ದಾವಣಗೆರೆ, ಫೆ.9- ಆರು ತಿಂಗಳ ನಂತರ ದಾವಣಗೆರೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಬಹುಪಾಲು ಸಮಯ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಬಲಿಯಾಯಿತು.
ನಗರದ ಸಮಸ್ಯೆಗಳ ಕುರಿತು ಚರ್ಚಿಸಲು ಸಮಯ ನೀಡಬೇಕೇ ಬೇಡವೇ? ಎಂಬ ವಿಷಯಕ್ಕೆ ಆರಂಭಿಕ ಕಾಲು ಗಂಟೆ ವ್ಯಯವಾದರೆ, ಶಿವಪಾರ್ವತಿ ಬಡಾವಣೆ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಹೆಸರಿ ಡುವ ಚರ್ಚೆ ಸುಮಾರು ಎರಡು ತಾಸು ನಡೆಯಿತು.
ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಸಭೆಯ ಆರಂಭದಲ್ಲಿಯೇ `ಆರು ತಿಂಗಳ ನಂತರ ಸಾಮಾನ್ಯ ಸಭೆ ಕರೆಯಲಾಗಿದೆ. ವಾರ್ಡ್ಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಶೂನ್ಯವೇಳೆಯ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡಿ’ ಎಂದು ಮಹಾಪೌರರಿಗೆ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಎ.ನಾಗರಾಜ್, ಸಭೆ ರಾತ್ರಿ 12 ಗಂಟೆ ವರೆಗೆ ಬೇಕಾದರೆ ನಡೆಯಲಿ. ಆದರೆ ಆರಂಭದಲ್ಲಿ ಅರ್ಧ ಗಂಟೆ ಶೂನ್ಯ ಅವಧಿ ಚರ್ಚೆಗೆ ಅವಕಾಶ ಕೊಡಿ. ಮೀಟಿಂಗ್ ನಡೆಸುವುದು ಮುಖ್ಯವಲ್ಲ. ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವುದು ಮುಖ್ಯ ಎಂದರು.
ಎಸ್.ಟಿ.ವೀರೇಶ್ ಮಾತನಾಡಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು ಹೆಚ್ಚಿವೆ. ಸೋಮವಾರ ವಿಶೇಷ ಸಭೆ ಕರೆದು ಎಲ್ಲಾ ವಾರ್ಡ್ಗಳ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಈಗ ಬೇಡ ಎಂದರು. ಆರಂಭದಲ್ಲಿಯೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಆರಂಭವಾಯಿತು.
ಉಮಾ ಪ್ರಕಾಶ್ ಮಾತನಾಡಿ, ಪಾಲಿಕೆ ಸದಸ್ಯರಾಗಿ ಮೂರು ವರ್ಷವಾದರೂ ವಾರ್ಡ್ ನಲ್ಲಿ ಒಂದು ಬೀದಿ ದೀಪ ಹಾಕಿಸಲು ಸಾಧ್ಯ ವಾಗಿಲ್ಲ. ಯುಜಿಡಿಯಿಂದ ನೀರು ಹರಿದು ಚರಂಡಿಗೆ ಸೇರಿಸುತ್ತಿದೆ. ಇದನ್ನು ಯಾರ ಬಳಿ ಕೇಳಬೇಕು ಎಂದು ಪ್ರಶ್ನಿಸಿದರು. ಅಲ್ಲದೇ ಚರ್ಚೆಗೆ ಅವಕಾಶ ನೀಡುವಂತೆ ಹೇಳಿದರು.
ಕಟ್ಟಡ ಪರವಾನಗಿ ಬೈಲಾ ತಿದ್ದುಪಡಿಗೆ ತೀರ್ಮಾನ
ನಗರದಲ್ಲಿ ಕಟ್ಟಡ ಕಟ್ಟಲು ಪರವಾನಿಗಿ ನೀಡುವ ಬೈಲಾ ತಿದ್ದುಪಡಿ ಮಾಡಲು ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸದಸ್ಯ ಶಿವಪ್ರಕಾಶ್, ಕಟ್ಟಡ ಕಟ್ಟಲು ಮಣ್ಣು ಪರೀಕ್ಷೆ ವರದಿ ಸೇರಿದಂತೆ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಅಪಾರ್ಟ್ಮಂಟ್ ಕಟ್ಟುವುದಾದರೆ ನಿಯಮಗಳು ಬಿಗಿ ಇರಲಿ. ಆದರೆ ಮನೆ ಕಟ್ಟಲು ಅಂತಹ ನಿಯಮಗಳ ಬೇಡ ಎಂದು ಸಲಹೆ ನೀಡಿದರು.
