ರಾಣೇಬೆನ್ನೂರು,ಜ.27- ಸ್ಥಳೀಯ ರಾ. ತಾ. ಶಿ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದಿ. ವ್ಹಿ. ಕೆ ಸಾವಕಾರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಡಾ. ರಾಮರೆಡ್ಡಿ, ಎಸ್.ರಡ್ಡೇರ ಅವರ ‘ಕತ್ತಲೆ ಮುತ್ತಿದ ಬೆಳಗು’ ಮತ್ತು ‘ಅಂತರಂಗದ ಅರಿವು’ ಎಂಬ ಸಂಶೋಧನಾ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸುಭಾಸ ವ್ಹಿ. ಸಾವಕಾರ ಮತ್ತು ಕಾರ್ಯದರ್ಶಿ ಸೀತಾ ಎಸ್. ಕೋಟಿ ಅವರು ಈ ಕೃತಿಗಳನ್ನು ಬಿಡುಗಡೆಗೊಳಿಸಿದರು.
ವಿಶ್ರಾಂತ ಪ್ರಾಚಾರ್ಯ ಪ್ರೊ. ಕೆ.ಟಿ. ಉದಪುಡಿ ಮತ್ತು ಪ್ರೊ. ಸದಾಶಿವ ಚ. ಹುಲ್ಲತ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಚಾರ್ಯ ಪ್ರೊ. ಸಿ. ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು.
`ಕತ್ತಲೆ ಮುತ್ತಿದ ಬೆಳಗು’ ಕೃತಿಯನ್ನು ಪರಿಚಯಿಸುತ್ತಾ ಮಾತನಾಡಿದ ಡಾ. ಕಾಂತೇಶ ಅಂಬಿಗೇರ ಅವರು, ಡಾ. ರಾಮರೆಡ್ಡಿಯವರ ಈ ಕೃತಿ ಹದಿಮೂರು ಸಂಶೋಧನಾ ಲೇಖನಗಳನ್ನು ಒಳಗೊಂಡ ಮಹತ್ವದ ಕೃತಿಯಾಗಿದೆ. ಈ ಕೃತಿಯಲ್ಲಿ ಖಚಿತವಾದ ನಿರ್ಧಾರ, ಸೂಕ್ತವಾದ ಆಕರಗಳ ಬಳಕೆಯಿಂದ ಉತ್ತಮವಾದ ಸಂಶೋಧನೆ ಮೂಡಿದೆಯಂದು ವಿವರಿಸಿದರು.
ಡಾ. ಜಗನ್ನಾಥ ಆರ್. ಗೇನಣ್ಣವರ ಅವರು `ಅಂತರಂಗದ ಅರಿವು’ ಕೃತಿಯನ್ನು ಸಭೆಗೆ ಪರಿಚಯಿಸುತ್ತಾ ಹದಿನೇಳು ಸಂಶೋಧನಾ ಲೇಖನಗಳ ಗುಚ್ಚವಾದ ‘ಅಂತರಂಗದ ಅರಿವು’ ಕೃತಿಯು ಸಾಹಿತ್ಯ, ಸಂಸ್ಕೃತಿಗಳ ಅಪೂರ್ವ ಮಹತ್ವದ ಕೃತಿಯಾಗಿದೆ’ ಎಂದು ವಿಸ್ತೃತವಾಗಿ ನಿರೂಪಿಸಿದರು.
ಲೇಖಕರಾದ ಡಾ. ರಾಮರೆಡ್ಡಿ, ಎಸ್. ರಡ್ಡೇರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜೊತೆಗೆ ಪ್ರೊ. ಬಿ. ಆಯ್. ಕೋಳಿ ಡಾ. ಕಾಂತೇಶ ರಡ್ಡಿ ಗೋಡಿಹಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ರವಿ ಪೂಜಾರ ಮತ್ತು ಡಾ. ಕಾಂತೇಶರೆಡ್ಡಿ ಗೋಡಿಹಾಳ ಅವರನ್ನು ಸನ್ಮಾನಿಸಾಯಿತು.
ಶಿವಕುಮಾರ ಪ್ರಾರ್ಥಿಸಿದರು; ಡಾ. ಆನಂದ ಖಾನಪೇಟ ಅತಿಥಿಗಳನ್ನು ಸಭೆಗೆ ಪರಿಚಯಿಸಿ ದರು. ಡಾ.ರಾಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ. ಬಿ. ಆಯ್. ಕೋಳಿ ಸ್ವಾಗತಿಸಿದರು. ಪ್ರೊ. ಡಿ. ಟಿ. ಲಮಾಣಿ ವಂದಿಸಿದರು.ಡಾ. ಪಿ.ಬಿ. ಕೊಪ್ಪದ ಅವರು ಸಂಯೋಜಿಸಿದರು, ಡಾ|| ಸರಸ್ವತಿ ಬಮ್ಮನಾಳ ಮತ್ತು ಪ್ರೊ. ರಜಿನಿ ಕರಿಗಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.