ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಹೆಮ್ಮೆಯ ದಿನ

ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಹೆಮ್ಮೆಯ ದಿನ

ಗಣರಾಜ್ಯೋತ್ಸವ ದಿನವನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ. 2023ನೇ ಇಸವಿಯಲ್ಲಿ ಇರುವ ಭಾರತೀಯರಾದ ನಾವೆಲ್ಲರೂ ಜನವರಿ 26, 2023ರಂದು 74ನೇ ಗಣಾರಾಜ್ಯೋತ್ಸವ ಆಚರಣೆಗೆ ಸಜ್ಜಾಗೋಣ.

ಗಣರಾಜ್ಯ ದಿನವನ್ನು ದೇಶವ್ಯಾಪಿ ಹಾಗೂ ಪ್ರಮುಖವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥ್ ಮಾರ್ಗದಲ್ಲಿ  ಮೂರೂ ರಕ್ಷಣಾ ಪಡೆಗಳ ಕವಾಯತ್ತು, ಆಧುನಿಕ  ಮಿಲಿಟರಿ ಸಲಕರಣೆಗಳ, ವಿವಿಧ ರಾಜ್ಯಗಳ ಸ್ತಬ್ಧ  ಚಿತ್ರಗಳ ಹಾಗೂ  ಮಕ್ಕಳ ನೃತ್ಯಗಳ ಪ್ರದರ್ಶನ, ವೀರ ಮರಣವನ್ನಪ್ಪಿದ  ಯೋಧರಿಗೆ ಪರಮವೀರ  ಚಕ್ರಗಳನ್ನು ಪ್ರದಾನ ಮಾಡುವುದರೊಂದಿಗೆ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ಈ ದಿನವನ್ನು ವಿಶೇಷವಾಗಿ ಭಾರತದ ಸಂವಿಧಾನವನ್ನು ಜಾರಿಗೊಳಿಸಿದ ದಿನವನ್ನಾಗಿ  ಆಚರಿಸಲಾಗುವುದು. ಇದು ಜಾರಿಗೆ ಬರುವ ಮುನ್ನ ದೇಶ ಹರಿದು ಹಂಚಿ ಹೋಗಿದ್ದರ ಜೊತೆಗೆ  ವಿವಿಧ ಭಾಷೆಗಳನ್ನಾಡುವ ಜನರು ಹಲವು ಪ್ರಾಂತ್ಯಗಳಲ್ಲಿ  ಚದುರಿ ಹೋಗಿದ್ದರು. ಇವರೆಲ್ಲರನ್ನು ಭಾಷೆಗಳಿಗೆ ಅನುಗುಣವಾಗಿ ಒಗ್ಗೂಡಿಸಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿ ಅದನ್ನು  ಗಣರಾಜ್ಯ ಎಂದು ಕರೆಯಲಾಯಿತು. 

ಸ್ವಾತಂತ್ರ್ಯದ  ನಂತರ ಭಾರತಕ್ಕೆ  ತನ್ನದೇ ಆದ ಸಂವಿಧಾನದ ಅಗತ್ಯತೆ ಬಹುವಾಗಿತ್ತು. ಇದನ್ನು ಮನಗಂಡು ಸಂವಿಧಾನ ರಚನಾ ಸಭೆಯನ್ನು ರಚಿಸಿ ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ  318 ಪ್ರತಿನಿಧಿಗಳನ್ನು ಸೇರ್ಪಡೆ ಮಾಡಲಾಯಿತು. ಇದರ ಮೊದಲ ಸಭೆ 1946 ಡಿಸೆಂಬರ್ 9 ರಂದು ಸಮಾವೇಶಗೊಂಡಿತು. ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ಹಾಗೂ ಕರಡು ರಚನಾ ಸಮಿತಿಯ ಅಧ್ಯಕ್ಷತೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ರವರು ವಹಿಸಿಕೊಂಡರು. ಇವರಲ್ಲದೆ ನೆಹರು, ಸರ್ದಾರ್ ಪಟೇಲ್, ಮುಖರ್ಜಿ, ಮುನ್ಸಿ, ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ ಪಂಡಿತ್, ಎಸ್. ನಿಜಲಿಂಗಪ್ಪ, ಕೆ. ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ ಇನ್ನು ಮುಂತಾದವರು ರಚನಾ ಸಭೆಯಲ್ಲಿದ್ದ ಪ್ರಮುಖರು. ಇವರೆಲ್ಲರ ಸತತ ಪರಿಶ್ರಮದ ಫಲವಾಗಿ ದೇಶಕ್ಕೊಂದು ಉತ್ತಮ ಸಂವಿಧಾನ ರಚನೆಯಾಯಿತು.1949 ರ ನವೆಂಬರ್ 26 ರಂದು ಅಂಗೀಕೃತವಾದ ಸಂವಿಧಾನ ಮೂಲತಃ 22 ಅಧ್ಯಾಯಗಳು, 395 ವಿಧಿಗಳು, 8 ಅನುಸೂಚಿಗಳನ್ನು ಒಳಗೊಂಡಿದೆ. ಇದು ವಿಶ್ವದಲ್ಲಿಯೇ ಅತ್ಯಂತ ವ್ಯಾಪಕ ಮತ್ತು ಸುದೀರ್ಘ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಿಮವಾಗಿ ಇದು 1950 ಜನವರಿ 26 ರಂದು ಜಾರಿಗೆ ಬಂದಿತು. ಇಂತಹ ಮಹತ್ವದ ದಿನವನ್ನು ಪ್ರತಿ ವರ್ಷ ದೇಶಾದ್ಯoತ ಗಣರಾಜ್ಯ ದಿನವಾಗಿ ಆಚರಿಸುವ ಪರಿಪಾಠ ಜಾರಿಗೆ ಬಂದಿದೆ. ಈ ದಿನದಂದು ಸಂವಿಧಾನ ಕರ್ತೃ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ಅತ್ಯಂತ ಗೌರವದಿಂದ ಸ್ಮರಿಸಲಾಗುವುದು.