ಸದಸ್ಯ ಅಜಯ್ ಕುಮಾರ್ ಸಹ ಇದಕ್ಕೆ ದನಿ ಗೂಡಿಸಿ, ಜಿ+2 ಕಟ್ಟಡಗಳಿಗೆ ಮಣ್ಣು ಪರೀಕ್ಷೆಯ ಅಗತ್ಯವಿಲ್ಲ. ಮನೆ ನಿರ್ಮಿಸುವ ಇಂಜಿನಿಯರ್ಗಳಿಗೆ ಅದರ ಅರಿವಿರುತ್ತದೆ ಎಂದರು.
ಆಯುಕ್ತೆ ರೇಣುಕಾ, ಬೈಲಾ ತಿದ್ದುಪಡಿ ಮಾಡುವ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದು ಈ ಚರ್ಚೆಗೆ ತೆರೆ ಎಳೆದರು.
ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಸದಸ್ಯರ ಆಗ್ರಹ
ಸದಸ್ಯ ಎ.ನಾಗರಾಜ್, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕ್ರಮ ಕೈಗೊಳ್ಳುವಂತೆ ಹೇಳಿದರು. ಸಂತಾನಹರಣ ಚಿಕಿತ್ಸೆಗೆ 1 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂದಿಗೂ ನಾಯಿಗಳು ಗುಂಪುಕಟ್ಟಿ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದರು.
ಚಮನ್ ಸಾಬ್ ಮಾತನಾಡಿ, ನಾಯಿ ಕಚ್ಚಿಸಿಕೊಂಡವರಿಗೆ ಪಾಲಿಕೆಯಿಂದ ಆಸ್ಪತ್ರೆ ಖರ್ಚು ಭರಿಸಬೇಕು. ಮೃತಪಟ್ಟವರಿಗೆ ಹತ್ತು ಲಕ್ಷ ಪರಿಹಾರ ನೀಡುವಂತೆ ತೀರ್ಮಾನ ಕೈಗೊಳ್ಳಿ ಎಂದು ಸಲಹೆ ನೀಡಿದರು. ಅಬ್ದುಲ್ ಲತೀಫ್ ಮಾತನಾಡಿ, ನಿನ್ನೆ ತಾನೇ ನಮ್ಮ ಮನೆಯವರಿಗೆ ನಾಯಿ ಕಚ್ಚಿದೆ. ಆರೋಗ್ಯ ನಿರೀಕ್ಷಕರಿಗೆ ಹೇಳಿದರೆ, ನಾಯಿ ಹಿಡಿದರೆ ಪೈನ್ ಹಾಕುತ್ತಾರೆ ಎಂದು ಭಯ ಪಡುತ್ತಾರೆ ಎಂದರು. ಆಯುಕ್ತ ರೇಣುಕಾ ಮಾತನಾಡಿ, ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಬಿಟ್ಟರೆ ಬೇರೆ ಅವಕಾಶಗಳಿಲ್ಲ ಎಂದರು.
ಬೆಸ್ಕಾಂ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತರಿಂದ ತರಾಟೆ
ಕೊಂಬೆಗಳನ್ನು ಕಡಿದು ಹಾಗೆ ಬಿಟ್ಟು ಹೋದ್ರೆ ಅದಕ್ಕೆ ಪಾಲಿಕೆ ಹೊಣೆಯೇ? ಎಂದು ಬೆಸ್ಕಾಂ ಎಂಜಿನಿಯರ್ಗಳನ್ನು ಆಯುಕ್ತರಾದ ರೇಣುಕಾ ತರಾಟೆಗೆ ತೆಗೆದುಕೊಂಡರು.
