ದಾವಣಗೆರೆ, ಸೆ.7- ಇದೇ ಸೆ.19 ಮತ್ತು 20ರಂದು ಜಿಲ್ಲೆಯಲ್ಲಿ ಬೃಹತ್ ಇ-ಲೋಕ್ ಅದಾಲತ್ತನ್ನು ನಡೆಸಲಾ ಗುವುದು ಎಂದು ಒಂದನೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀ ಶರಾದ ಕೆ.ಬಿ. ಗೀತಾ ತಿಳಿಸಿದರು.
ಅವರು, ಇಂದು ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಜಿಲ್ಲಾ ನ್ಯಾಯಾ ಲಯಗಳ ಸಂಕೀರ್ಣದ ಆವರಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯಲ್ಲಿನ ಎಲ್ಲಾ ಕಾನೂನು ತಾಲ್ಲೂಕು ಸೇವಾ ಸಮಿತಿಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಇ-ಲೋಕ್ ಅದಾಲತ್ ನಡೆಸುವ ಬಗ್ಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇ-ಲೋಕ್ ಅದಾಲತ್ ನ ಪ್ರತಿಯೊಂದು ಪೀಠದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ಒಬ್ಬರು ಪರಿಣಿತ ವಕೀಲರು ಸಂಧಾನಕಾರರಾಗಿ ರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ರುವ ಹಾಗೂ ಇನ್ನೂ ದಾಖಲು ಮಾಡದೇ ಇರುವ ರಾಜಿಯಾಗುವಂತಹ ಎಲ್ಲಾ ಪ್ರಕರಣಗಳಲ್ಲಿ ಪಕ್ಷಗಾರರು ಸದರಿ ಪೀಠಗಳ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಅದಕ್ಕಾಗಿ ಪಕ್ಷಗಾರರು ನ್ಯಾಯಾಲಯಕ್ಕೆ ಬರುವ ಅವಶ್ಯಕತೆ ಇಲ್ಲ. ಪಕ್ಷಗಾರರು ತಮ್ಮ ಮನೆಯಿಂದಲೇ ಅಥವಾ ತಮ್ಮ ವಕೀಲರ ಕಛೇರಿಯ ಮೂಲಕ ಪ್ರಕರಣಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜ ರಾಗಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಳ್ಳಬಹುದು ಎಂದು ಹೇಳಿದರು.
ಲೋಕ್ ಅದಾಲತ್ ಅಥವಾ ಜನತಾ ನ್ಯಾಯಾಲಯದ ಮೂಲಕ ಪಕ್ಷಗಾರರು ರಾಜೀ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ, ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥಪಡಿಸಿ ಕೊಳ್ಳಬಹುದು. ಲೋಕ್ ಅದಾಲತ್ನಲ್ಲಿ ಮಾಡುವ ಅವಾರ್ಡ್ ಕಾನೂನು ಬದ್ಧವಾಗಿ ರುತ್ತದೆ ಮತ್ತು ನ್ಯಾಯಾಲಯದಲ್ಲಿ ತೀರ್ಮಾನವಾದ ಪ್ರಕರಣಗಳಂತೆಯೇ ಅದರ ತೀರ್ಪನ್ನು ಜಾರಿಗೊಳಿಸಬಹು ದೆಂದರು. ಪಕ್ಷಗಾರರು ಸ್ವ ಇಚ್ಛೆಯಿಂದ ರಾಜಿಗೆ ಒಪ್ಪಿಕೊಂಡರೆ ಮಾತ್ರ ಲೋಕ್ ಅದಾಲತ್ನಲ್ಲಿ ಪ್ರಕರಣಗಳ ತೀರ್ಮಾನವಾಗುತ್ತದೆ. ಒಂದು ವೇಳೆ ಉಭಯ ಪಕ್ಷಗಾರರಿಗೆ ಒಪ್ಪಿಗೆ ಇರದಿದ್ದರೆ ಯಾವುದೇ ತೀರ್ಮಾನವಾಗುವುದಿಲ್ಲ. ಅಂತಹ ಪ್ರಕರಣಗಳನ್ನು ಪುನಹ ನ್ಯಾಯಾಲಯದಲ್ಲಿಯೇ ಕಾನೂನು ಬದ್ದವಾಗಿ ತೀರ್ಮಾನ ಮಾಡಲಾಗುತ್ತದೆ. ಆ ರೀತಿ ರಾಜಿ ಮಾಡಿಕೊಂಡ ಪ್ರಕರಣಗಳು ನ್ಯಾಯಯುತವಾಗಿ ಮತ್ತು ಕಾನೂನುಬದ್ಧವಾಗಿ ಇದ್ದರೆ ಮಾತ್ರ ಲೋಕ್ ಅದಾಲತ್ ನಲ್ಲಿ ಇತ್ಯರ್ಥ ಮಾಡಲಾಗುತ್ತದೆ ಎಂದರು.
