ಹರಪನಹಳ್ಳಿ, ಸೆ.13- ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಘ, ಸಂಸ್ಥೆಗಳು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಭರತ್ ಡಿ. ತಳವಾರ್ ಹೇಳಿದರು.
ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಜೆಸಿಐ ಸಪ್ತಾಹದ ನಿಮಿತ್ತ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಗೆ ಕೊಡುಗೆಯಾಗಿ ನೀಡಿದ ನೀರು ಶುದ್ಧೀಕರಣ ಯಂತ್ರ ಸ್ವೀಕರಿಸಿ ಮಾತನಾಡಿ, ಜೆಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನ ಜೊತೆಗೆ ವಿವಿಧ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಆ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ಮುಂಚೂಣಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಜೆಸಿಐ ಸಂಸ್ಥೆ ಪೂರ್ವಾಧ್ಯಕ್ಷ ಹೇಮಣ್ಣ ಮೋರಿಗೇರಿ ಮಾತನಾಡಿ, ಕಾಡಂಚಿನಲ್ಲಿ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳು ಪ್ರಾಕೃತ್ತಿಕ ಸಂಪತ್ತು ರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಜೆಸಿಐ ಉಪಾಧ್ಯಕ್ಷ ಎ.ವೀರನಗೌಡ್ರು ಮಾತನಾಡಿ, ರಕ್ತದ ಗುಂಪು ತಪಾಸಣೆ ಮತ್ತು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಜೆಸಿಐ ಅಧ್ಯಕ್ಷ ಡಿ. ವಿಶ್ವನಾಥ, ಶಿವಕುಮಾರ, ಕಾರ್ಯದರ್ಶಿ ಎಲ್.ಎ. ಮಹೇಶ್, ಉಪಾಧ್ಯಕ್ಷ ಪಿ.ಶರತ್ ಬಾಬು, ಎ.ವಿ.ಅರುಣ್ ಕುಮಾರ್, ಸಿ.ಕರಿಯಪ್ಪ, ಕೆಂಚಪ್ಪ, ಪ್ರಸನ್ನಕುಮಾರ ಜೈನ್ ಹಾಗು ಇತರರು ಇದ್ದರು.