ಹದಡಿ ರಸ್ತೆಯಲ್ಲಿ ಕೊಂಬೆ ಕಡಿದು ಹಾಗೆಯೇ ಬಿಟ್ಟು ಹೋಗಿದ್ದನ್ನು ನಾನು ನೋಡಿದ್ದೇನೆ. ನೀವು ಮರ ಕಡಿದು ಹೋದರೆ ನೀವೇ ತುಂಬಿ ಸಾಗಿಸಬೇಕು. ಈ ಕುರಿತು ಬೆಸ್ಕಾಂ ಮುಖ್ಯ ಇಂಜಿನಿಯರ್ಗೆ ಪತ್ರ ಬರೆಯುವುದಾಗಿ ಹೇಳಿದರು. ಸೋಗಿ ಶಾಂತಕುಮಾರ್, ನಗರದ ಸುಮಾರು 15 ಕಂಬಗಳಲ್ಲಿ ಕಬ್ಬಿಣ ಹೊರ ಬಂದು ಅಪಾಯಕಾರಿ ಸ್ಥಿತಿಯಲ್ಲಿವೆ. ಅಂತವನ್ನು ಗುರುತಿಸಿ ಬದಲಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಖಾಸಗಿ ಬಸ್ ನಿಲ್ದಾಣದ ಹೆಸರು ಬದಲು: ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು
ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲು 2005-06ನೇ ಸಾಲಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ, ಠರಾವು ಹೊರಡಿಸಲಾಗಿದೆ. ಸರ್ಕಾರದ ಆದೇಶವೂ ಆಗಿದೆ. ಆದರೆ ನವೀಕರಣದ ನಂತರ ಅದಕ್ಕೆ ಬೇರೆ ಹೆಸರಿಡಲು ಉದ್ದೇಶಿಸಲಾಗಿದೆ.
ಶಿವಶಂಕರಪ್ಪನವರು ಹಿರಿಯ ಮುತ್ಸದ್ದಿಯಾಗಿದ್ದು, ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಬೇಕಾದರೆ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ನಿಮಗೆ ಬೇಕಾದವರ ಹೆಸರು ಇಟ್ಟುಕೊಳ್ಳಿ ಎಂದು ಎ.ನಾಗರಾಜ್ ಹೇಳಿದರು.
ಬಿ.ಜಿ ಅಜಯ್ ಕುಮಾರ್, ಈಗಾಗಲೇ ಗಲ್ಲಿ ಗಲ್ಲಿಗೂ ಶಿವಶಂಕರಪ್ಪನವರ ಹೆಸರಿಡಲಾಗಿದೆ. ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಒಂದು ವಾರ ಕಾಲಾವಕಾಶ ಕೊಡಿ, ಸರ್ಕಾರಿ ಆದೇಶ ತೋರಿಸುತ್ತೇನೆ. ದಾಖಲೆ ಪರಿಶೀಲಿಸಿ, ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಿ. ದ್ವೇಷದ ರಾಜಕಾರಣ ಮಾಡಬೇಡಿ ಎಂದರು.
ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ಅಜಯ್ ಕುಮಾರ್, ಕೆ.ಎಂ. ವೀರೇಶ್ ಸೇರಿದಂತೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ವಿಷಯ ಸ್ಥಿರೀಕರಣಕ್ಕೆ ಒತ್ತಾಯಿಸಿದರು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಮೇಯರ್ ಮುಂಭಾಗ ನಿಂತು 2005ರ ಆದೇಶ ಪಾಲಿಸಬೇಕು. ಠರಾವು ಗೌರವಿಸದ ಆಡಳಿತ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಯಾಗಿ ಜೀವಂತ ಇದ್ದವರ ಹೆಸರು ಬೇಡ. ಕಾನೂನು ಗಾಳಿಗೆ ತೂರಿದ ವಿಪಕ್ಷಕ್ಕೆ ಧಿಕ್ಕಾರ ಎಂದು ಬಿಜೆಪಿಯವರು ಘೋಷಣೆ ಕೂಗಿದರು. ಸಾಮಾನ್ಯ ಸಭೆ ಪ್ರತಿಭಟನಾ ವೇದಿಕೆಯಾಗಿ ಮಾರ್ಪಟ್ಟಿತ್ತು.
