಿಂಹಾಸನವನ್ನು ಕೊಡುಗೆಯಾಗಿ ನೀಡಿದ ಕೂಡ್ಲಿಗಿಯ ಬಂಗಾರು ಹನುಮಂತ ಅವರನ್ನು ಸನ್ಮಾನಿಸಲಾಯಿತು.
ಗದೆ ವಾಪಸ್ ಕೊಟ್ಟ ಸಿಎಂ : ಶ್ರೀಮಠ ದಿಂದ ಸಿಎಂ ಬಸವರಾಜ್ ಬೊಮ್ಮಾಯಿಯ ವರಿಗೆ ವಾಲ್ಮೀಕಿ ಮೂರ್ತಿಯ ಜೊತೆಗೆ ಬೆಳ್ಳಿ ಗದೆಯನ್ನು ಕೊಟ್ಟು ಸನ್ಮಾನಿಸಲಾಯಿತು. ಆದರೆ ಬೊಮ್ಮಾಯಿಯವರು ಕೊನೆಯಲ್ಲಿ ಬೆಳ್ಳಿ ಗದೆ ವಾಪಾಸ್ ಮಠಕ್ಕೆ ನೀಡಿ, ನಾನು ಎಲ್ಲಿಯೂ ಗದೆ ಯನ್ನು ತೆಗೆದುಕೊಂಡು ಹೋಗಿಲ್ಲ ಎಂದರು.