ಹಿರಿಯ ಶ್ರೀಗಳಿಗೆ ಪುಷ್ಪ ನಮನ

ಹಿರಿಯ ಶ್ರೀಗಳಿಗೆ ಪುಷ್ಪ ನಮನ - Janathavaniಕೊರೊನಾ ಅಲ್ಲ ; ಮನುಷ್ಯನೇ ಮಹಾಮಾರಿ : ತರಳಬಾಳು ಶ್ರೀ

ಈ ಬಾರಿ ಮನೆಯಲ್ಲಿಯೇ ಕುಟುಂಬದ ಸದಸ್ಯರುಗಳು ಸೇರಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ನಾಮಸ್ಮರಣೆ ಮಾಡುವಲ್ಲಿ ಮಗ್ನರಾಗಿದ್ದರು. ಗ್ರಾಮದ ಶಾಲಾ-ಕಾಲೇಜುಗಳ ನೌಕರ ವರ್ಗದವರು ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗುರುವಿಗೆ ಅಂಜಿ ಶಿಷ್ಯರೂ, ಶಿಷ್ಯರಿಗೆ ಅಂಜಿ ಗುರುವೂ ನಡೆಯಬೇಕೆಂಬುದು ನಮ್ಮ ಲಿಂಗೈಕ್ಯ ಗುರುವರ್ಯರ ಆಣತಿಯಾಗಿತ್ತು. ಆದರೆ, ಈಗ ಗುರು ಶಿಷ್ಯರಾದಿಯಾಗಿಯೂ ಕೊರೊನಾ ಎಂಬ ವೈರಾಣುವಿಗೆ ಅಂಜಿ ನಡೆಯಬೇಕಾದ ವಿಷಮ ಪರಿಸ್ಥಿತಿ ಉಂಟಾಗಿದೆ. ಇದುವರೆಗೂ ನಗರಗಳಿಗೆ ವ್ಯಾಪಿಸಿದ್ದ ಕೊರೊನಾ ಹಳ್ಳಿಗಳಿಗೆ ಹರಡಿ ಅವರ ಜೀವನೋಪಾಯವನ್ನು ಕಸಿದುಕೊಂಡು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಭಕ್ತರು ಕೊರೊನಾ ಎಂಬ ಮಹಾಮಾರಿಯ ವೈರಾಣುವಿಗೆ ಅಂಜದೇ ನಿಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಕೆಯೊಂದಿಗೆ ತೊಡಗಿಕೊಳ್ಳುವುದು ಒಳಿತು ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಂತರ್ಜಾಲದ ಕಾರ್ಯಕ್ರಮದಲ್ಲಿ ಭಕ್ತರಿಗೆ ಕರೆ ನೀಡಿದರು.

ಇತಿಹಾಸ ಪ್ರಸಿದ್ದ ಸ್ಥಳವಾದ ಹಳೇಬೀಡಿನಲ್ಲಿ ತರಳ ಬಾಳು ಹುಣ್ಣಿಮೆ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಆ ಸಮಾರಂಭದಲ್ಲಿ ನೀವೆಲ್ಲರೂ ಭಾಗವಹಿಸಿ ರುವುದು ಸಂತೋಷ ತಂದಿದೆ. ಆ ಭಾಗದ ರೈತರ ಮತ್ತು ಜಾನುವಾರುಗಳ ನೀರಿನ ಬವಣೆಯನ್ನು ಮನಗಂಡು ಕೆರೆಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರದ ಯೋಜನೆಗಳ ಮುಖಾಂತರ ಬಗೆಹರಿಸುವ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು. 

ಹಿರಿಯ ಗುರುಗಳು ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಸಂಕಲ್ಪವನ್ನು ಮಾಡಿದ್ದರು. `ಯಾವ ಸಮಾಜದಲ್ಲಿ ಉತ್ತಮ ತಾಯಂದಿರಿಲ್ಲವೋ, ಆ ಸಮಾಜ ಏಳಿಗೆ ಹೊಂದಲಿಕ್ಕೆ ಸಾಧ್ಯವಿಲ್ಲ’ ಎಂಬುದನ್ನು ಮನಗಂಡು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಅವರ ಕುಟುಂಬ ಉಜ್ವಲವಾಗಿ ಬೆಳೆಯುವುದಕ್ಕೆ ಕಾರಣರಾಗುತ್ತಾರೆ ಎನ್ನುವ ಮುಂದಾಲೋಚನೆ ನಮ್ಮ ಹಿರಿಯ ಗುರುಗಳಿಗೆ ಇತ್ತು ಎಂದರು.