ಶಿವಪಾರ್ವತಿ ಬಡಾವಣೆ ಹೆಸರು ಬದಲಾವಣೆಗೆ ಮತ್ತೆ ವಿರೋಧ
ಶಿವಪಾರ್ವತಿ ಬಡಾವಣೆ ಹೆಸರನ್ನು ಜಿ.ಮಲ್ಲಿಕಾರ್ಜುನಪ್ಪ ಬಡಾವಣೆ ಎಂದು ಬದಲಿಸಿದರೆ ಅಲ್ಲಿನ ನಾಗರಿಕರಿಗೆ ತೊಂದರೆಯಾ ಗುತ್ತಿದ್ದು, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವಂತೆ ಎ.ನಾಗರಾಜ್ ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಅಜಯ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿ, ಹೆಸರು ಬದಲಾವಣೆಗೆ ಕಾನೂನು ರೀತಿ ಏನು ಮಾಡಬೇಕೋ ಆ ಎಲ್ಲಾ ಹಂತಗಳನ್ನು ಪೂರೈಸಿಯೇ ವಿಷಯ ಸ್ಥಿರೀಕರಣಕ್ಕೆ ಇಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಈ ಕುರಿತು ಮತ್ತೆ ಮಾತಿನ ಚಕಮಕಿ ಆರಂಭವಾಯಿತು. ಕಾಂಗ್ರೆಸ್ ಸದಸ್ಯರನ್ನು ಕೆಣಕಿದ ಬಿ.ಜಿ. ಅಜಯ್ ಕುಮಾರ್, ಜೀವಂತ ಇರುವವರ ಹೆಸರನ್ನು ಸಾರ್ವಜನಿಕ ಆಸ್ತಿಗೆ ಇಡಬಾರದೆಂದಿದೆ. ಆದರೆ ಪಾಲಿಕೆ ಸಭಾಂಗಣಕ್ಕೆ ಶಾಮನೂರು ಶಿವಶಂಕರಪ್ಪ ಅವರ ಹೆಸರಿಟ್ಟಿಲ್ಲವೇ? ಎಂದರು.
ಶಿವಶಂಕರಪ್ಪ ಅವರಿಗೆ ಅವರದ್ದೇ ಆದ ವರ್ಚಸ್ಸಿದೆ. ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಎ.ನಾಗರಾಜ್ ಸಮರ್ಥಿಸಿಕೊಂಡರು. ಸದಸ್ಯ ಕೆ.ಪ್ರಸನ್ನಕುಮಾರ್, ಈ ವಿಷಯ ಪ್ರತಿ ಮೀಟಿಂಗ್ನಲ್ಲೂ ಚರ್ಚೆಯಾಗುತ್ತಿದೆ. ಈ ಬಾರಿ ಸಮಯ ವ್ಯರ್ಥ ಮಾಡುವುದು ಬೇಡ. ಜಿ.ಮಲ್ಲಿಕಾರ್ಜುನಪ್ಪ ಹೆಸರಿಡಲು ಕಾಂಗ್ರೆಸ್ ವಿರೋಧವಿದ್ದರೆ ಅವರೂ ಕಾನೂನಾತ್ಮಕ ಹೋರಾಟ ನಡೆಸಲಿ ಅಥವಾ ಸರ್ಕಾರಕ್ಕೆ ಪತ್ರ ಬರೆಯಲಿ ಎಂದರು.
ಆಯುಕ್ತೆ ರೇಣುಕಾ, ಒಂದು ಬಾರಿ ಸರ್ಕಾರಿ ಆದೇಶವಾದರೆ, ಮತ್ತೆ ಸ್ಥಳಕ್ಕೆ ಹೋಗಲು ಬರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ಎಸ್ಸೆಸ್ಗೆ ಕಳಂಕ ತಂದವರೇ ಇವರು
ಜೀವಂತ ಇರುವ ವ್ಯಕ್ತಿಯ ಹೆಸರನ್ನು ಇಡಬಾರದೆಂಬ ಕಾನೂನಿನ ನಡುವೆಯೂ ಎಲ್ಲೆಡೆ ಅವರ ಹೆಸರನ್ನಿಟ್ಟು ಅವರ ಹೆಸರಿಗೆ ಕಳಂಕ ತರುವುದೇ ಇವರು ಎಂದು ಬಿ.ಜಿ ಅಜಯ್ ಕುಮಾರ್ ಕಾಂಗ್ರೆಸ್ ಸದಸ್ಯರಿಗೆ ಕುಟುಕಿದರು.ಶಿವಶಂಕರಪ್ಪ ನವರಿಗೆ ರವೀಂದ್ರನಾಥ್ ಅವರು ಕಾಲು ಮುಟ್ಟಿ ನಮಸ್ಕರಿಸಿ ದ್ದಾರೆ. ಅಂತಹ ಸಂಸ್ಕೃತಿ ನಮ್ಮದು ಎಂದಾಗ, ಶಿವಶಂಕರಪ್ಪನವರು ಪ್ರಶ್ನಾತೀತ ವ್ಯಕ್ತಿ. ಮುಖ್ಯಮಂತ್ರಿಗಳೇ ಅವರಿಗೆ ನಮಸ್ಕರಿಸುತ್ತಾರೆ ಎಂದರು.
