ಸುಂಕದಕಟ್ಟೆ ಗ್ರಾಮದ ದೇವಸ್ಥಾನದ ರಾಜಗೋಪುರದ ಕಳಸಾರೋಹಣದಲ್ಲಿ ಕುಂಚಿಟಿಗ ಶ್ರೀ
ಹೊನ್ನಾಳಿ, ಫೆ.2- ದೇವಸ್ಥಾನ ಗಳು ಮೌಢ್ಯ, ಕಂದಾಚಾರಗಳನ್ನು ಬಿತ್ತಬಾರದು. ಜನರಲ್ಲಿ ವೈಚಾರಿಕತೆ ಬೆಳೆಸುವಂತಾಗಬೇಕು. ಸಾಂಸ್ಕೃತಿಕ ವಾತಾವರಣ ಇರಬೇಕು ಎಂದು ಹೊಸದುರ್ಗದ ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ. ಶಾಂತವೀರ ಸ್ವಾಮೀಜಿ ಹೇಳಿದರು.
ಗುರುವಾರ ತಾಲ್ಲೂಕಿನ ಸುಂಕ ದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವ ಸ್ಥಾನದ ರಾಜ ಗೋಪುರದ ಕಳಸಾ ರೋಹಣ ಕಾರ್ಯಕ್ರಮ ನೆರವೇರಿಸಿ, ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅದೇ ಸಾರ್ಥಕತೆ. ದೇವಸ್ಥಾನಗಳ ಕಳಸಗಳು ಹೇಗೆ ಮೆರುಗು ನೀಡುತ್ತವೋ ಅದೇ ರೀತಿ ಮನೆಯಲ್ಲಿ ಉತ್ತಮ ಶಿಕ್ಷಣ ಪಡೆದ ಓರ್ವ ವ್ಯಕ್ತಿ ಇಡೀ ಮನೆತನಕ್ಕೆ ಬೆಳಕಾ ಗುತ್ತಾನೆ. ದೇವಸ್ಥಾನದ ರಾಜಗೋಪುರದ ಕಳಸದಂತೆ ಕುಟುಂಬಕ್ಕೆ ಮೆರುಗು ನೀಡುತ್ತಾನೆ. ಆದ್ದರಿಂದ, ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ದೇವಸ್ಥಾನದಲ್ಲಿ ಜಾತಿ, ಪಂಗಡ ಬಂದರೆ ನೀತಿ ಮಾಯವಾಗುತ್ತದೆ. ದೇವರಿಗೆ ಯಾವುದೇ ಭೇದವಿಲ್ಲ. ಮೇಲು ಜಾತಿ, ಕೀಳು ಜಾತಿ ಎಂಬ ಭೇದ-ಭಾವವನ್ನು ಮನುಷ್ಯರು ಸೃಷ್ಟಿಸಿಕೊಂಡಿದ್ದಾರೆ. ಇದು ಸಲ್ಲ, ಸಮಾಜದಲ್ಲಿ ಜ್ಯೋತಿಯನ್ನು ಬೆಳಗಿಸಬೇಕು. ಜಾತಿಯ ಕಿಡಿ ಹೊತ್ತಿಸಬಾರದು. ನಮ್ಮ ಆಲೋಚನೆಗಳು ಜನಪರ, ಜೀವಪರ, ಬಡವರ ಪರ ಇರಬೇಕು ಎಂದು ಹೇಳಿದರು.
