ದಾವಣಗೆರೆ, ಸೆ. 10 – ನಗರದಲ್ಲಿರುವ ತೋಟಗಾರಿಕೆ ಇಲಾಖೆಯ ಬೃಹತ್ ಗಾಜಿನ ಮನೆಗೆ ಹೆಚ್ಚಿನ ಪ್ರವಾಸಿಗರು ಬರಲು ಅಲ್ಲೊಂದು ಭೋಜನ ತಾಣ ನಿರ್ಮಿಸುವುದಾಗಿ ತೋಟಗಾರಿಕಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಇಂದು ಆಯೋ ಜಿಸಲಾಗಿದ್ದ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇಲ್ಲೊಂದು ಭೋಜನ ತಾಣ ನಿರ್ಮಿಸಿದರೆ, ಪಿ.ಬಿ. ರಸ್ತೆಯಲ್ಲಿ ಹೋಗುವ ಪ್ರವಾಸಿಗರು ಬರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಖಾಸಗಿ ಸಹಭಾಗಿತ್ವದ ಈ ಯೋಜನೆಗಾಗಿ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡುವುದಾಗಿ ಹೇಳಿದ ಅವರು, ಇಷ್ಟು ದೊಡ್ಡ ಗ್ಲಾಸ್ ಹೌಸ್ ಇರುವುದು ತಮ್ಮ ಗಮನಕ್ಕೇ ಬಂದಿರಲಿಲ್ಲ. ಈ ಗ್ಲಾಸ್ ಹೌಸ್ಗೆ ಇನ್ನಷ್ಟು ಪ್ರಚಾರದ ಅಗತ್ಯವಿದೆ ಎಂದು ಹೇಳಿದರು.
ಕೃಷಿ ಪ್ರವಾಸೋದ್ಯಮ : ಕೃಷಿ ಪ್ರವಾಸೋದ್ಯಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ. ಅದರ ಅನ್ವಯ ಪ್ರತಿ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಕೃಷಿ ತಾಣಗಳಿಗೆ ಭೇಟಿ ನೀಡಲು ಹಾಗೂ ರಾತ್ರಿ ಹೋಂ ಸ್ಟೇ ಮಾಡಲು ಅವಕಾಶವಿರುವ ತಾಣಗಳನ್ನು ರೂಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಎಕ್ಕೆಗೊಂದಿಯಲ್ಲಿ ವಸತಿಗೆ 2 ಎಕರೆ ಜಮೀನು
ಹರಿಹರ ತಾಲ್ಲೂಕು ಎಕ್ಕೆಗೊಂದಿ ಯಲ್ಲಿರುವ ತೋಟಗಾರಿಕೆ ಇಲಾಖೆಯ 15 ಎಕರೆ ಜಮೀನಿನ ಪೈಕಿ ವಸತಿಗಾಗಿ 2 ಎಕರೆ ಜಮೀನು ನೀಡಬೇಕೆಂದು ಶಾಸಕ ರಾಮಪ್ಪ ಮಾಡಿಕೊಂಡ ಮನವಿಗೆ ಸಚಿವ ನಾರಾಯಣ ಗೌಡ ಸ್ಪಂದಿಸಿ, ಅನು ಮೋದನೆಗೆ ಭರವಸೆ ನೀಡಿದ್ದಾರೆ.
ಈ ಕುರಿತ ಪ್ರಸ್ತಾವನೆಯನ್ನು ತಮಗೆ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಸಚಿವ ಗೌಡ, ತೋಟಗಾರಿಕೆ ಇಲಾಖೆಯ ಜಮೀನಿಗೆ ಬದಲು ಬೇರೆ ಕಂದಾಯ ಜಮೀನು ವಿನಿಮಯ ಮಾಡಿಕೊಳ್ಳುವುದಾಗಿ ಹೇಳಿದರು.
ಎಲೆ ಬಳ್ಳಿ ತೋಟಕ್ಕೆ ಪರಿಹಾರ
ಬೆಳ್ಳೂಡಿಯ ನೂರಾರು ಎಕರೆ ಎಲೆ ಬಳ್ಳಿ ತೋಟ ಮೊನ್ನೆ ಸುರಿದ ಮಳೆಯಿಂದ ಹಾಳಾಗಿರುವುದರಿಂದ ನಷ್ಟಕ್ಕೆ ಗುರಿಯಾಗಿ ರುವ ರೈತರಿಗೆ ಪರಿಹಾರ ನೀಡುವಂತೆ
ಸಚಿವ ನಾರಾಯಣ ಗೌಡ ಸೂಚಿಸಿದ್ದಾರೆ.
ನೂರಾರು ಎಕರೆ ತೋಟ ಮುಳುಗಡೆಯಾಗಿದ್ದು, ಮತ್ತೆ ಬೆಳೆಯಲು ಬಾರದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ತಾವು ಪರಿಶೀಲಿಸಿರುವುದಾಗಿ ಸಚಿವ ರಾಮಪ್ಪ ಸಭೆಯಲ್ಲಿ ತಿಳಿಸಿದರು.