3 ಸಾವಿರ ಲೈಟ್ಗಳಿಗೆ ಪ್ರಸ್ತಾವನೆ: ರೇಣುಕಾ
2 ಕೋಟಿ ರೂ ವೆಚ್ಚದಲ್ಲಿ 3 ಸಾವಿರ ಲೈಟ್ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ಸದಸ್ಯರು ಲೈಟ್ಗಳ ಬಗ್ಗೆ ಪ್ರಸ್ತಾಪಿಸಿದಾಗ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳು ಪ್ರಸ್ತಾವನೆಗೆ ಸಹಿ ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಲೈಟ್ಗಳ ಅಳವಡಿಕೆಗೆ ಕ್ರಮ ವಹಿಸಲಾಗು ವುದು ಎಂದರು. ಗಡಿಗುಡಾಳ್ ಮಂಜುನಾಥ್, ಲೈಟ್ಗಳ ಗುಣಮಟ್ಟ ಪರೀಕ್ಷಿಸುವಂತೆ ಹೇಳಿದರು. ಎಸ್.ಟಿ. ವೀರೇಶ್, ನಿರ್ವಹಣೆ ಬಗ್ಗೆ ದೂರುಗಳು ಹೆಚ್ಚಾಗಿದ್ದು, ಸರಿಯಾಗಿ ಸ್ಪಂದಿ ಸುತ್ತಿಲ್ಲ. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡುವಂತೆ ಹೇಳಿದರು.
ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ: ಚಮನ್ ಸಲಹೆ
1978-79ರಲ್ಲಿ ಪಂಪಾಪತಿಯವರ ಅಧಿಕಾರವಧಿಯಲ್ಲಿ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸಿದ್ದ 18 ಅಧಿಕಾರಿಗಳನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿದ್ದರು. ಆಗ ಎಚ್ಚೆತ್ತ ಅಧಿಕಾರಿಗಳು ನಿಷ್ಠೆ ಯಿಂದ ಕೆಲಸ ಮಾಡುತ್ತಿದ್ದರು. ಹಾಗೆಯೇ ನೀವೂ ಸಹ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ವರ್ಗಾಯಿಸಿ. ಇತಿಹಾಸ ಮರುಕಳಿ ಸುವಂತೆ ಮಾಡಿ ಎಂದು ಹಿರಿಯ ಸದಸ್ಯ ಕೆ.ಚಮನ್ ಸಾಬ್ ಅವರು ಆಯುಕ್ತರಾದ ರೇಣುಕಾ ಅವರನ್ನುದ್ದೇಶಿಸಿ ಹೇಳಿದರು.
ಕೊನೆಗೂ ಸದಸ್ಯರ ಒತ್ತಡಕ್ಕೆ ಮಣಿದು ಸಮಸ್ಯೆಗೆಳ ಚರ್ಚೆಗೆ ಅನುಮತಿ ನೀಡಲಾಯಿತು. ಯುಜಿಡಿ ಓಪನ್ ಆಗಿ ಚರಂಡಿಗೆ ನೀರು ಹರಿಯುತ್ತಿದೆ ಎಂಬ ಉಮಾ ಪ್ರಕಾಶ್ ಅವರ ದೂರಿಗೆ 33ನೇ ವಾರ್ಡ್ ಸದಸ್ಯ ಕೆ.ಎಂ. ವೀರೇಶ್ ಸಹ ದನಿಗೂಡಿಸಿದರು.
