ಹರಿಹರ, ಸೆ.23- ರೈತರ ಜೀವನದ ಜೊತೆಯಲ್ಲಿ ಪ್ರಕೃತಿ ಒಂದು ರೀತಿಯಲ್ಲಿ ಸವಾಲನ್ನು ಒಡ್ಡುತ್ತಿದ್ದರೆ, ಆಡಳಿತ ಮಾಡುತ್ತಿರುವ ಸರ್ಕಾರ ದಿನಕ್ಕೊಂದು ಕಾಯ್ದೆ ತಂದು ರೈತರ ಜೀವನದ ಜೊತೆಯಲ್ಲಿ ಆಟ ಆಡಲು ಪ್ರಾರಂಭಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿದ್ದ ವಾಸನದ ಓಂಕಾರಪ್ಪ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವೇದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಖರೀದಿ ಕೇಂದ್ರವನ್ನು ತೆರೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಜಿಲ್ಲಾಧಿಕಾರಿ ಕಚೇರಿ ಮತ್ತು ತಹಶೀಲ್ದಾರ್ ಕಚೇರಿಯ ಮುಂದೆ ಇಟ್ಟು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ರೈತ ಮುಖಂಡರಾದ ಓಂಕಾರಪ್ಪನವರು ಸುಮಾರು 12 ವರ್ಷಗಳ ಕಾಲ ರೈತರ ಪರವಾಗಿ ಅನೇಕ ಹೋರಾಟ ಮಾಡುವ ಮೂಲಕ ರೈತ ಸಮುದಾಯದ ಹೃದಯದಲ್ಲಿ ಅಚ್ಚ ಅಳಿಯದ ರೀತಿಯಲ್ಲಿ ಉಳಿದುಕೊಂಡಿದ್ದರು. 2008 ರಲ್ಲಿ ಹಾವೇರಿ ಗೋಲಿಬಾರ್ ಮತ್ತು ದಾವಣಗೆರೆ ನಗರದ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಪ್ರಾರಂಭಿಸಿದ ಅವರು, ನಂತರದಲ್ಲಿ ಭದ್ರಾ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡ ಸಂದರ್ಭದಲ್ಲಿ ಅದನ್ನು ಪುನರ್ ಪ್ರಾರಂಭಿಸಲು ಹೋರಾಟ ಪ್ರಾರಂಭಿಸಿದಾಗ ದಾವಣಗೆರೆಯಿಂದ ಬೆಂಗಳೂರಿನವರೆಗೆ ಪಾದ ಯಾತ್ರೆ ಮತ್ತು ಜೈಲು ಬರೋ ಚಳವಳಿ ಮಾಡಿ, ಅದನ್ನು ಪುನರ್ ಪ್ರಾರಂಭ ಮಾಡಿ, ಯಶಸ್ವಿಯಾಗುವಲ್ಲಿ ಅವರ ಹೋರಾಟದ ಪಾತ್ರ ಕೂಡ ಹೆಚ್ಚಿದೆ ಎಂದು ಹೇಳಿದರು.
ಭದ್ರಾ ಸಕ್ಕರೆ ಕಾರ್ಖಾನೆಯ ಸುಮಾರು 185 ಎಕರೆ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಳ್ಳವುದಕ್ಕೆ ಮುಂದಾಗಿದ್ದ, ಸಂದರ್ಭದಲ್ಲಿ ಹೋರಾಟ ಮಾಡಿ ಅದನ್ನು ಕೈ ಬಿಡುವಂತೆ ಮಾಡಿದ ಕೀರ್ತಿ ವಾಸನದ ಓಂಕಾರಪ್ಪ ಅವರ ಹೋರಾಟಕ್ಕೆ ಸಲ್ಲುತ್ತದೆ. ರಾಣೇಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದ ಕಾರ್ಖಾನೆಗೆ ಜಮೀನನ್ನು ಕಳೆದುಕೊಂಡ ರೈತರಿಗೆ 8 ವರ್ಷಗಳಿಂದ ಪರಿಹಾರವನ್ನು ನೀಡಿದ್ದಿಲ್ಲ. ಹೋರಾಟ ಮಾಡಿ ಅವರಿಗೆ 8 ಕೋಟಿ ಪರಿಹಾರವನ್ನು ಕೊಡಿಸುವಲ್ಲಿ ಶ್ರಮಿಸಿದವರಲ್ಲಿ ಓಂಕಾರಪ್ಪನವರೂ ಒಬ್ಬರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಭುಗೌಡ, ಪಾಲಾಕ್ಷಪ್ಪ ಸಿರಿಗೆರೆ, ಮಹೇಶಪ್ಪ ದೊಗ್ಗಳ್ಳಿ, ಶಂಭುಲಿಂಗಪ್ಪ, ಗರಡಿಮನೆ ಬಸವರಾಜಪ್ಪ, ತಾ.ಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಪ್ರಕಾಶ್ ಭಾನುವಳ್ಳಿ, ಮಾರುತಿ ರಾವ್ ಪಾಮೇನಹಳ್ಳಿ,
ಕೆ. ಕರಿಬಸಮ್ಮ, ಗದಿಗೆಪ್ಪ, ಕರಿಯಪ್ಪ, ಸಿದ್ದೇಶ್.ಕೆ.ಬಿ., ಮಾಲತೇಶ್, ನಂದೀಶ್, ಬಸಪ್ಪ, ಎನ್.ಬಿ. ಪಾಟೀಲ್ ಪಾಳ್ಯ ಹಾಗೂ ಇತರರು ಹಾಜರಿದ್ದರು.