ಮೌನವೆಂದರೆ ಮಾತು ಬಿಡುವುದೇ…?

ಮೌನದ ಕುರಿತಾದ ಹಲವು ಸುಭಾಷಿತಗಳು ಮೌನದ ಸ್ಥಾನವನ್ನು ಉನ್ನತೀಕರಿಸಿವೆ.  `ಮೌನಂ ಸಮ್ಮತಿ ಲಕ್ಷಣಂ’, `ಮಾತು ಬೆಳ್ಳಿ ಮೌನ ಬಂಗಾರ ‘, ಮಾತಿನಿಂದ ಆಗದ್ದು ಮೌನದಿಂದ ಆಗುತ್ತದೆ,  ಮೌನವೇ ಶೃಂಗಾರ,  ಮೌನದಿಂದ ಜಗತ್ತನ್ನೇ ಗೆಲ್ಲಬಹುದು. ಹೀಗೆ ಮೌನವು ಮಾತಿಗಿಂತ ಎಷ್ಟೋ ಮೇಲು ಎಂಬುದನ್ನು ಸಾರಿ ಹೇಳುತ್ತವೆ.  

100 ಕೆಜಿ ಕಬ್ಬಿಣ ತೂಕವೋ ಅಥವಾ 100 ಕೆಜಿ ಹತ್ತಿ ತೂಕವೋ  ಎಂದು ಯಾರಾದರೂ ಪ್ರಶ್ನಿಸಿದರೆ ಹತ್ತಿ ಹೇಗೆ ತೂಕವಾಗಿರುತ್ತದೆ? ಕಬ್ಬಿಣವೇ ತೂಕ ಹತ್ತಿಗಿಂತ   ಎಂದು ದುಡುಕು ಉತ್ತರವನ್ನು ನೀಡುತ್ತೇವೆ.  ವಾಸ್ತವಿಕವಾಗಿ ಎರಡರ ತೂಕವೂ  ಸಮವಾಗಿದೆ. 100  ಅಡಿ ಮೇಲಿಂದ ಆ ಎರಡೂ ಮೂಟೆಗಳನ್ನು  ಬೀಳಿಸಿದರೆ ಅದರ ಅಡಿಗೆ ಸಿಕ್ಕವರ ಗತಿ ಒಂದೇ ಆಗಿರುತ್ತದೆ. ಪ್ರೀತಿಪಾತ್ರರ ಮೌನವು ಮಾತಿಗಿಂತಲೂ ಹೆಚ್ಚು ನೋವು ನೀಡುತ್ತದೆ.. 

ನಾವು ಬಹಳಷ್ಟು ಬಾರಿ ಮೌನದ ಬಗೆಗಿರುವ ಉಕ್ತಿಗಳನ್ನು ಓದಿಕೊಂಡು ಮೌನವೇ ಮೇಲೆಂದು ಸೂಕ್ತವಲ್ಲದ ಸಂದರ್ಭದಲ್ಲಿ ಮೌನಕ್ಕೆ ಶರಣು ಹೋಗುತ್ತೇವೆ. ಇದರಿಂದ ನಮಗೆ ಜೀವನದಲ್ಲಿ ಆಗುವ ನಷ್ಟವೇ ಹೆಚ್ಚು. ಆ ಮೌನ ಆ ಕ್ಷಣಕ್ಕೆ ಅಥವಾ ಸ್ವಲ್ಪ ಕಾಲಕ್ಕೆ ನಮ್ಮ ಅಹಂ ಅನ್ನು ತೃಪ್ತಿಗೊಳಿಸಬಹುದಷ್ಟೇ..  ice candy ಕರಗುವಾಗ ಸಿಹಿಯೇ ಸಿಕ್ಕರೂ ಕರಗಿದ ಮೇಲೆ ಉಳಿಯುವುದು ಕಡ್ಡಿ ಮಾತ್ರ!  ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಬದುಕೆಂದ ಮೇಲೆ ಅದು ವೈವಿಧ್ಯಮಯ ಸಂಬಂಧಗಳ ಸಮ್ಮೇಳನ ಮತ್ತು ಸಮ್ಮಿಲನ.  ಇಲ್ಲಿ ಅಮ್ಮ-ಅಪ್ಪ,  ಅಕ್ಕ- ಅಣ್ಣ,  ತಮ್ಮ – ತಂಗಿ,  ಅತ್ತೆ -ಮಾವ, ಅಕ್ಕ- ಭಾವ,  ನಾದಿನಿ -ಮೈದುನ,  ಅತ್ತೆ-ಸೊಸೆ ಮಾವ-ಅಳಿಯ,  ಗಂಡ-ಹೆಂಡತಿ,  ಗುರು-ಶಿಷ್ಯರು ಎಲ್ಲಕ್ಕಿಂತ ಬಹುಮುಖ್ಯವಾಗಿ ಸ್ನೇಹಿತರು… ಹೀಗೆ ಇವೆಲ್ಲ ಸಂಬಂಧಗಳ ಕೊಂಡಿ ಸೇರಿ ಬದುಕು ಎಂಬ ದೊಡ್ಡ ಸರಪಳಿಯು  ಸುಖ ನೆಮ್ಮದಿಯ ರಥವನ್ನು   ಎಳೆಯುತ್ತಿರು ತ್ತದೆ.  ಸರಪಳಿಯ ಕೊಂಡಿಗಳಲ್ಲಾಗುವ ಬಿಗಿ ಸಡಿಲತೆಗಳು ರಥದ ಪ್ರಯಾಣವನ್ನು ನಿರ್ಧರಿಸುತ್ತದೆ.