ಸದಸ್ಯೆ ಮೀನಾಕ್ಷಿ ಜಗದೀಶ್, ಯುಜಿಡಿ ರಿಪೇರಿಗೆ ವಯಸ್ಸಾದವರೇ ನೇಮಕವಾಗಿದ್ದು, ಅವರಿಂದ ಕೆಲಸ ಮಾಡಲಾಗುತ್ತಿಲ್ಲ. ಜಲಸಿರಿ ಯೋಜನೆಯಡಿ ಗುಂಡಿಗಳನ್ನು ತೆಗೆದು ಹಾಗೆ ಬಿಡಲಾಗಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದರು. ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್ ಈ ವಿಷಯಕ್ಕೆ ದನಿಗೂಡಿಸಿ, ಜಲಸಿರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಯುಕ್ತರಾದ ರೇಣುಕಾ, ಜಲಸಿರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ ನಿಗದಿಪಡಿಸಿ ಸಭೆ ಕರೆಯೋಣ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಕೆಲಸ ಮುಗಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಮೂರು ಮನೆಗಳಿಗೆ ಒಂದು ನಲ್ಲಿ ಸಂಪರ್ಕವಿರುತ್ತದೆ. ಜಲಸಿರಿ ಯೋಜನೆಯಡಿ ಮೂರೂ ಮನೆಗಳಿಗೆ ಸಂಪರ್ಕ ಕೊಡಿ ಎಂದರೆ ಕಂದಾಯ ಕಟ್ಟಿರುವ ರಶೀದಿ ತನ್ನಿ ಎನ್ನುತ್ತೀರಿ. ನಲ್ಲಿ ಸಂಪರ್ಕ ಕೊಡದಿದ್ದರೆ ಪಾಲಿಕೆಗೆ ನಷ್ಟವಲ್ಲವೇ? ಎಂದು ಅಬ್ದುಲ್ ಲತೀಫ್ ಪ್ರಶ್ನಿಸಿದರು. ಎಂಜಿನಿಯರ್ ರವಿ ಮಾತನಾಡಿ, ಈ ರೀತಿ ನಲ್ಲಿ ಸಂಪರ್ಕಬೇಕಾದ ಮನೆಗಳ ಸರ್ವೇ ಮಾಡಿಸಲಾಗುವುದು ಎಂದರು.
ಎ.ನಾಗರಾಜ್, ಕಳೆದ ಆರು ತಿಂಗಳಿನಿಂದ ಒಂದೂ ಟೆಂಡರ್ ಕರೆದಿಲ್ಲ. ಯುಜಿಡಿ ಸಮಸ್ಯೆ ಹೆಚ್ಚಾಗಿದೆ. ಶೀಘ್ರ ಟೆಂಡರ್ ಕರೆದು ಸರಿಪಡಿಸಿ ಎಂದರು.
ಪಾಲಿಕೆಯ 340 ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ಕಳೆದ 25 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಆದ್ಯತೆ ನೀಡುವಂತೆ ಎ.ನಾಗರಾಜ್ ಹೇಳಿದರು.
ಸೋಗಿ ಶಾಂತಕುಮಾರ್ ಮರು ಹರಾಜು ಸೂಕ್ತ ಎಂದು ಹೇಳಿದರು. ಚಮನ್ ಸಾಬ್, ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ನಷ್ಟವಾಗಿದ್ದು, ರಿಯಾಯಿತಿ ಕೊಡಿ ಎಂದರು. ಎಸ್.ಟಿ. ವೀರೇಶ್, ಅನೇಕರು ಮಳಿಗೆ ಪಡೆದು ಹೆಚ್ಚಿನ ಹಣಕ್ಕೆ ಸಬ್ ಲೀಸ್ ನೀಡಿದ್ದಾರೆ. ಅದಕ್ಕೆ ಕಡಿವಾಣ ಹಾಕಲಿ ಎಂದರು.
ಫ್ಲೆಕ್ಸ್ ಕಡಿವಾಣಕ್ಕೆ ಒತ್ತಾಯ: ಸದಸ್ಯ ಎ.ನಾಗರಾಜ್, ಊರು ತುಂಬೆಲ್ಲಾ ಫ್ಲೆಕ್ಸ್ಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವಂತೆ ಕೋರಿದರು. ಎಸ್.ಟಿ. ವೀರೇಶ್ ದನಿಗೂಡಿಸಿ, ಈ ಕುರಿತು ಗಂಭೀರ ಚರ್ಚೆಯಾಗಲಿ ಎಂದರು.
