ದಾವಣಗೆರೆ, ಸೆ.7- ದೇವರಾಜ ಅರಸು ಬಡಾವಣೆಯಲ್ಲಿನ ದೂಡಾ ಕಚೇರಿ ಎದುರು ಹಾದು ಹೋಗಿರುವ ರೈಲ್ವೆ ಮೇಲ್ಸೇತುವೆಗೆ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಆಗ್ರಹಿಸಿದೆ.
ಡಾ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರು ಎಲ್ಲಾ ಸಮಾಜದವರನ್ನು ಅಪ್ಪಿಕೊಂಡು ಎಲ್ಲಾ ವರ್ಗ, ಜಾತಿಯ ವಿದ್ಯಾರ್ಥಿಗಳಿಗೆ ಜ್ಞಾನ, ಅನ್ನ ದಾಸೋಹ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ. ಹೀಗಾಗಿ ಈ ಸ್ವಾಮೀಜಿಯವರನ್ನು ಸ್ಮರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ರೈಲ್ವೆ ಮೇಲ್ಸೇತುವೆಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಘಟಕದ ಅಧ್ಯಕ್ಷ ಜಿ. ಶಿವಯೋಗಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಯಾರನ್ನೂ ದ್ವೇಷಿಸದೇ ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಿದ್ದ ಸಿದ್ಧಗಂಗಾ ಶ್ರೀಗಳ ಹೆಸರನ್ನು ರೈಲ್ವೇ ಮೇಲ್ಸೇತುವೆಗೆ ಇಡಬೇಕೆಂದು ಒತ್ತಾಯಿಸಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ಎಚ್.ವಿ. ಹಾಲೇಶ್, ದಾಕ್ಷಾಯಣಮ್ಮ, ಟಿ.ಎಂ. ಮಲ್ಲಿಕಾರ್ಜುನ, ರಾಜೇಶ್ವರಿ ಮತ್ತಿತರರು ಇದ್ದರು.