ಮಲೇಬೆನ್ನೂರು, ಫೆ.8- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ ಬೆಳಿಗ್ಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಲಂಕೇಶ್ ಅವರು ವಾಲ್ಮೀಕಿ ಧ್ವಜಾರೋಹಣ ಮಾಡುವ ಮೂಲಕ 5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಮಠದ ಧರ್ಮದರ್ಶಿಗಳು, ಭಕ್ತರು ಹಾಜರಿದ್ದರು. ಇದಕ್ಕೂ ಮುನ್ನ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಶ್ರೀಗಳ ಗದ್ದಿಗೆಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
ಸಂಭ್ರಮದ ಮೆರವಣಿಗೆ : ರಾಜನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀ ಮಠದವರೆಗೆ ವಾಲ್ಮೀಕಿ ಪುತ್ಥಳಿಯ ಮೆರವಣಿಗೆ ಸಂಭ್ರಮದಿಂದ ಜರುಗಿತು.
ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಗಮನ ಸೆಳೆದರು. ವಿವಿಧ ಕಲಾ-ಮೇಳಗಳು ಮೆರವಣಿಗೆಗೆ ಮೆರಗು ತಂದವು.
ಉದ್ಯೋಗ ಮೇಳ : ಮಠದ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಶ್ರೀಗಳು ಉದ್ಘಾಟಿಸಿದರು. ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಯುವಕರನ್ನು ಸಂದರ್ಶಿಸಿದವು.
ವಸ್ತು ಪ್ರದರ್ಶನ : ಪ್ರಮುಖವಾಗಿ ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನು ತಿಳಿಯಪಡಿಸುವ ವಸ್ತುಪ್ರದರ್ಶನವನ್ನು ಶ್ರೀಗಳ ಸಮ್ಮುಖದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸಿದರು.
ದಿ. ಅಲ್ಲಿಪುರದ ಹನುಮಂತಪ್ಪ ವೇದಿಕೆಯಲ್ಲಿ ಮಹಿಳಾ ಗೋಷ್ಠಿ, ಪ್ರತಿಭಾ ಪುರಸ್ಕಾರ, ಉದ್ಯೋಗ ಮೇಳ ಕುರಿತಾದ ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳಿಗೆ ಸನ್ಮಾನ ಮತ್ತು ನಾಯಕ ಹಾಗೂ ಅರಸು ಮನೆತನದವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಮಧ್ಯಾಹ್ನದ ನಂತರ ರೈತ ಗೋಷ್ಠಿಯಲ್ಲಿ ರೈತರ ಹೋರಾಟಗಾರರನ್ನು ಗೌರವಿಸಲಾಯಿತು. ಸಂಜೆ ಬುಡಕಟ್ಟು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಬುಡಕಟ್ಟು ಜನರ ಜೀವನ, ಕಲೆ ಹಾಗೂ ಸಂಸ್ಕೃತಿಯನ್ನು ಪ್ರಾಧ್ಯಾಪಕ ಡಾ. ಎಸ್.ಎಂ. ಮುತ್ತಯ್ಯ ಮತ್ತು ದೊರೆಸೂರ ನಾಯಕ ಅವರು ಅನಾವರಣಗೊಳಿಸಿದರು. ಈ ವೇಳೆ ಬುಡಕಟ್ಟು ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ದಿನವಿಡೀ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ನೃತ್ಯ, ಶಾಸ್ತ್ರೀಯ ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದವು.
ರಾತ್ರಿ ಹಾಸನದ ಶ್ರೀ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದವರಿಂದ ವಾಲ್ಮೀಕಿ ವಿರಚಿತ `ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನಗೊಂಡಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಹ್ವಾನಿತ ಸಚಿವ, ಸಂಸದರು, ಶಾಸಕರೊಂದಿಗೆ ಜಾತ್ರಾ ಸಮಿತಿಯ ಅಧ್ಯಕ್ಷರಾದ ಶಾಸಕ ಎಸ್.ವಿ. ರಾಮಚಂದ್ರ, ಜಾತ್ರಾ ಸಮಿತಿ ಸಂಚಾಲಕ ಕೆ.ಪಿ. ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ ಹಾಗೂ ಮಠದ ಧರ್ಮದರ್ಶಿಗಳು, ಸಮಾಜದ ಮುಖಂಡರು ಹಾಜರಿದ್ದರು.
ಬೃಹತ್ ಹಾರ : ಗುರುವಾರ ಲೋಕಾರ್ಪಣೆಗೊಳ್ಳಲಿರುವ ನೂತನ ರಥಕ್ಕೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ತಯಾರು ಮಾಡಿಸಿದ್ದ 60 ಅಡಿ ಎತ್ತರದ ಬೃಹತ್ ಹೂವಿನ ಹಾರವನ್ನು ರಾಜನಹಳ್ಳಿ ಮತ್ತು ಕಾಗಿನೆಲೆ ಶ್ರೀಗಳ ಸಮ್ಮುಖದಲ್ಲಿ ಹಾಕಿದ್ದು ಬಹಳ ವಿಶೇಷವಾಗಿತ್ತು.