ದೇಶದಲ್ಲೀಗ ಕೊರೊನಾ ಎರಡನೇ ಅಲೆಯ ಕಳವಳ

ಗುಲೇರಿಯಾ ನಂತರ ಎರಡನೇ ಅಲೆ ಎಚ್ಚರಿಕೆ ನೀಡಿದ ಮಹಾರಾಷ್ಟ್ರದ  ಸಿಎಂ ಉದ್ಧವ್‌ ಠಾಕ್ರೆ

ನವದೆಹಲಿ, ಸೆ. 13 – ಕೊರೊನಾ ಸಮಸ್ಯೆಯಿಂದ ದೇಶ ಏದುಸಿರು ಬಿಡುತ್ತಿರುವ ನಡುವೆಯೇ, ಎರಡನೇ ಕೊರೊನಾ ಅಲೆಯ ಕಳವಳ ಆರಂಭವಾಗಿದೆ. ದೆಹಲಿ ಸೇರಿದಂತೆ ಹಲವೆಡೆ ಇಳಿಮುಖವಾಗಿದ್ದ ಕೊರೊನಾ ಪ್ರಕರಣಗಳು ಮತ್ತೆ ಏರುತ್ತಿವೆ. ಈ ನಡುವೆಯೇ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸುವ ಹಾಗೂ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಗಳು ಹೆಚ್ಚಾಗುತ್ತಿವೆ. ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ಜನರು ತಮ್ಮ ಹೊಣೆ ನಿಭಾಯಿಸಬೇಕು ಹಾಗೂ ಸಾಮಾಜಿಕ ಆಂತರ ಕಾಯ್ದುಕೊಳ್ಳಬೇಕು ಎಂದು ಠಾಕ್ರೆ ಹೇಳಿದ್ದಾರೆ.

ದೇಶದಲ್ಲಿ ಕೊರೊನಾದ ಎರಡನೇ ಅಲೆ ಬರಬಹುದಾಗಿದೆ. ಭಾರತ ಹಾಗೂ ವಿಶ್ವದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಎರಡನೇ ಅಲೆ ಇರಬಹುದು. ಈ ಬಗ್ಗೆ ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ, ಕೊರೊನಾ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗದಂತೆ ತಡೆಯಬೇಕಿದೆ. ಎರಡನೇ ಅಲೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ನಡೆಸಬೇಕಿದೆ ಎಂದವರು ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾದ ಎರಡನೇ ಅಲೆ ಕೆಲವೆಡೆ ಆರಂಭವಾಗಿದೆ ಎಂದು ಎ.ಐ.ಐ.ಎಂ.ಎಸ್.ನ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಕಳೆದ ವಾರ ತಿಳಿಸಿದ್ದರು.

ಮಹಾರಾಷ್ಟ್ರ, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿತ್ತು.

ದೆಹಲಿಯಲ್ಲಿ ಎರಡು ತಿಂಗಳ ಕಾಲ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳು, ಮತ್ತೆ ತೀವ್ರ ಸ್ವರೂಪದಲ್ಲಿ ಉಲ್ಬಣಿಸುತ್ತಿವೆ.

ಕೊರೊನಾದಿಂದ ಜನ ಸಾಮಾನ್ಯರು ಹೈರಾಣಾಗಿರುವ ರೀತಿಯಲ್ಲೇ ಆರೋಗ್ಯ ವ್ಯವಸ್ಥೆಯೂ ಸುಸ್ತಾಗಿದೆ. ಕಳೆದ ಆರು ತಿಂಗಳಿನಿಂದ ಒತ್ತಡದಲ್ಲಿ ಸಿಲುಕಿರುವ ವೈದ್ಯಕೀಯ ವ್ಯವಸ್ಥೆ, ಈಗ ಎರಡನೇ ಅಲೆ ಬಂದರೆ ಎದುರಿಸುವುದು ಇನ್ನಷ್ಟು ಕಷ್ಟವಾಗಲಿದೆ.

ಕೊರೊನಾ ಭೀತಿಯಿಂದಾಗಿ ಮಾರ್ಚ್ ತಿಂಗಳಲ್ಲಿ ಸರ್ಕಾರ ಕಠಿಣ ಲಾಕ್‌ಡೌನ್ ಹೇರಿತ್ತು. ಆದರೆ, ಎರಡನೇ ಅಲೆ ಉದ್ಭವಿಸಿದಲ್ಲಿ ಆ ಆಯ್ಕೆ ಸಿಗುವ ಸಾಧ್ಯತೆ ಇಲ್ಲ. ಕೊರೊನಾ ಎದುರಿಸುತ್ತಲೇ ಅಷ್ಟೋ ಇಷ್ಟೋ ಇರುವ ಆರ್ಥಿಕತೆಯನ್ನೂ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಕೊರೊನಾ ಏನೇ ವಿಕೋಪದಲ್ಲಿದ್ದಲ್ಲಿದ್ದರೂ, ಆರ್ಥಿಕತೆಯ ಕಡೆ ಗಮನ ಹರಿಸಲೇ ಬೇಕಿದೆ.

ಆರೋಗ್ಯದೊಂದಿಗೆ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿರುವುದರಿಂದ, ವಿಶ್ವದ ಯಾವುದೇ ದೇಶ ಕಠಿಣ ಲಾಕ್‌ಡೌನ್‌ಗಳಿಗೆ ಮುಂದಾಗುತ್ತಿಲ್ಲ. ಆರ್ಥಿಕವಾಗಿ ಸಾಕಷ್ಟು ಬಳಲಿರುವ ಭಾರತದಲ್ಲಿ ಲಾಕ್‌ಡೌನ್‌ ಇನ್ನು ಸುಲಭವಲ್ಲ. ಜನರು ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆ ವಹಿಸುವುದು ಮಾತ್ರ ಎರಡನೇ ಅಲೆಯಲ್ಲಿ ಉಳಿಯಲಿರುವ ಮಾರ್ಗವಾಗಲಿದೆ.

error: Content is protected !!