ದೇಶ ಬೆಳೆದರೂ ಪ್ರತಿನಿಧಿಗಳ ಸಂಖ್ಯೆ ಸ್ಥಗಿತ

ದೇಶ ಬೆಳೆದರೂ ಪ್ರತಿನಿಧಿಗಳ ಸಂಖ್ಯೆ ಸ್ಥಗಿತ

ಭಾರತ ಪ್ರಜಾಪ್ರಭುತ್ವದ ದೇಶ. ದೇಶವನ್ನು ಆಳುವ ಶಾಸನ ಸಭೆಗಳು ಜನರನ್ನು ಪ್ರತಿನಿಧಿಸುವ ಸ್ವರೂಪದಲ್ಲಿರಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಆದರೆ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳು ಜನರನ್ನು ಪ್ರತಿನಿಧಿಸುವ ಹಾಗೂ ಜನರ ಆಶಯಗಳಿಗೆ ಸ್ಪಂದಿಸುವ ರೀತಿಯಲ್ಲಿವೆಯೇ?

ಕನಿಷ್ಠ ಪಕ್ಷ ಕ್ಷೇತ್ರ ಪುನರ್‌ವಿಂಗಡಣೆಯ ವಿಚಾರದಲ್ಲಂತೂ ಈ ಬಗ್ಗೆ ಸಮಸ್ಯೆಗಳಿವೆ. ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರವಾದ ಆಂಧ್ರ ಪ್ರದೇಶದ ಮಲ್ಕಾಜ್‌ಗಿರಿ 31.50 ಲಕ್ಷ ಮತದಾರರನ್ನು ಹೊಂದಿದೆ. ಲಕ್ಷದ್ವೀಪ ಲೋಕಸಭಾ ಕ್ಷೇತ್ರ ಅತಿ ಸಣ್ಣ ಕ್ಷೇತ್ರವಾಗಿದ್ದು, ಇಲ್ಲಿ ಕೇವಲ 49,922 ಮತದಾರರಿದ್ದಾರೆ. 2019ರ ಚುನಾವಣೆಯಲ್ಲಿ ಲಕ್ಷದ್ವೀಪದಲ್ಲಿ ಗೆದ್ದ ಅಭ್ಯರ್ಥಿ ಪಡೆದ ಮತಗಳು ಕೇವಲ 22,851. ಮತ್ತೊಂದೆಡೆ ಮಲ್ಕಾಜ್‌ಗಿರಿಯಲ್ಲಿ ಗೆದ್ದ ಅಭ್ಯರ್ಥಿ ಪಡೆದ ಮತಗಳು ಬರೋಬ್ಬರಿ 6,03,748! 

2014ರಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ದೇಶದ ಮೊದಲ ಐದು ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆ 1.16 ಕೋಟಿ. ಮತ್ತೊಂದೆಡೆ ದೇಶದ ಐದು ಅತಿ ಸಣ್ಣ ಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆ ಕೇವಲ 7.56 ಲಕ್ಷ. ದೇಶದ ಅತಿ ದೊಡ್ಡ ಹಾಗೂ ಅತಿ ಸಣ್ಣ ಐದು ಕ್ಷೇತ್ರಗಳ ನಡುವಿನ ಅಂತರ 15.4 ಪಟ್ಟು ಹೆಚ್ಚಾಗಿದೆ.

 

1951ರಲ್ಲಿ ದೇಶದ 36 ಕೋಟಿ ಜನರಿಗೆ 499 ಸಂಸದರಿದ್ದರು. ಅಂದರೆ ಪ್ರತಿ 7.23 ಲಕ್ಷ ಜನರಿಗೆ ಒಬ್ಬರು ಸಂಸದರಿದ್ದರು. 2011ಕ್ಕೆ ಬರುವ ವೇಳೆಗೆ 121 ಕೋಟಿ ಜನರಿಗೆ 545 ಸಂಸದರಿದ್ದಾರೆ. ಅದರೆ, ಈಗ 22.20 ಲಕ್ಷ ಜನರಿಗೆ ಒಬ್ಬರು ಸಂಸದರಿದ್ದಾರೆ. 2022ರಲ್ಲಿ ಭಾರತದಲ್ಲಿ 140 ಕೋಟಿ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂದರೆ, 25.87 ಲಕ್ಷ ಜನರಿಗೆ ಒಬ್ಬ ಸಂಸದ ಎಂದಾಗುತ್ತದೆ.

ಆರಂಭದ ವರ್ಷಗಳಲ್ಲಿ ಈ ಸಮಸ್ಯೆ ಇರಲಿಲ್ಲ. ಜನಸಂಖ್ಯೆ ಏರಿದಂತೆ ಕ್ಷೇತ್ರಗಳ ಸಂಖ್ಯೆ ಏರುತ್ತಿತ್ತು. 1951ರಲ್ಲಿ ಭಾರತದ ಸಂಸದರ ಸಂಖ್ಯೆ 499 ಆಗಿತ್ತು. 1961ರಲ್ಲಿ 522 ಹಾಗೂ 1971ರಲ್ಲಿ 543ಕ್ಕೆ ಏರಿಕೆಯಾಯಿತು. ಇವರ ಜೊತೆಗೆ ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನೇಮಕ ಮಾಡಲಾಗುತ್ತದೆ.

ಆದರೆ, ಈ ಅವಧಿಯಲ್ಲಿ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಸ್ಫೋಟವಾಯಿತು. ಈ ಕಾರಣಕ್ಕಾಗಿ ಆ ರಾಜ್ಯಗಳಲ್ಲಿ ಸಂಸದರ ಸಂಖ್ಯೆ ವೇಗವಾಗಿ ಏರುತ್ತಾ ಸಾಗಿತು. ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಿಸಿದ ಕಾರಣ ಪ್ರಾತಿನಿಧ್ಯ ಕುಂಠಿತವಾಯಿತು. ಈ ಕಾರಣಕ್ಕಾಗಿ 1976ರಲ್ಲಿ ಕ್ಷೇತ್ರಗಳ ಹೆಚ್ಚಳಕ್ಕೆ ತಡೆ ಹಾಕಲಾಯಿತು.

2002ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಇತ್ತೀಚಿನದ್ದು. ಆಗ ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಮುಂದಿನ ಕ್ಷೇತ್ರಗಳ ಪುನರ್‌ವಿಂಗಡಣೆ 2026ರಲ್ಲಿ ನಡೆಯಲಿದೆ. ಇದಕ್ಕೆ 2021ರ ಜನಸಂಖ್ಯೆ ಆಧಾರ ಮಾಡಿಕೊಳ್ಳಬಹುದು ಎಂದು ತಿಳಿಸಿತು.

ಮುಂದೆ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾದ ರಾಜ್ಯಗಳಿಗೆ `ಬಹುಮಾನ’ ನೀಡುವ ಹಾಗೂ ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಬರೆ ಹಾಕಲಾಗುವುದೇ? ಅಥವಾ ಜನಸಂಖ್ಯೆ ಆಧಾರದ ಮೇಲೆ ಪ್ರಾತಿನಿಧ್ಯದಲ್ಲಿ ಆಗುತ್ತಿರುವ ವ್ಯತ್ಯಾಸ ನಿಲ್ಲಲಿದೆಯೇ? ಎಂಬ ಪ್ರಶ್ನೆಗೆ ಕಾಲ ಉತ್ತರಿಸಬೇಕಿದೆ.


ಜಿ.ಎನ್. ಕಾಮತ್

Click here to change this text

error: Content is protected !!