16 ಲಕ್ಷ ಮೌಲ್ಯದ ಎಮ್ಮೆಗಳು, ಎತ್ತುಗಳ ವಶ : 12 ಮಂದಿ ಬಂಧನ
ದಾವಣಗೆರೆ, ಸೆ.7- ಲಾರಿಗಳಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ 77 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಲಾರಿಗಳಲ್ಲಿದ್ದ 45 ಎಮ್ಮೆಗಳು, 32 ಎತ್ತುಗಳು ಸೇರಿ ಒಟ್ಟು 16 ಲಕ್ಷ ರೂ. ಮೌಲ್ಯದ 77 ಜಾನುವಾರುಗಳು ಹಾಗೂ ಒಟ್ಟು 18 ಲಕ್ಷ ಮೌಲ್ಯದ 4 ಕಂಟೇನರ್ ಲಾರಿ ಮತ್ತು 1 ಕಾರು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ಕಡೆಯಿಂದ ಎನ್.ಹೆಚ್-48 ರಸ್ತೆಯಲ್ಲಿ ಅಕ್ರಮವಾಗಿ ದನಗಳನ್ನು ಕಂಟೇನರ್ ಲಾರಿಗಳಲ್ಲಿ ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಎಸ್ಪಿ ಹನುಮಂತರಾಯ ನಿರ್ದೇಶನದಂತೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಬಿ. ಮಂಜುನಾಥ, ಪಿಎಸ್ಐ ಸಂಜೀವ್ ಕುಮಾರ್ ಮತ್ತು ಸಿಬ್ಬಂದಿಗಳಾದ ಹನುಮಂತಪ್ಪ, ತಿಮ್ಮಪ್ಪ, ಅಶೋಕ ಅವರನ್ನು ಒಳಗೊಂಡ ತಂಡ ಇದೇ ಸೆ.6ರ ಭಾನುವಾರ ರಾತ್ರಿ 10 ಗಂಟೆಗೆ ಹೆಚ್. ಕಲಪನಹಳ್ಳಿ ಗ್ರಾಮದ ಹತ್ತಿರ ಬರುತ್ತಿದ್ದ ಒಂದು ಕಾರು ಮತ್ತು ಅದರ ಹಿಂದಿದ್ದ 4 ಕಂಟೇನರ್ ಲಾರಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಜಾನುವಾರುಗಳ ಸಾಗಾಟ ಬೆಳಕಿಗೆ ಬಂದಿದೆ.
ಕಂಟೇನರ್ ಲಾರಿಗಳಲ್ಲಿ ಜಾನುವಾರುಗಳಿಗೆ ಸೂಕ್ತ ಮುಂಜಾಗ್ರತೆ ವಹಿಸದೇ ಸೂಕ್ತ ಗಾಳಿ ಬೆಳಕು ಇಲ್ಲದೇ ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಣಿಕೆ ಮಾಡುತ್ತಿದ್ದವರ ಮತ್ತು ಲಾರಿ ಮಾಲೀಕರುಗಳ ಮೇಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.