ಮುತ್ತಿನಂಥವಳು

ಇಬ್ಬನಿಯ ಕಣ್ಣ ಕಂಬನಿಯ ಬನಿಯ
ನುಂಡವಳ ಕೆನ್ನೆ ಹೊಳೆದು
ಅವಳಳುವ ಅಳಿಸಲಾ ಕೆನ್ನೆಗೊಂದು
ಮುತ್ತಿಡಲು, ನನ್ನ ಸೆಳೆದು.

ಅವಳೆಂದೂ ಏನೂ ಕೇಳ್ದವಳೇ ಅಲ್ಲ
ಇಂದೇಕೋ ಮನಸುಮಾಡಿ
ನಾ ಕಾವ್ಯದೊಳಗೆ ಮುಳುಗಿರಲು ತಿವಿದು
ಕೇಳಿದಳು ಕಾಡಿ, ಬೇಡಿ.

ನನ್ನದೊಂದು ಸಣ್ಣ ಕುಡಿಕೋಪ ಮೇರೆ
ಮೀರಿರಲು ತಾಳ್ಮೆಗೆಟ್ಟೆ
ನನ್ನವಳ ಹವಳದಾ ಕೆನ್ನೆಗೊಂದು
ತಪರಾಕಿಯನ್ನು ಕೊಟ್ಟೆ.

ನನ್ನ ಹಮ್ಮಿನೊಳಗೆ ಗರಿಗೆದರಿ ತಂತು
ಮನಃ ಕೋಪ-ತಾಪಗಳನು
ನಾನೊಮ್ಮೆ ಸುಮ್ಮನಿರದಿದ್ದ ಫಲವು
ಒಡೆದಿತ್ತು ಮನಸುಗಳನು.

ಒಂದಿನಿತು  ತಿರುಗಿ ನೋಡಿದರೂ ಸಾಕಿತ್ತು
ಕಮಲಗೆನ್ನೆ ಮುಖವ
ಆ ಕೆಟ್ಟ ಸಿಟ್ಟು ಎಷ್ಟಿದ್ದರೂನು
ಸೆಳೆದುಣಿಸುತ್ತಿತ್ತು ಸುಖವ.

ಖಾಲಿ ಕೈಯ ಕವಿಯೊಬ್ಬ ನಾನು
ತುಂಬುವುದೇ ಕಷ್ಟ ಹೊಟ್ಟೆ
ನೀ ಕೇಳ್ದ ಮುತ್ತು ತರಲಾಗದೆ ನಗೆ
ಎನಂತೆರಡು ಮುತ್ತನಿಟ್ಟೆ.

ಇವೇ ಮುತ್ತ ನಾ ಕೇಳಿದುದು, ನೀ
ಎನ್ನ ಹೊಡೆದು ಬಿಟ್ಟೆ
ಎನಲು ಅವಳ ಬರಸೆಳೆದು ತಬ್ಬಿ
ಆತ್ತತ್ತು ಮುತ್ತನಿಟ್ಟೆ.


ವೀರನಗೌಡ ಪಾಟೀಲ (ಸಾಮ)
ಸೋಮನಕಟ್ಟಿ.

error: Content is protected !!