ಒಳಮೀಸಲಾತಿ ಕಾಯ್ದೆ ಜಾರಿಗಾಗಿ ಡಿಎಸ್ಎಸ್ ಪ್ರತಿಭಟನೆ

ದಾವಣಗೆರೆ, ಸೆ.7- ಒಳ ಮೀಸಲಾತಿ ಜಾರಿ ಕುರಿತು ನೀಡಿರುವ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ಸೆಪ್ಟೆಂಬರ್‌ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ನಗರದಲ್ಲಿ ನಿನ್ನೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.   ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ ನೇತೃತ್ವದಲ್ಲಿ ಪಿ.ಬಿ. ರಸ್ತೆಯ ಶ್ರೀ ಶನೈಶ್ಚರ ಸ್ವಾಮಿ (ಪಂಚ ಲಿಂಗೇಶ್ವರ) ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಂಕೇತಿಕ ವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

2005ರಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಅಧ್ಯಯನಕ್ಕಾಗಿ ಆಯೋಗ ರಚಿಸಿತ್ತು. ನ್ಯಾ. ಎ.ಜೆ. ಸದಾಶಿವ ಅವರು ಆಯೋಗದ ಅಧ್ಯಕ್ಷರಾಗಿ ಅಧ್ಯಯನ ನಡೆಸಿ 2012ರ ಜೂ.12ರಂದು ಆಗಿನ ಸರ್ಕಾರಕ್ಕೆ ಒಳಮೀಸಲಾತಿಗೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದರು. ಯಾವುದೇ ಸರ್ಕಾರಗಳು ವರದಿ ಅಂಗೀಕರಿಸಲಿಲ್ಲ. ಹೋರಾಟಗಳು ನಡೆದರೂ ಸರ್ಕಾರ ಮಣಿಯಲಿಲ್ಲ. ವರದಿ ಅಂಗೀಕರಿಸಿ ಕೇಂದ್ರಕ್ಕೆ ಸಲ್ಲಿಸಲಿಲ್ಲ. ವರದಿ ಮೂಲೆಗುಂಪಾಯಿತು. ಆದರೆ, ನೊಂದ ಜನ ಸಮುದಾಯದ ಸಾಮಾಜಿಕ ನ್ಯಾಯದ ಕೂಗು ಆಲಿಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ, ಒಳಮೀಸಲು ವರ್ಗೀಕರಣ ಮಾಡುವ ಅಧಿಕಾರ ರಾಜ್ಯದ ಶಾಸನ ಸಭೆಗಳಿಗೆ ಇದೆ ಎಂದು ಆ.27ರಂದು ಅಭಿಪ್ರಾಯ ನೀಡಿತ್ತು. ಇದರಿಂದಾಗಿ ಒಳಮೀಸಲು ಜಾರಿಗಿದ್ದ ಅಡೆತಡೆ ನಿವಾರಣೆಯಾಗಿದೆ. ಸೆಪ್ಟೆಂಬರ್‌ನಲ್ಲಿ ನಡೆಯುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಈ ಆಯೋಗದ ವರದಿ ಮಂಡಿಸಿ ಒಳ ಮೀಸಲು ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಟಿ. ಸದಾನಂದ, ತಾಲ್ಲೂಕು ಸಂಚಾಲಕ ಹೆಚ್. ಮಲ್ಲಿಕಾರ್ಜುನ ವಂದಾಲಿ, ಬೂಸೇನಹಳ್ಳಿ ನಾಗರಾಜ, ಸುರೇಶ್ ತೆರದಾಳ್, ಓಬಳೇಶ್, ಟಿ. ರವಿಕುಮಾರ್, ಸತೀಶ್‌ಕುಮಾರ್ ಬಾಡ, ಶ್ರೀನಿವಾಸ್, ನವಿಲೇಹಾಳ್ ಕೃಷ್ಣಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!