ಶಿಕ್ಷಕರು ಕಲಿಸುವ ವ್ಯಾಮೋಹ ಬೆಳೆಸಿಕೊಳ್ಳಿ : ವಾಮದೇವಪ್ಪ

ಶಿಕ್ಷಕರು ಕಲಿಸುವ ವ್ಯಾಮೋಹ ಬೆಳೆಸಿಕೊಳ್ಳಿ : ವಾಮದೇವಪ್ಪ - Janathavani

ದಾವಣಗೆರೆ, ಸೆ. 13- ಮಕ್ಕಳಿಗೆ ಕಲಿಸುವ ಮತ್ತು ಸ್ವತಃ ಕಲಿಯುವ ವಿಚಾರದಲ್ಲಿ ಶಿಕ್ಷಕರಿಗೆ ಪ್ರೀತಿ, ವ್ಯಾಮೋಹ, ಉತ್ಸಾಹ ಇದ್ದಾಗ ಮಾತ್ರ ಸೇವೆಯಲ್ಲಿ ಸಂತೃಪ್ತಿ ಸಿಗಲು ಸಾಧ್ಯ. ಅಂತಹ ವ್ಯಾಮೋಹವನ್ನು ಪ್ರತಿಯೊಬ್ಬ ಶಿಕ್ಷಕರೂ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ವಿ. ವಾಮದೇವಪ್ಪ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈಚೆಗೆ  ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ವಾಮದೇವಪ್ಪ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಬೆಳಕಿಗೆ ತರುವ ಗುಣಬೇಕು. ಆಳವಾದ ಕಳಕಳಿ, ಅತ್ಯುತ್ತಮ ಕಲಿಸುವಿಕೆ ಜೊತೆಗೆ ಸಂಶೋಧನಾರ್ಥಿ ಯಾಗಿಯೂ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲ ಶಿಕ್ಷಣ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯ, ಸಮುದಾಯ ಸಂಬಂಧಗಳ ಮೂಲಕ ಉನ್ನತ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಪಾಠ ಕಲಿಸಬೇಕು. 

ವಿಭಿನ್ನ ಕೌಶಲ್ಯಗಳನ್ನು ರೂಢಿಸಿ ಕೊಂಡು ಅಧ್ಯಯನ, ಅಧ್ಯಾಪಕ, ಸಂಶೋಧನೆ, ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿ, ವಿಶ್ವವಿದ್ಯಾನಿಲಯವನ್ನು ಅತ್ಯುನ್ನತ ಸ್ಥಾನಕ್ಕೇರಿಸಲು ಕೈಜೋಡಿಸಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ, ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜ್ಞಾನ, ವಿದ್ಯೆ, ಕಲಿಯುವ ಆಸಕ್ತಿಗಳಿಂದ ಉನ್ನತ ಸ್ಥಾನಕ್ಕೇರಿದರು. ಒಟ್ಟು 14 ಭಾಷೆಗಳನ್ನು ಕಲಿತಿದ್ದ ಅವರು, ಅವುಗಳ ಸಾರಸತ್ವವನ್ನು ತಿಳಿದಿದ್ದರು. ತತ್ವಶಾಸ್ತ್ರ, ಭಾರತೀಯ ಪಾರಂಪರಿಕ ಶಿಕ್ಷಣ ಮೌಲ್ಯಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಕಲಾ ನಿಕಾಯದ ಡೀನ್ ಪ್ರೊ. ಕೆ.ಬಿ.ರಂಗಪ್ಪ, ವಿಜ್ಞಾನ ನಿಕಾಯದ ಡೀನ್ ಪ್ರೊ. ವಿ. ಕುಮಾರ್, ಐಕ್ಯೂಎಸಿ ನಿರ್ದೇಶಕಿ ಪ್ರೊ. ಗಾಯತ್ರಿ ದೇವರಾಜ್, ಡಾ. ಭೀಮಾಶಂಕರ ಜೋಶಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕದ ಸಂಯೋಜನಾಧಿಕಾರಿ ಕುಮಾರ ಸಿದ್ಧ ಮಲ್ಲಪ್ಪ ಸ್ವಾಗತಿಸಿದರು. ಡಾ. ರಮೇಶ್ ಚಂದ್ರಹಾಸ್ ವಂದಿಸಿದರು. ಡಾ. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ ಪ್ರಾಧ್ಯಾಪಕರಿಗೆ ಐಕ್ಯೂಎಸಿ ವತಿಯಿಂದ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.

error: Content is protected !!