ದಾವಣಗೆರೆ, ಸೆ.11- ಭದ್ರಾ ಮೇಲ್ದಂಡೆ ಯೋಜನೆಯಡಿ ತಜರ ಸಮಿತಿ ಅಂತಿಮ ವರದಿಯಂತೆ ಜಗಳೂರು ತಾಲ್ಲೂಕಿಗೆ ಪ್ರತ್ಯೇಕವಾಗಿ 2.40 ಟಿಎಂಸಿ ನೀರು ಮೀಸಲಿಡುವ ವಿಚಾರವನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ತಜರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ತಜ್ಞರ ಸಮಿತಿ ವರದಿ ಯು ಮುಖ್ಯಮಂತ್ರಿಗಳಿಂದ ಅನುಮೋದಿಸಲ್ಪಟ್ಟು ಮುಖ್ಯ ಇಂಜಿನಿಯರ್‍ಗೆ ಕ್ರಮ ವಹಿಸಲು ನಿರ್ದೇಶಿಸಲಾಗಿತ್ತು. ಅದರಂತೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಜಗಳೂರು ತಾಲ್ಲೂಕಿಗೆ 2.40 ಟಿಎಂಸಿ ನೀರನ್ನು ಹಂಚಿಕೆ ಮಾಡುವ ಕುರಿತಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ಡ್ಯಾಮ್‍ನಿಂದ 17.4 ಟಿಎಂಸಿ ನೀರನ್ನು ಭದ್ರಾ ಡ್ಯಾಮ್‍ಗೆ ಲಿಫ್ಟ್ ಮಾಡಬೇಕು. ಭದ್ರಾ ಜಲಾಶಯದಿಂದ 12.5 ಟಿಎಂಸಿ ನೀರನ್ನು ಮಳೆಗಾಲದಲ್ಲಿ ಮೋಟಾರ್‍ಗಳ ಮೂಲಕ ಪಂಪ್ ಮಾಡಬೇಕು. ಆದರೆ ಈವರೆಗೂ ತುಂಗಾ ಡ್ಯಾಮ್‍ನಿಂದ ಭದ್ರಾ ಜಲಾಶಯಕ್ಕೆ ನೀರು ಬಂದಿಲ್ಲ. ಕೂಡಲೇ ಮೋಟಾರ್‍ಗಳನ್ನು ಚಾಲನೆ ಮಾಡಿ, ತುಂಗಾದಿಂದ ಭದ್ರಾಗೆ ನೀರು ಹರಿಸಬೇಕು. 28 ಟಿಎಂಸಿ ಸಾಮರ್ಥ್ಯದ ವಾಣಿವಿಲಾಸ ಸಾಗರವನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
57 ಕೆರೆಗಳಿಗೆ ನೀರು ತುಂಬಿಸುವ ದೀಟೂರು ಏತ ನೀರಾವರಿ ಯೋಜನೆಯಲ್ಲಿ ತುಂಗಭದ್ರಾ ನದಿಯಿಂದ ಚಟ್ನಹಳ್ಳಿ ಗುಡ್ಡದವರಿಗೆ 200 ಮೀಟರ್ ವ್ಯಾಪ್ತಿಯಲ್ಲಿ ಏರ್ ವೆಸೆಲ್ ಮಾತ್ರ ಹಾಕಿರುವುದು ಸರಿಯಲ್ಲ. ಇದರಿಂದ ಒತ್ತಡ ಹೆಚ್ಚಾಗಿ, ಮೋಟಾರ್ ಕೆಟ್ಟರೆ ನೀರೆತ್ತಲು ತೊಂದರೆಯಾಗುತ್ತದೆ. ಆದ್ದರಿಂದ ರೈಸಿಂಗ್ ಮೇನ್‍ನಲ್ಲಿ ಐದಾರು ಏರ್ ವೆಸೆಲ್ ಟ್ಯಾಂಕ್‍ಗಳನ್ನು ನಿರ್ಮಿಸುವುದು ಸೂಕ್ತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸಗೋಡು ಸುರೇಶ್, ಮಲ್ಲಿಗೌಡ್ರು, ಸಂಪತ್ ಕುಮಾರ್, ಕೆ.ಜಿ. ಪ್ರಭಾಕರ್ ಇದ್ದರು.