ರೇಷ್ಮೆ ಜಮೀನು ಉಳಿಸಿಕೊಳ್ಳಿ
ಚನ್ನಗಿರಿ ಬಿ.ಆರ್.ಟಿ. ಕಾಲೋನಿಯಲ್ಲಿ ರೇಷ್ಮೆ ಇಲಾಖೆಯ 33 ಎಕರೆ ಜಮೀನನ್ನು ಬೇಲಿ ಹಾಕಿ ಹದ್ದುಬಸ್ತು ಮಾಡಿಕೊಳ್ಳುವಂತೆ ಸಚಿವ ನಾರಾಯಣ ಗೌಡ ಸೂಚಿಸಿದ್ದಾರೆ.
ಇಲಾಖೆ ಸಾಕಷ್ಟು ಜಮೀನು ಹೊಂದಿದೆ. ಇದನ್ನು ಯಾವುದೇ ಕಾರಣಕ್ಕೂ ಕಬಳಿಸಲು ಬಿಡಬಾರದು. ಜಿಲ್ಲಾಧಿಕಾರಿಗಳ ಸಹಕಾರದಲ್ಲಿ ಜಮೀನು ಅಳತೆ ಮಾಡಿಸಿಕೊಂಡು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಸಚಿವರು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನುಗ್ಗೆಗಾಗಿ ನೂಕು ನುಗ್ಗಲು!
ನುಗ್ಗೆ ಕಾಯಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಬಂದಿದೆ. ಜಗಳೂರು ತಾಲ್ಲೂಕಿನಲ್ಲಿ ಪ್ರತಿ ಎಕರೆಗೆ ರೈತರು 2.5 ಲಕ್ಷ ರೂ.ಗಳವರೆಗೆ ಆದಾಯ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಆನಂದ್ ಸಭೆಗೆ ತಿಳಿಸಿದರು.
ನುಗ್ಗೆಕಾಯಿಗೆ ಮಹಾರಾಷ್ಟ್ರದಿಂದ ಸಾಕಷ್ಟು ಬೇಡಿಕೆ ಇದೆ. ಇದರ ಸೊಪ್ಪನ್ನು ಒಣಗಿಸಿ ಚಿತ್ರದುರ್ಗದಲ್ಲಿ ಕೆಜಿಗೆ 100 ರೂ.ಗಳವರೆಗೂ ಮಾರಲಾಗುತ್ತಿದೆ ಎಂದವರು ಹೇಳಿದರು. ದಾವ ಣಗೆರೆ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ ಎಂದವರು ಹೇಳಿದರು.
ರಸ್ತೆ ಸಂತೆ : ರೈತರ ಬೆಳೆಗಳನ್ನು ಮಾರಾಟ ಮಾಡಲು ರಸ್ತೆ ಬದಿಗಳಲ್ಲಿ ಸಂತೆಗಳನ್ನು ರೂಪಿಸಬೇಕಿದೆ. ಇದರಿಂದ ಬೆಳೆಗಳಿಗೆ ಹೆಚ್ಚು ಬೇಡಿಕೆ ಬರಲಿದೆ. ಇದಕ್ಕಾಗಿ ನೀರು, ಶೌ ಚಾಲಯ ಮತ್ತಿತರೆ ವ್ಯವಸ್ಥೆಗಳನ್ನು ಮಾಡು ವಂತೆಯೂ ಸಚಿವರು ಹೇಳಿದರು.
ಶೀತಲೀಕರಣ ಘಟಕ : ರೈತರ ಹಣ್ಣು ಇತ್ಯಾದಿ ಉತ್ಪನ್ನಗಳನ್ನು ಶೇಖರಿಸಲು ಜಿಲ್ಲೆಯಲ್ಲಿ ಯಾವುದೇ ಶೀತಲೀಕರಣ ಘಟಕ ಇಲ್ಲದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಶೀಘ್ರದಲ್ಲೇ ಪ್ರಸ್ತಾವನೆಗಳಿಗೆ ಮಂಜೂರಾತಿ ಪಡೆದು, ಖಾಸಗಿ ಸಹಭಾಗಿತ್ವದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ತಾಲ್ಲೂಕುಗಳಲ್ಲೂ ಈ ಘಟಕಗಳಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನರ್, ಕೋವಿಡ್ ಹಾಗೂ ಮಳೆಯಿಂದಾಗಿ ಹಾನಿಗೀಡಾಗಿರುವ ಹೂ, ಹಣ್ಣು ಹಾಗೂ ತರಕಾರಿ ಬೆಳೆಯುವ ರೈತರಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ತರಕಾರಿ ಬೆಳೆಗಾರರಿಗೆ 2.76 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರಿಹರ ಶಾಸಕ ರಾಮಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ರೇಷ್ಮೆ ಇಲಾಖೆ ಉಪ ನಿರ್ದೇಶಕಿ ನಿರ್ಮಲ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ಮತ್ತಿತರರು ಉಪಸ್ಥಿತರಿದ್ದರು.