ಹರಪನಹಳ್ಳಿ, ಸೆ. 12 – ಮಹಾ ನಾಯಕ ಧಾರಾವಾಹಿ ನಿಲ್ಲಿಸುವಂತೆ ಕೊಲೆ ಬೆದರಿಕೆ ಹಾಕಿ ದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಾದಿಗ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಯರಬಾಳು ಹನುಮಂತಪ್ಪ ಒತ್ತಾಯಿಸಿದ್ದಾರೆ.
ಪಟ್ಟಣದ ಹೊಸಪೇಟೆ ರಸ್ತೆ ಹೆದ್ದಾರಿಯ ಪಕ್ಕದಲ್ಲಿರುವ ಬಾಬು ಜಗಜೀವನರಾಮ್ ಭವನದಲ್ಲಿ ಮಾದಿಗ ಮಹಾಸಭಾ ಹಾಗೂ ವಿವಿಧ ಸಮಾಜಗಳ ಸಂಘಟನೆಗಳ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ರವರ ಜೀವನ ಚರಿತ್ರೆ ಜೀ ಕನ್ನಡ ಟಿವಿಯಲ್ಲಿ ಪ್ರಸಾರವಾಗುವ ಮಹಾನಾಯಕ ಧಾರಾವಾಹಿಯ ಪ್ರಸಾರ ನಿಲ್ಲಿಸುವಂತೆ ಜೀವ ಬೆದರಿಕೆ ಹಾಕಿರುವುದು ಖಂಡನೀಯ ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯರುಗಳಾದ ಓ. ರಾಮಪ್ಪ ಹಾಗೂ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ ಜಿ ಟಿವಿ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರಿಗೆ ಕೊಲೆ ಬೆದರಿಕೆ ಹಾಕಿರುವ, ಈ ಸೀರಿಯಲ್ ನಿಲ್ಲಿಸುವಂತೆ ಒತ್ತಡ ಹಾಕುತ್ತಿರುವವರನ್ನು ಕೂಡಲೇ ಬಂಧಿಸಬೇಕು. ಕೊಲೆ ಬೆದರಿಕೆ ಹಾಕಿರುವವರು ಯಾರೇ ಆಗಿರಲಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ತಾಲ್ಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ. ಮಾದಿಗ ಮಹಾಸಭಾದ ತಾಲ್ಲೂಕು ಕಾರ್ಯದರ್ಶಿ ಹೆಚ್.ನಾಗೇಂದ್ರಪ್ಪ. ಮಾದಿಗ ಮಹಾಸಭಾದ ರಾಜ್ಯ ವಕ್ತಾರ ನಿಚ್ಚವ್ವನಹಳ್ಳಿ ರವಿಕುಮಾರ್, ಹರಳಯ್ಯ ಅಭಿವೃದ್ಧಿ ಸಮಾಜದ ಕಾರ್ಯದರ್ಶಿ ಸಂದೀಪ, ವಕೀಲರಾದ ಪುಣಬಘಟ್ಟ ನಿಂಗಪ್ಪ, ಮುಖಂಡರಾದ ಹಲವಾಗಲು ಶ್ರೀನಿವಾಸ, ಕೆ.ಎಂ. ಅಂಜನಪ್ಪ ದಳವಾಯಿ, ಚನ್ನಬಸಪ್ಪ ಗುಂಡಗತ್ತಿ ಪುಟ್ಟಪ್ಪ, ನಿಚ್ಚವ್ವನಹಳ್ಳಿ ಮಲ್ಲೇಶ್,
ಪಿ. ಮಲ್ಲಪ್ಪ ಪಿ. ಕೆಂಚಪ್ಪ, ಬಿ.ಉಮೇಶ್ ಹಾಗೂ ಇತರರು ಇದ್ದರು.