ನಮ್ಮಲ್ಲಿ ಇನ್ನೂ ಎಷ್ಟೋ ಮನೆಗಳಲ್ಲಿ ಶೌಚಾಲಯ, ಸ್ನಾನದ ಮನೆಗಳಂಥ ಮೂಲಭೂತ ಸೌಕರ್ಯಗಳಿಲ್ಲ. ಆದರೆ, ನಮ್ಮ ಜನರು ದೇವಸ್ಥಾನಗಳಿಗೆ ಸಾಲ ಮಾಡಿಯಾದರೂ ದೇಣಿಗೆ ನೀಡುತ್ತಾರೆ. ಇದು ಅವರ ಒಳ್ಳೆಯ ತನದ ಸಂಕೇತ. ನಮ್ಮ ಮನೆತನಕ್ಕೆ, ನಮ್ಮ ಮಕ್ಕಳಿಗೆ ಒಳಿತಾದರೆ ಸಾಕು ಎನ್ನುವ ನಿರೀಕ್ಷೆಯಿಂದ ಹೀಗೆ ದೇವರ ಕಾರ್ಯಗಳಿಗೆ ಹಣ ನೀಡುತ್ತಾರೆ. ಅದೇ ರೀತಿ, ತಮ್ಮ ಮನೆಗಳಲ್ಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶ್ರದ್ಧೆ ವಹಿಸಬೇಕು. ಎಲ್ಲರೂ ಪ್ರತಿ ಮನೆಯಲ್ಲಿ ನೈರ್ಮಲ್ಯಯುಕ್ತವಾದ ಶೌಚಾಲಯ ಹಾಗೂ ಸ್ನಾನದ ಮನೆಗಳನ್ನು ನಿರ್ಮಿಸಿಕೊಂಡು, ತಪ್ಪದೇ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಎಸ್.ಆರ್. ಹನುಮಂತಪ್ಪ ರಚಿಸಿದ “ಮನಸು ಮಹಿಮೆ” ಪುಸ್ತಕವನ್ನು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ಬೆಂಗಳೂರಿನ ಶ್ರೀ ಸಿದ್ಧಿವಿನಾಯಕ ಶರಭೇಶ್ವರ ಪೀಠದ ಶ್ರೀ ಮಹರ್ಷಿ ಗಂದೋಡಿ ಜಯ ಶ್ರೀನಿವಾಸನ್ ಗುರೂಜಿ, ಚನ್ನಗಿರಿ ತಾಲ್ಲೂಕು ವಡ್ನಾಳ್‍ನ ವಿಶ್ವಕರ್ಮ ಸಾವಿತ್ರಿ ಪೀಠದ ಶ್ರೀ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸ್ವಾಮೀಜಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಪ್ರಧಾನ ಅರ್ಚಕ ಎಸ್. ರಾಜು ಸ್ವಾಮಿ, ಅರಬಗಟ್ಟೆ ಗ್ರಾಪಂ ಸದಸ್ಯ ಎಸ್.ಆರ್. ಮಂಜುನಾಥ್, ನಿವೃತ್ತ ಎಂಜಿನಿಯರ್ ಕುಂಕುವ ಜಿ. ಮಂಜುನಾಥ್, ಉಪನ್ಯಾಸಕ ಎಸ್.ವಿ. ನಾರಾಯಣ್ ಇತರರು ಮಾತನಾಡಿದರು.
ಅರಬಗಟ್ಟೆ ಗ್ರಾಪಂ ಅಧ್ಯಕ್ಷೆ ಅನಿತಾ ಕರಿಬಸಪ್ಪ, ಸದಸ್ಯರಾದ ಡಿ.ಬಿ. ಶ್ರೀನಾಥ್, ಕರಿಯಮ್ಮ ಅಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಗೊಲ್ಲರಹಳ್ಳಿ ಜಿ.ಪಿ. ವರದರಾಜಪ್ಪ ಗೌಡ್ರು, ನಿವೃತ್ತ ಪ್ರಾಂಶುಪಾಲ ಎಸ್.ಆರ್. ಹನುಮಂತಪ್ಪ, ಮುಖಂಡರಾದ ಎಚ್.ಆರ್. ರಾಕೇಶ್, ಎಸ್.ಎನ್. ಪ್ರಸನ್ನಕುಮಾರ್ ಇತರರು ಇದ್ದರು.