ಸಂವಿಧಾನವು ಲಿಖಿತ ಸಂವಿಧಾನ, ವಯಸ್ಕ ಮತದಾನ ಪದ್ಧತಿ, ರಾಜ್ಯ ನೀತಿ ನಿರ್ದೇಶಾತ್ಮಕ ತತ್ವಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಬಹುಪಕ್ಷ ಪದ್ಧತಿ, ಕಲ್ಯಾಣ ರಾಜ್ಯ ಸ್ಥಾಪನೆ, ಗಣತಂತ್ರ ವ್ಯವಸ್ಥೆ, ಸಂಸದೀಯ ಸರ್ಕಾರ  ಪದ್ಧತಿ, ಏಕ ಪೌರತ್ವ, ತುರ್ತು ಪರಿಸ್ಥಿತಿಯ ಅಧಿಕಾರಗಳು, ಪಂಚವಾರ್ಷಿಕ ಯೋಜನಾ ವ್ಯವಸ್ಥೆ ಯಂತಹ ಲಕ್ಷಣಗಳನ್ನು ಒಳಗೊಂಡಿದ್ದು, ಆರು ಮೂಲಭೂತ ಹಕ್ಕುಗಳು ಹಾಗೂ ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ.

“ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಇಲ್ಲಿನ ಸಮಸ್ತ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಹಾಗೂ ಅವರೆಲ್ಲರಲ್ಲಿನ ವ್ಯಕ್ತಿಗತ ಗೌರವ ಹಾಗೂ ರಾಷ್ಟ್ರದ  ಏಕತೆ ಮತ್ತು ಸಮಗ್ರತೆಯ ಆಶ್ವಾಸನೆಯೊಂದಿಗೆ ಭ್ರಾತೃತ್ವವನ್ನು ವೃದ್ಧಿಗೊಳಿಸಲು ಈ ಸಂವಿಧಾನವನ್ನು ಅಂಗೀಕರಿಸಿ, ಶಾಸನಬದ್ಧಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ,” ಎಂಬ ವಾಕ್ಯಗಳನ್ನು   ಸಂವಿಧಾನದ ಪೂರ್ವ ಪೀಠಿಕೆ ಒಳಗೊಂಡಿದ್ದು, ಇದು ಸಂವಿಧಾನದ ಮೂಲ ಆಶಯವೂ ಆಗಿದೆ. ಇದನ್ನರಿತು ಸರ್ಕಾರಗಳು ಕಾರ್ಯ ನಿರ್ವಹಿಸಬೇಕಾಗಿದೆ.

ಪ್ರಸ್ತುತದಲ್ಲಿ  ಸಂವಿಧಾನದ ತತ್ವ, ಸಿದ್ಧಾಂತ  ಮತ್ತು ಮೂಲ ಆಶಯಗಳನ್ನು ಆಳುವ ಸರ್ಕಾರ, ಜನಪ್ರತಿನಿಧಿ ಗಳು ಹಾಗೂ ಬಹುಪಾಲು  ಪ್ರಜೆಗಳು  ಮರೆತಂತೆ ಗೋಚರಿಸುತ್ತದೆ. ಇದರಿಂದ ದೇಶ ಯಾವುದೇ ರೀತಿಯಲ್ಲಿ ಮುಂದುವರೆಯಲಾರದು. ಆಯ್ಕೆಯಾದ ಜನಪ್ರತಿನಿಧಿ ಗಳು ದೇಶದ ಪ್ರಗತಿಗೋಸ್ಕರ ಕಾಯಾ, ವಾಚಾ, ಮನಸಾ ದುಡಿಯಬೇಕೇ ವಿನಃ  ಯಾರೊಬ್ಬರೂ ಭ್ರಷ್ಟಾಚಾರದಂ ತಹ ಪಿಡುಗಿಗೆ ಒಳಗಾಗ ಬಾರದು. ಪ್ರಜೆಗಳು ತಮ್ಮ ಮೌಲ್ಯಯುತ ಮತವನ್ನು ರಾಜಕೀಯ ಪಕ್ಷಗಳು  ಒಡ್ದುವ ಆಸೆ, ಆಮಿಷಗಳಿಗೆ ಮಾರಿಕೊಳ್ಳಬಾರದು. ದೇಶದ ಭವಿಷ್ಯ ಪ್ರಜ್ಞಾವಂತ ಪ್ರಜೆಗಳ ಕೈಲಿ ಅಡಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡಾಗ ಮಾತ್ರ  ಸಂವಿಧಾನದ   ಘನತೆ ಮತ್ತು ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಬಹುದು.ಇಂದು ವಿಶ್ವದಲ್ಲಿ ಭಾರತ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿರುವುದು ಸಂತಸದ ಸಂಗತಿ.ಆದ್ದರಿಂದ  ಆಳುವ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಪ್ರತಿಯೊಬ್ಬ ಪ್ರಜೆ ದೇಶದ ಹಿತ ಮತ್ತು ಪ್ರಗತಿಯ ಕಡೆ ಈ  ದಿನದಂದು ಆಲೋಚಿಸಿ ಅದರಂತೆ ನಡೆದುಕೊಂಡಲ್ಲಿ  ಗಣರಾಜ್ಯದ ಆಚ ರಣೆಗೆ ಒಂದರ್ಥ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

– ಡಾ. ಶಿವಯ್ಯ ಎಸ್., ದಾವಣಗೆರೆ.
[email protected]

error: Content is protected !!