ಈ ಅದಾಲತ್ ನಲ್ಲಿ ವಾಹನ ಅಪಘಾತ ಸಂಬಂಧಿಸಿದ ಪ್ರಕರಣ, ಹಣ ವಾಪಸಾತಿ ಪ್ರಕರಣ, ಬಾಡಿಗೆದಾರ ಮತ್ತು ಮಾಲೀಕರ ನಡುವಿನ ದಾವೆಗಳು, ಇತರೆ ಸಿವಿಲ್ ವ್ಯಾಜ್ಯಗಳು, ರಾಜಿ ಮಾಡಿಕೊಳ್ಳಬಹುದಾದ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಕೇಸುಗಳು, ಚೆಕ್ ಬೌನ್ಸ್, ಕೌಟುಂಬಿಕ ಕಲಹಗಳು (ವಿಚ್ಛೇದನ ಹೊರತುಪಡಿಸಿ) ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಈ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳ ಸಂಪೂರ್ಣ ನ್ಯಾಯಾಲಯಗಳ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ನ್ಯಾಯಾಲಯಗಳ ಶುಲ್ಕ ಕೊಡಬೇಕಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ [email protected] ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರ ದೂರವಾಣಿ ಸಂಖ್ಯೆ 9449624370 ಅನ್ನು ಸಂಪರ್ಕಿಸುವಂತೆ ವಿನಂತಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಮಾತನಾಡಿ, ಈ ಅದಾಲತ್ ಮೂಲಕ ಜಿಲ್ಲೆಯಲ್ಲಿನ ಇತ್ಯರ್ಥಪಡಿಸಬಹುದಾದ ಸುಮಾರು 2 ಸಾವಿರ ವಿವಿಧ ಪ್ರಕರಣಗಳ ರಾಜಿಪಡಿಸುವ ಗುರಿ ಹೊಂದಲಾಗಿದೆ ಎಂದ ಅವರು, ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ನ್ಯಾಯಾಲಯದಲ್ಲಿ ಕಕ್ಷಿದಾರರು ಸಾಕ್ಷಿಗಳನ್ನು ಒದಗಿಸಲು ತೊಂದರೆಯಾಗುತ್ತಿರುವುದರಿಂದ ನಗರದ ಹೈಸ್ಕೂಲ್ ಮೈದಾನದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಾಲ್ಕು ರಿಮೋಟ್ ಕೊಠಡಿಗಳನ್ನು ತೆರೆಯಲಾಗಿದ್ದು, ಸಾಕ್ಷಿದಾರರು ತಮ್ಮ ಹೇಳಿಕೆಗಳನ್ನು ದಾಖಲಿಸಬಹುದು. ಅಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಷ್ಟಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಶ್ರೀಧರ್, ಆಡಳಿತ ಶಿರಸ್ತೇದಾರ್ ಮಾರುತಿ ಇದ್ದರು.