ಕನ್ನಡಕ್ಕಾಗಿ ರಕ್ತ ಕೊಟ್ಟೇವು ಎಂಬ ಅಭಿಮಾನದ ಮಾತಿಗಿಂತ, ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಓದಿದರೆ ಭಾಷೆ ಉಳಿಯುತ್ತದೆ
ದಾವಣಗೆರೆ, ಸೆ. 27 – ಕನ್ನಡಕ್ಕಾಗಿ ರಕ್ತವನ್ನಾದರೂ ಕೊಡುತ್ತೇನೆ ಎಂಬ ಉದ್ವೇಗದ ಮಾತುಗಳಿಗಿಂತ, ಕನ್ನಡದ ಪುಸ್ತಕಗಳನ್ನು ಕೊಂಡು ಓದಿದಾಗ ಕನ್ನಡ ಹಾಗೂ ಸಾಹಿತ್ಯ ಬೆಳವಣಿಗೆಯಾಗುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಿ. ಶಿವಲಿಂಗಪ್ಪ ಚಾರಿಟೇಬಲ್ ಟ್ರಸ್ಟ್ಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಪಾಪು ಗುರು ಅವರ ‘ಸೂಜಿ’ ಕಾದಂಬರಿ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಕೃತಿಯೊಂದನ್ನು ಬಿಡುಗಡೆ ಮಾಡಿದ್ದಕ್ಕಿಂತ ಕೃತಿಗೆ ಮಾನ್ಯತೆ ಸಿಕ್ಕಾಗ ಕೃತಿಕಾರನಿಗೆ ಹೆಚ್ಚು ಸಂತೋಷವಾಗುತ್ತದೆ. ಕೃತಿಯನ್ನು ಜನರು ಕೊಂಡು ಓದಿದಾಗ, ಹಂಚಿಕೊಂಡಾಗ, ಚರ್ಚೆ, ವಿಮರ್ಶೆ ನಡೆಸಿದಾಗ ಕೃತಿಗೆ ಸಾರ್ಥಕತೆ ಸಿಗುತ್ತದೆ ಎಂದವರು ತಿಳಿಸಿದರು.
ಆದರೆ, ಕನ್ನಡದಲ್ಲಿ ಪುಸ್ತಕ ಕೊಂಡು ಓದುವ ಜಾಯಮಾನ ಬೆಳೆದಿಲ್ಲ. ಸಾವಿರಾರು ಜನರನ್ನು ಸೇರಿಸಿ ಬಿಡುಗಡೆ ಮಾಡಿದ ಪುಸ್ತಕಗಳೂ ಸಹ ಮಾರಾಟವಾಗುವುದಿಲ್ಲ. ನಾನು ಪ್ರಕಾಶನ ಮಾಡಿಸಿದ ಹಲವಾರು ಪುಸ್ತಕಗಳ ನೂರಾರು ಪ್ರತಿಗಳು, ನನ್ನ ಮನೆಯಲ್ಲೇ ಮಾರಾಟವಾಗದೇ ಪಳಿಯುಳಿಕೆಗಳಾಗಿ ಉಳಿದಿವೆ ಎಂದವರು ವಿಷಾದಿಸಿದರು.
ಕನ್ನಡದ ಅಭಿಮಾನಕ್ಕಾಗಿ ರಕ್ತ ಕೊಟ್ಟೇವು ಎಂದು ಹೇಳುತ್ತಾರೆ. ಅಷ್ಟು ಮಾಡುವುದು ಬೇಡ, ರಕ್ತ ಅಮೂಲ್ಯ. ಅದರ ಬದಲು ಪುಸ್ತಕವನ್ನು ಖರೀದಿಸಿ. ಕನ್ನಡ ಉಳಿಸುವ ಪರಿ ಇದು ಎಂದವರು ಹೇಳಿದರು.
ಪ್ರೇಮ ಹಾಗೂ ಕಾಮಗಳು ಕೃತಿಗಳಲ್ಲಿ ಇರಬೇಕಾದ ಅಗತ್ಯಗಳ ಕುರಿತು ಮಾತನಾಡಿದ ದತ್ತ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳ ಜೀವನ ಮಾರ್ಗದ ಬಗ್ಗೆ ಋಷಿಗಳು ಮಾತನಾಡಿದ್ದಾರೆ. ಹೀಗಾಗಿ ಕಾಮ ಸಹ ತಿರಸ್ಕಾರಕ್ಕೆ ಯೋಗ್ಯವಲ್ಲ. ಅಲ್ಲೂ ಉನ್ನತೀಕರಣ, ಜೀವನೋತ್ಸಾದ ಶಕ್ತಿ ಸಾಧ್ಯತೆ ಇದೆ ಎಂದು ತಿಳಿಸಿದರು.
ಪಾಪು ಗುರು ಅವರು ಪತ್ರಿಕೆ ಹಂಚುವ, ಬಡಗಿ, ಮೆಕ್ಯಾನಿಕ್ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಬದುಕು, ಜೀವನಾಸಕ್ತಿ, ಅನುಭವ, ಸಮಾಜಮುಖಿ ನಿಲುವಿಗೆ ಅಕ್ಷರ ರೂಪ ಕೊಡಲು ಅಂಥವರಿಂದ ಸಾಧ್ಯ ಎಂದು ದತ್ತ ಅಭಿಪ್ರಾಯ ಪಟ್ಟರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಅಹಂಕಾರ ಹಾಗೂ ಪೂರ್ವಾಗ್ರಹ ಪೀಡಿತವಾದ ಸಾಹಿತ್ಯ ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ವಚನ ಸಾಹಿತ್ಯದಲ್ಲಿ ಇಂತಹ ಗುಣಗಳಿಲ್ಲದ ಕಾರಣ ಅದು ಇಂದಿಗೂ ಎಲ್ಲರನ್ನೂ ತಲುಪುತ್ತಿದೆ ಎಂದು ಹೇಳಿದರು.
ಸಾಹಿತ್ಯ ಕಲಿಸಬಹುದಾದ ವಿದ್ಯೆಯಲ್ಲ. ಅದು ಅನುಭವ, ಆಸಕ್ತಿ ಹಾಗೂ ಸೃಜನಶೀಲತೆಯಿಂದ ಬರುತ್ತದೆ. ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದ್ದು, ರಾಷ್ಟ್ರದ ಸಂಸ್ಕೃತಿಯ ವಿಕಾಸಕ್ಕೂ ಕಾರಣವಾಗುತ್ತದೆ ಎಂದವರು ಹೇಳಿದರು.
ಕೃತಿಯ ಕುರಿತು ಮಾತನಾಡಿದ ಉಪನ್ಯಾಸಕ ಡಾ. ಎ.ಬಿ. ರಾಮಚಂದ್ರಪ್ಪ, ಈ ಕೃತಿಯನ್ನು ಓದಿದಾಗ ಪ್ರಗತಿಶೀಲ ಕಾದಂಬರಿಯ ಅನುಭವವಾಯಿತು. ಪ್ರಗತಿಶೀಲರು ಬರೆದೇ ಬದುಕು ಕಟ್ಟಿಕೊಳ್ಳಬೇಕಿತ್ತು. ಅಂತಹ ಪರಿಶ್ರಮ ಈ ಕಾದಂಬರಿಯಲ್ಲಿದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಎ. ಫಕೃದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಬಿ. ಆಕಾಶ್ ಪ್ರಾರ್ಥಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ ಸ್ವಾಗತಿಸಿದರೆ, ಗಂಗಾಧರ ನಿಟ್ಟೂರು ನಿರೂಪಿಸಿದರು.