ಆಯುಕ್ತೆ ರೇಣುಕಾ, ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಕೆಯಿಂದ ಅಪಘಾತಗಳು ಹೆಚ್ಚಾಗು ತ್ತಿವೆ. ಆದ್ದರಿಂದ ಪ್ರತ್ಯೇಕ ಸಭೆ ಕರೆದು ಪ್ರತ್ಯೇಕ ಮಾರ್ಗಸೂಚಿ ತಯಾರಿಸೋಣ ಎಂದರು.
ಇ-ಆಸ್ತಿ ಸರಳೀಕರಣಕ್ಕೆ ಮನವಿ: ಇ-ಆಸ್ತಿ ಮಾಡಿಸುವ ಬಗೆಯನ್ನು ಸರಳೀಕರಣ ಮಾಡು ವಂತೆಯೂ, ವಲಯ ಅಧಿಕಾರಿಗಳಿಗೆ ಕಡಿವಾಣ ಹಾಕುವಂತೆಯೂ ಎ.ನಾಗರಾಜ್ ಹೇಳಿದರು.
ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಇ-ಸ್ವತ್ತು ಮಾಡಲು ಅಧಿಕಾರಿಗಳಿಗೆ ಗಡುವು ನೀಡುವುದು ಉತ್ತಮ ಎಂದರು.
ಆಯುಕ್ತೆ ರೇಣುಕಾ, ಈಗಾಗಲೇ 15 ಕಂಪ್ಯೂಟರ್ ಹಾಗೂ 15 ಜನ ಆಪರೇಟರ್ಗಳನ್ನು ನೇಮಿಸಿದ್ದು, ಲಾಗಿನ್ ಸಮಸ್ಯೆ ಪರಿಹರಿಸಿಕೊಂಡು ಶೀಘ್ರವೇ ಮುಗಿಸುವುದಾಗಿ ಹೇಳಿದರು.
ಮರ ಕಡಿತಲೆಗೆ ಪರವಾನಗಿ ನೀಡಲು ನಿರ್ಲಕ್ಷ್ಯ: ಮರ ಕಡಿಯಲು ಅರಣ್ಯ ಇಲಾಖೆ ಯವರು ವರ್ಷವಾದರೂ ಪರವಾನಗಿ ನೀಡು ವುದಿಲ್ಲ ಎಂದು ಗಡಿ ಗುಡಾಳ್ ಮಂಜುನಾಥ್ ಆರೋಪಿಸಿದರು. ಮಾಜಿ ಮೇಯರ್ ಅಜಯ್ ಕುಮಾರ್ ದನಿಗೂಡಿಸಿ, 6 ತಿಂಗಳಾ ದರೂ ಒಂದು ಮರ ತೆಗೆಸಲು ಸಾಧ್ಯವಾಗಿಲ್ಲ. ಜನ ನಮ್ಮನ್ನು ಕೇಳುತ್ತಿದ್ದಾರೆ ಎಂದರು.
ಈ ಹಿಂದೆ ಪಾಲಿಕೆಯಿಂದಲೇ ಹರಾಜು ಮೂಲಕ ಮರ ಕಡಿಯಲು ಅನುಮತಿ ನೀಡಲಾಗುತ್ತಿತ್ತು. 2 ವರ್ಷ ಪಾಲಿಕೆಯಿಂದ ಹರಾಜಿನ ಹಣ ನೀಡದ ಕಾರಣ ಆಡಿಟ್ ವೇಳೆ ಸಮಸ್ಯೆಯಾಗಿತ್ತು. ಆಗ ಮತ್ತೆ ಅರಣ್ಯ ಇಲಾಖೆಯೇ ಅನುಮತಿ ನೀಡುವಂತಾಗಿತ್ತು ಎಂದರು. ಮರದಿಂದ ಸಿಗುವ ಆದಾಯ ಕಡಿಮೆ, ಖರ್ಚು ಹೆಚ್ಚು. ಈ ಹಿನ್ನೆಲೆಯಲ್ಲಿ ಟೆಂಡರ್ನಲ್ಲಿ ಯಾರೂ ಭಾಗವಹಿಸುತ್ತಿಲ್ಲ ಎಂದರು.
ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪ ಮೇಯರ್ ಗಾಯತ್ರಿ ಬಾಯಿ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.