ಕೊಮಾರನಹಳ್ಳಿ ಕೆರೆ ಭರ್ತಿಗೆ 4 ಅಡಿ ಬಾಕಿ ಪ್ರಾಣಿ – ಪಕ್ಷಿಗಳಿಗೆ, ದನ-ಕರುಗಳಿಗೆ ಆಸರೆ

ಈ ಕೆರೆ ಅಭಿವೃದ್ಧಿ ಆದರೆ ಪ್ರವಾಸಿ ತಾಣವನ್ನಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಮಲೇಬೆನ್ನೂರು, ಸೆ. 12- ಕೊಮಾರನ ಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ  ಕೆರೆಗೆ ಮತ್ತಷ್ಟು ನೀರು ಹರಿದು ಬಂದಿದ್ದು,  ಕಳೆದ ಭಾನುವಾರ ಮತ್ತು ಮಂಗಳವಾರ ಸುರಿದ ಮಳೆಯಿಂದಾಗಿ ಕೆರೆ ಭರ್ತಿಗೆ  4 ಅಡಿ ಮಾತ್ರ ಬಾಕಿ ಇದೆ. ಪ್ರಾಣಿ- ಪಕ್ಷಿಗಳಿಗೆ, ದನ-ಕರುಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಾಗದಂತೆ ಈ ಮೊದಲು ಗ್ರಾಮಸ್ಥರು ಕಾಳಜಿ ವಹಿಸಿ, ಭದ್ರಾ ಕಾಲುವೆಯಿಂದ ಕೆರೆಗೆ ನೀರು ಹರಿಸಿದ್ದರು. 

ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೆರೆ ಸುಮಾರು 97 ಎಕರೆ ವಿಸ್ತೀರ್ಣ ಹೊಂದಿದ್ದು, ಮಳೆ ನೀರಿನ ಹರಿವು ಇಲ್ಲದಂತಾಗಿ, ಕಳೆದ 10 ವರ್ಷಗಳಿಂದ ಭರ್ತಿಯಾಗಿಲ್ಲ.

ಬಿ.ಪಿ. ಹರೀಶ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಹಾಮಳೆಗೆ ಈ ಕೆರೆ ಭರ್ತಿಯಾಗಿ ಕೋಡಿ ಬಿದ್ದಿತ್ತು. ಆಗ ಗ್ರಾಮಸ್ಥರು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ತೆಪ್ಪೋತ್ಸವ ಆಚರಿಸಿ, ಸಂಭ್ರಮಿಸಿದ್ದರು.

ನಂತರ ಇದುವರೆಗೂ ಕೆರೆ ಮಳೆ ನೀರಿನಿಂದ ಭರ್ತಿಯಾಗಿಲ್ಲ. ಕಳೆದ ವರ್ಷ ಭಾರೀ ಮಳೆ ಸುರಿದು ರಾಜ್ಯದ ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗಿದ್ದವು. ಆದರೆ ಈ ಕೆರೆಗೆ ಕೆರೆಯ ಕಾಲು ಭಾಗದಷ್ಟು ನೀರು ಹರಿದು ಬಂದಿರಲಿಲ್ಲ. 

ಈ ಕೆರೆಯಲ್ಲಿ ನೀರಿದ್ದರೆ ಕೆರೆಯ ಸುತ್ತ ಮುತ್ತಲಿನ ಬೋರ್‌ವೆಲ್‌ಗಳಿಗೂ ಅನುಕೂಲ ವಾಗಲಿದೆ. ಅಂತರ್ಜಲವೂ ವೃದ್ಧಿಯಾಗಲಿದೆ. ಇದನ್ನು ಮನಗಂಡ ಕೊಮಾರನಹಳ್ಳಿ ಗ್ರಾಮಸ್ಥರು ಹಾಗೂ ಕೆರೆ ನೀರು ಬಳಕೆದಾರರ ಸಂಘದವರು ಕೆರೆ ಪಕ್ಕದಲ್ಲೇ ಹರಿಯುತ್ತಿರುವ ಭದ್ರಾ ನಾಲೆಯಿಂದ ಪಂಪ್‌ಸೆಟ್ ಮೂಲಕ ನೀರು ಎತ್ತಿ ಕೆರೆಗೆ ಹರಿಸಿದ್ದರು.

ಮಳೆಗಾಲ ಆಗಿದ್ದರಿಂದ ಕೊನೆ ಭಾಗದ ರೈತರಿಗೂ ಭದ್ರಾ ಕಾಲುವೆ ನೀರಿನ ತೊಂದರೆ ಆ ಸಂದರ್ಭದಲ್ಲಿ ಇರಲಿಲ್ಲ. ಬಳಕೆ ಆಗದೆ ಹಳ್ಳ-ನದಿ ಸೇರುತ್ತಿದ್ದ ನೀರನ್ನು ಕನಿಷ್ಟ 1 ತಿಂಗಳು ಕೆರೆಗೆ ಹರಿಸಿದಾಗ ಕೆರೆ ಅರ್ಧದಷ್ಟು ತುಂಬಿತು.