ಮನುಕುಲದ ಮಹಾಮಾರಿ ಕೊರೊನಾ ಅಲ್ಲ. ಮನುಷ್ಯನೇ ಮಹಾಮಾರಿ. ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಎಚ್ಚೆತ್ತುಕೊಳ್ಳದೇ ಇರುವುದು ನಮಗೆ ಬೇಸರ ತಂದಿದೆ. ವಿಶ್ವದಲ್ಲೆಡೆ ಕೊರೊನಾ ವೈರಾಣು ವ್ಯಾಪಕವಾಗಿ ಹರಡಿ ಮನುಕುಲವನ್ನು ಹೈರಾಣಾಗಿಸಿದೆ. ಒಂದು ರೀತಿ ಕೊರೊನಾದಂತಹ ಮೂರನೇ ಮಹಾಯುದ್ಧದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಪೊಲೀಸ್ ಇಲಾಖೆಯವರು ತಮ್ಮ ಬಾಹುಗಳ ಮುಖಾಂತರ ರೋಗಿಗಳ ಮಧ್ಯೆ ಹೋರಾಡಿದಂತಾಗಿದೆ. ಈ ಹೋರಾಟದಲ್ಲಿ ಹಲವಾರು ಭಕ್ತಾದಿಗಳು ಹಾಗೂ ಗಣ್ಯವ್ಯಕ್ತಿಗಳೂ ಸಹ ಸಾವಿಗೀಡಾಗಿದ್ದಾರೆ. ಇದರ ಪರಿಣಾಮವಾಗಿ ಸಾಮಾನ್ಯ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. 

6 ರಿಂದ 7 ತಿಂಗಳ ಕಾಲ ಸಿರಿಗೆರೆ ಸಮೀಪದ ಶಾಂತಿವನದಲ್ಲಿ ನಾವು ರೈತರ, ಭಕ್ತರ ಹಿತಚಿಂತನೆಯಲ್ಲದೇ, ಅಲ್ಲಿ ಜಾನುವಾರುಗಳ ಪಾಲನೆ ಮಾಡುತ್ತಿದ್ದೆವು. ಅನೇಕ ಭಕ್ತರು ಈ ಸಂದರ್ಭದಲ್ಲಿ ಕೊರೊನಾ ವೈರಾಣುವಿನಿಂದ ಸಾವನ್ನಪ್ಪಿದ್ದು ದುಃಖ ತಂದಿದೆ. ಕೆಲವರಿಗೆ ವೆಂಟಿಲೇಟರ್ ಸಿಗದಿದ್ದಾಗ ನಮ್ಮ ವೈದ್ಯರಿಗೆ ತಿಳಿಸಿ ಅವರ ಆರೋಗ್ಯವನ್ನು ಸಹಜ ಸ್ಥಿತಿಗೆ ತರುವಲ್ಲಿ ಸಹಾಯ ಮಾಡಿದ್ದನ್ನು ಸ್ಮರಿಸಿದರು. 

ಕಳೆದ ವರ್ಷ ಶ್ರದ್ಧಾಂಜಲಿ ಸಮಾರಂಭಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ನಮ್ಮ ಪಕ್ಕದಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದರು. ಹರಿಹರದಿಂದ ನೀರಿಗಾಗಿ 50 ಕಿ.ಮೀ. ಉದ್ದದ ಪೈಪ್‍ಲೈನ್ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈಲ್ವೆ ಟ್ರ್ಯಾಕ್ ಸಮಸ್ಯೆಗೆ ಕೇಂದ್ರದ ಒಪ್ಪಿಗೆ ಪಡೆದು ಸಮಸ್ಯೆಯನ್ನು ಬಗೆಹರಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಇನ್ನೋರ್ವ ಶಿಷ್ಯ ದಾವಣಗೆರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಗೌಡ ಅವರ ಸೇವೆಯನ್ನು ಸ್ಮರಿಸಿದರು.

ಐಕ್ಯಮಂಟಪಕ್ಕೆ ಭೇಟಿ ನೀಡಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಂಚಿನ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಶ್ರೀ ಗುರುಶಾಂತ ದೇಶಿಕೇಂದ್ರ ಸ್ವಾಮೀಜಿ ಪ್ರತಿಮೆಗೆ ಪೂಜೆ ಸಲ್ಲಿಸಿ, ನಂತರ ಅಂತರ್ಜಾಲದ ಮುಖಾಂತರ ಹಿರಿಯ ಗುರುಗಳ ಕಾರ್ಯವನ್ನು ನೆನಪಿಸುವ ಕಾರ್ಯವನ್ನು ಈ ಸಂದರ್ಭದಲ್ಲಿ ತಿಳಿಸಿ ಭಕ್ತಾದಿಗಳಿಗೆ ಶುಭಾಶಯ ಕೋರಿದರು.

error: Content is protected !!