ಜಿಲ್ಲೆಯ ಕೋವಿಡ್ ಸ್ಥಿತಿಗತಿ ಮತ್ತು ಮಳೆ, ಬೆಳೆ ಹಾನಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ
ಪೊಲೀಸ್ ಇಲಾಖೆಯವರು ಇಲ್ಲಿಯವರೆಗೆ ಮಾಸ್ಕ್ ಹಾಕದವರಿಂದ 25 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ ಹಾಗೂ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಧರಿಸಲು ಜಾಗೃತಿ ಮೂಡಿಸಲಾಗುತ್ತಿದೆ.
ದಾವಣಗೆರೆ, ಸೆ.10 – ಜಿಲ್ಲಾಡಳಿತ ಭವನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಇಂದು ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬೆಳೆ ಹಾನಿ ರಸಗೊಬ್ಬರ ಕುರಿತಾಗಿ ಮಾಹಿತಿ ನೀಡಿದರು.
ಕೊರೊನಾ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದೇವೆ. ಮುಖ್ಯಮಂತ್ರಿಯವರು ಕೇಳಿದ ಜಿಲ್ಲೆಯ ಸಾವಿನ ಪ್ರಮಾಣ ಕುರಿತ ಪ್ರಶ್ನೆಗೆ, ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ತಿಂಗಳಿಗಿಂತ ಸಾವಿನ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣ ಕಂಡುಬರುವ ವ್ಯಕ್ತಿಗಳನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಿ ತ್ವರಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚು ಹೆಚ್ಚು ಪರೀಕ್ಷೆ ಮಾಡುವುದು, ಈ ಪರೀಕ್ಷೆಗಳಿಂದ ಗುರುತಿಸಲಾದ ಪ್ರಾಥಮಿಕ ಸಂಪರ್ಕ ದುರ್ಬಲ ವರ್ಗ, ಬಿಪಿ, ಶುಗರ್ ಹಾಗೂ ಡೆತ್ ಪ್ಯಾಕೆಟ್ ಜಾಸ್ತಿ ಇರುವ ಕಡೆ ಹೆಚ್ಚು ಪರೀಕ್ಷೆಗೆ ಒಳಪಡಿಸಿ, ಅವರಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲು ಶ್ರಮಿಸಲಾಗುತ್ತಿದೆ ಎಂದರು ಹಾಗೂ ಎಲ್ಲಾ ಕಡೆ ಆಕ್ಸಿಜನ್ ವ್ಯವಸ್ಥೆ ಸರಿಯಾಗಿ ಮಾಡಲಾಗಿದ್ದು, ಸಾಕಷ್ಟು ವೆಂಟಿಲೇಟರ್‌ಗಳು ಇವೆ. ಈ ಪೈಕಿ 31 ವೆಂಟಿಲೇಟ್‌ರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನುಳಿದ 39 ವೆಂಟಿಲೇಟರ್‌ಗಳಿಗೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೀಡಲು ಕೋರಿದರು.
ಇದರೊಂದಿಗೆ ಪ್ರತಿನಿತ್ಯ 2500 ಟೆಸ್ಟ್‌ಗಳನ್ನು ಮಾಡಲು ಗುರಿ ಇಟ್ಟುಕೊಂಡಿದ್ದು, 31 ಮೊಬೈಲ್ ಟೀಮ್‌ಗಳ ಮೂಲಕ ಟೆಸ್ಟ್ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಬೆಳೆ ವಿಮೆ, ಕ್ಷೌರಿಕ, ಮಡಿವಾಳರು, ಆಟೋ, ಟ್ಯಾಕ್ಸಿ ಚಾಲಕರು ಇವರಿಗೆ ಪರಿಹಾರದ ಮೊತ್ತ ಸಂದಾಯವಾಗಿದೆ. ಇದರಲ್ಲಿ ಯಾವುದೇ ಲೋಪದೋಷವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಳೆಯಿಂದಾಗಿರುವ ಬೆಳೆ ಹಾನಿ ಪ್ರಮಾಣ ಕುರಿತಂತೆ ಮಾಹಿತಿ ನೀಡಿ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾನದಂಡಗಳಂತೆ 5 ಲಕ್ಷ ಹಾಗೂ 3 ಲಕ್ಷ ಮತ್ತು 1 ಲಕ್ಷಗಳಂತೆ ಸರ್ಕಾರದ ಆದೇಶದಂತೆ ವಿತರಿಸಲು ಕ್ರಮ ಕೈಗ್ಗೊಳಲಾಗಿದೆ. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಸುಮಾರು 6.87 ಕೋಟಿ ರೂ. ಹಾನಿಯಾಗಿದ್ದು ರಸ್ತೆ, ಸೇತುವೆ, ಪಾಠಶಾಲೆ, ಟ್ರಾನ್ಸ್‌ಫಾರ್ಮರ್ ವಿದ್ಯುತ್ ಕಂಬಗಳು ಹಾಳಾಗಿದ್ದು, 31 ಸಪ್ಲೇ ಲೈನ್‌ಗಳು ಹಾಳಾಗಿವೆ. ಅದರೊಂದಿಗೆ 145 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮೊನ್ನೆ ಮಂಗಳವಾರ ಸುರಿದ 51 ಮಿ.ಲೀ. ಮೀಟರ್ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಮಾಯಕೊಂಡ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು, ಈ ಎಲ್ಲಾ ವರದಿಯನ್ನು ಶುಕ್ರವಾರದ ಸಂಜೆಯೊಳಗೆ ಒಟ್ಟಾರೆ ಹಾನಿಯ ಪ್ರಮಾಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದ್ದಾರೆ.
ವಿಡಿಯೋ ಸಂವಾದದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನೋಡಲ್ ಅಧಿಕಾರಿ ಪ್ರಮೋದ್ ನಾಯ್ಕ್, ಡಿಹೆಚ್‌ಓ ರಾಘವೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.