ಈ ವರ್ಷವೂ ಕೆರೆಗೆ ನಿರೀಕ್ಷಿಸಿದಷ್ಟು ಮಳೆ  ನೀರು ಹರಿದು ಬರಲಿಲ್ಲ. ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟ ಸಂದರ್ಭದಲ್ಲೂ ಬಹಳಷ್ಟು ನೀರು ಬಳಕೆ ಆಗದೇ ಹಳ್ಳಗಳಿಗೆ ಹರಿಯುತ್ತಿತ್ತು. 

ಆಗ ಕೊಮಾರನಹಳ್ಳಿ ಗ್ರಾಮಸ್ಥರು ಮತ್ತೆ ಪಂಪ್‌ಸೆಟ್‌ಗಳ ಮೂಲಕ ಕಾಲುವೆಯಿಂದ ಕೆರೆಗೆ ನೀರು ಹರಿಸಿದರು. ಇದರಿಂದಾಗಿ ಕೆರೆಗೆ ಶೇ. 75ರಷ್ಟು ನೀರು ಸಂಗ್ರಹವಾಗಿತ್ತು. ಇದೀಗ ಮಳೆ ನೀರು ಸೇರಿದ್ದರಿಂದ ಕೆರೆ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಹೆದ್ದಾರಿ ಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಗಮನ  ಸೆಳೆಯುತ್ತಿದೆ. ಕೆರೆಯಲ್ಲಿ ಮೀನುಗಳನ್ನೂ ಬಿಡಲಾಗಿದೆ. ಹೆಚ್. ಶಿವಪ್ಪನವರು ಶಾಸಕರಾಗಿದ್ದ ಸಂದರ್ಭದಲ್ಲಿ ಈ ಕೆರೆಗೆ ಭದ್ರಾ ನಾಲೆಯಿಂದ 1 ಕ್ಯೂಸೆಕ್ಸ್ ನೀರು ಹರಿಸಲು ನೀರಾವರಿ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತೆಂದು ಹೇಳಲಾಗುತ್ತಿದೆ.

ನಿರಂತರ ಪ್ರಯತ್ನ : ಶಾಸಕ ಎಸ್. ರಾಮಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್ ಅವರು ಈ ಕೆರೆಯನ್ನು ಅಭಿವೃದ್ಧಿಪಡಿಸಿ, ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗಾಗಿ ಕಳೆದ 3-4 ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಹೊನ್ನಾಳಿ ತಾಲ್ಲೂಕಿನ ನಾಲ್ಕೈದು ಕೆರೆಗಳ ಜೊತೆಗೆ ಕೊಮಾರನಹಳ್ಳಿ ಕೆರೆಗೂ ತುಂಗಭದ್ರಾದಿಂದ  ನೀರು ಹರಿಸುವ ಯೋಜನೆ ಸಿದ್ದಪಡಿಸಲಾಗಿತ್ತು. ಈಗ ಬಿಜೆಪಿ ಸರ್ಕಾರ ಇರುವುದರಿಂದ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್ ಅವರು ಕೆರೆ ಅಭಿವೃದ್ಧಿ ಯೋಜನೆಗೆ  ಮಂಜೂ ರಾತಿ ಕೊಡಿಸಲು ಶ್ರಮಿಸಬೇಕೆಂಬುದು ಶಾಸಕ ರಾಮಪ್ಪ ಅವರ ಮನವಿ ಆಗಿದೆ. 

ಈ ಕೆರೆ ಅಭಿವೃದ್ಧಿ ಆದರೆ ಪ್ರವಾಸಿ ತಾಣ ವನ್ನಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶ ವಾಗಿದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಕ್ಷೇತ್ರದ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಅವರೂ ಸಹ ಕೆರೆ ಅಭಿವೃದ್ಧಿ ಗಾಗಿ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಶಾಸಕ ರಾಗಿದ್ದ  ಹೆಚ್.ಎಸ್. ಶಿವಶಂಕರ್ ಅವರೂ ಕೂಡಾ ಕೆರೆ ಅಭಿವೃದ್ಧಿಗೆ ಪ್ರಯತ್ನಿಸಿದ್ದರು. ಆದರೆ ಆಗಿದ್ದ ಸರ್ಕಾರ ಸ್ಪಂದಿಸಲಿಲ್ಲ.

ಬಿ.ಪಿ. ಹರೀಶ್ ಅವರು ಶಾಸಕರಾಗಿದ್ದಾಗ ಕೆರೆಯ ಮಧ್ಯದಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ನಡುಗಡ್ಡೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


ಜಿಗಳಿ ಪ್ರಕಾಶ್,
[email protected]

error: Content is protected !!