ಲೋಕ್ ಶಕ್ತಿ ಪಾರ್ಟಿ ಬಲಪಡಿಸಲು ಕರೆ

ಲೋಕ್ ಶಕ್ತಿ ಪಾರ್ಟಿ ಬಲಪಡಿಸಲು ಕರೆ

ಜಿಲ್ಲಾ ಘಟಕ ಉದ್ಘಾಟಿಸಿದ ರಾಜ್ಯಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್

ದಾವಣಗೆರೆ, ಜ.25-  ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ಸ್ಥಾಪಿಸಿದ್ದ ಲೋಕ್  ಶಕ್ತಿ ಪಾರ್ಟಿಯನ್ನು ಜಿಲ್ಲೆಯಲ್ಲೂ ಬಲ ಪಡಿಸುವಂತೆ ಪಾರ್ಟಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಮಮತಾ ಪಾಟೀಲ್ ಕರೆ ನೀಡಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಬುಧವಾರ ದಾವಣಗೆರೆ ಜಿಲ್ಲಾ ಘಟಕವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದಿ.ರಾಮಕೃಷ್ಣ ಹೆಗಡೆ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರೊಬ್ಬ ಸರಳ, ಸಜ್ಜನಿ ಕೆಯ ಧೀಮಂತ, ನಿಷ್ಠಾವಂತ ರಾಜಕಾರಣಿ ಯಾಗಿದ್ದರು. ಅವರಂತೆ ಇರಲು ಇದುವರೆಗೂ ಯಾವ ರಾಜಕಾರಣಿಗೂ ಸಾಧ್ಯವಾಗಿಲ್ಲ ಎಂದರು.

ಹೆಗಡೆ ಅವರ ಪರಂಪರೆ ಮುಂದುವರೆಸುವ ಉದ್ದೇಶದಿಂದ ಕರ್ನಾಟಕದಾದ್ಯಂತ ಲೋಕ್ ಶಕ್ತಿ ಪಾರ್ಟಿಯನ್ನು ಬಲಪಡಿಸಲು ಚಿಂತಿಸಲಾಗಿದೆ. ಬರಲಿರುವ ವಿಧಾನಸಭಾ ಚುನಾವಣೆಗೆ ದಾವಣಗೆರೆಯ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದಿಂದ ಒಬ್ಬರು ಸ್ಪರ್ಧಿಸಬೇಕಿದೆ ಎಂದು ಹೇಳಿದರು.

ಮಹಿಳೆಯರಿಗಾಗಿ ಶೇ.25ರಷ್ಟು  ಮೀಸಲಾತಿ ಕಲ್ಪಿಸಿದ್ದು, ರಾಮಕೃಷ್ಣ ಹೆಗಡೆಯವರು. ಈ ಹಿನ್ನೆಲೆಯಲ್ಲಿ ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ಪುರುಷರು ಇದಕ್ಕೆ ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸಾಪುರದ ಶ್ರೀ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್. ನಾಗರಾಜಪ್ಪ ಮಾತನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್ ವಿಸರ್ಜಿಸುವಂತೆ ಮಹಾತ್ಮ ಗಾಂಧಿಯವರು ಹೇಳಿದ್ದರೂ, ಕಳೆದ 70 ವರ್ಷಗಳಿಂದ ಕಾಂಗ್ರೆಸ್‌ನ ಅನುವಂಶೀಯರು ಅದನ್ನು ಬೆಳೆಸುತ್ತಾ ಬಂದರು. 

ವಿಪಕ್ಷಗಳು ಇಲ್ಲದ, ಇದ್ದರೂ ಹರಿದು ಹೋಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾ ಪಾರ್ಟಿ ಕಟ್ಟಲಾಯಿತು. ಅದರಲ್ಲೂ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಪ್ರಸ್ತುತ ದಿನಗಳಲ್ಲಿ ಪರ್ಯಾಯ ಶಕ್ತಿಯಾಗಿ ಲೋಕ್ ಶಕ್ತಿ ಪಾರ್ಟಿ ಬೆಳೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಲೋಕ್ ಶಕ್ತಿ ಪಾರ್ಟಿ ಜಿಲ್ಲಾ ಘಟಕದ ಸಂಚಾಲಕರಾಗಿದ್ದ ಬಸವರಾಜಪ್ಪ ನೀರ್ಥಡಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿ, ಪಕ್ಷದ ಬಾವುಟ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾವಣಗೆರೆ ಏಳು ವಿಧಾನಸಭಾ ಕ್ಷೇತ್ರದಗಳಿಂದಲೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ  ಚಿಂತನೆ ಇದೆ. ಕೆಲ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅಭ್ಯರ್ಥಿಗಳು ತಯಾರಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲ ಪಡಿಸಲಾಗುವುದು ಎಂದರು.

ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿ. ಸ್ಥಾವರಮಠ್ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಘಟಕದ ಸಹ ಸಂಚಾಲಕ ಎಂ.ಎಸ್. ಶಿವಕುಮಾರ ಸ್ವಾಮಿ ಉಪಸ್ಥಿತರಿದ್ದರು. ಸದಾನಂದ ನಿರೂಪಿಸಿದರು. ವಿಠೋಬರಾವ್ ಪ್ರಾರ್ಥಿಸಿದರು.

error: Content is protected !!