ರುದ್ರಭೂಮಿ ಮೂಲಭೂತ ಸಹಿತ ಉದ್ಯಾನವನದಂತಿರಲಿ

ಮೇಯರ್ ಅಜಯ್ ಕುಮಾರ್ ಸೂಚನೆ

ದಾವಣಗೆರೆ, ಸೆ.13- ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರದ ಹಿಂದೂ ರುದ್ರಭೂಮಿ, ವೀರಶೈವ ರುದ್ರಭೂಮಿ, ಬೂದಾಳ್‍ನ ಹಿಂದೂ ರುದ್ರಭೂಮಿಗೆ  ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರು ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು. 

ಬೂದಾಳ್‍ನ ಹಿಂದೂ ರುದ್ರಭೂಮಿಯು ಎರಡು ಎಕರೆ ಇಪ್ಪತ್ತು ಗುಂಟೆ ಸುತ್ತಳತೆ ಹೊಂದಿದ್ದು, ಸುತ್ತಲೂ ಕಾಂಪೌಂಡ್ ನಿರ್ಮಾಣ, ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ, ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳನ್ನು ಅಳವಡಿಸುವುದು ಮತ್ತು ಗಾಂಧಿ ನಗರದ ಹಿಂದೂ ಹಾಗೂ ವೀರಶೈವ ರುದ್ರಭೂಮಿಯಲ್ಲಿ ಶೆಲ್ಟರ್ ನಿರ್ಮಿಸಿ ಆಸನದ ವ್ಯವಸ್ಥೆ (ಶೆಲ್ಟರ್), ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಜೆಯಿಂದ ಮುಂಜಾನೆಯವರೆಗೆ ಸ್ವಯಂ ಚಾಲಿತ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಎಲ್ಲಾ ಕಾಮಗಾರಿಗಳ ಅಂದಾಜು ಮೊತ್ತವನ್ನು ಶೀಘ್ರವೇ ಸಿದ್ದಪಡಿಸಬೇಕು. ತಿಂಗಳಿಗೆ  ಎರಡು ಬಾರಿ ರುದ್ರಭೂಮಿಯನ್ನು ಸ್ವಚ್ಛಗೊಳಿಸುವ ಮೂಲಕ ರುದ್ರಭೂಮಿಯನ್ನು ಉದ್ಯಾನವನದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. 

ನಾಡಿದ್ದು ದಿನಾಂಕ 15ರಂದು ಸತ್ಯಹರಿಶ್ಚಂದ್ರ ಜಯಂತಿಯ ಅಂಗವಾಗಿ ವೀರಶೈವ ರುದ್ರಭೂಮಿಯಲ್ಲಿ ರುವ ಪುತ್ಥಳಿಯ ಆವರಣವನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಜಯಂತಿ ಆಚರಿಸಬೇಕೆಂದರು. 

ರುದ್ರಭೂಮಿಗಳಲ್ಲಿ ಅನೈತಕ ಚಟುವಟಿಗಳು ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದು, ಮತ್ತೊಮ್ಮೆ ಹೀಗೆ ನಡೆಯದಂತೆ ಕ್ರಮ ವಹಿಸುವಂತೆ ಸಿಬ್ಬಂದಿಗಳಿಗೆ ಎಚ್ಚರಿಸಿದರು.

ಈ ವೇಳೆ ರಾಜ್ಯ ಬಿಜೆಪಿ ಪ್ರಕೋಷ್ಟಗಳ ಸಂಯೋಜಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ನಗರ ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಎಲ್.ಡಿ. ಗೋಣೇಪ್ಪ, ಸೋಗಿ ಶಾಂತ್ ಕುಮಾರ್, ಜೆ.ಡಿ. ಪ್ರಕಾಶ್, ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಉಪ ಆಯುಕ್ತರು, ಅಭಿಯಂತರರು, ಆರೋಗ್ಯ ಅಧಿಕಾರಿಗಳು ಇದ್ದರು.

error: Content is protected !!