ಪ್ರತಿ ವ್ಯಕ್ತಿಯೂ  ಭಿನ್ನ. ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ರೀತಿಯ ವ್ಯಕ್ತಿತ್ವಗಳು ಇರುತ್ತವೆ.ವಿಭಿನ್ನ  ರೀತಿಯ ಆಲೋಚನೆ,  ಮನೋಭಾವ, ದೃಷ್ಟಿ ಕೋನ, ಹವ್ಯಾಸ ಇರುತ್ತದೆ. ಒಬ್ಬರು ಇನ್ನೊಬ್ಬರಂತೆ ಆಗಲು  ಪ್ರಯತ್ನಿಸುವುದು ಅಸಹಜ  ಮತ್ತು 

ಅನೈಸರ್ಗಿಕ ಕೂಡ. ಸಂಬಂಧಗಳ ನಡುವೆ ಘರ್ಷಣೆಗಳು ಏರ್ಪಡುವುದು ಸಹಜ. ಭಿನ್ನತೆಯ ಕಾರಣದಿಂದಲೇ ಈ ಘರ್ಷಣೆಗಳು ಏರ್ಪಡುತ್ತವೆ. ಯಾವ ವಾಹನವನ್ನು ಅದೆಷ್ಟೇ ಮುನ್ನೆಚ್ಚರಿಕೆಯಿಂದ ಚಾಲಿಸಿದರೂ ಪ್ರಯಾಣದ ಸಂದರ್ಭದಲ್ಲಿ  ಅಪಘಾತವಾಗಿ ಬಿಡುತ್ತದೆ.  ಕಳೆದ ವರ್ಷ ಮಂಗಳಯಾನಕ್ಕಾಗಿ ಹೊರಟಿದ್ದ ವ್ಯೋಮನೌಕೆಯು ಮಂಗಳಗ್ರಹವನ್ನು ಮುಟ್ಟುವ ಕಟ್ಟ ಕಡೆಯ ನಿಮಿಷಗಳಲ್ಲಿ ಕೈಕೊಟ್ಟು ಅದರ ಗುರಿ ವಿಫಲವಾಯಿತು. ಕ್ಷಣಾರ್ಧದಲ್ಲಿ ನಿರಾಶೆಯ ಕಾರ್ಮೋಡವೇ  ಅಷ್ಟೂ  ಹೃದಯಗಳ ಆಹಾರವಾಯಿತು. ಆದರೆ ಅಂಥದ್ದೇ  ನೌಕೆಯನ್ನು ತಯಾರಿಸುವ ಉತ್ಸಾಹವಾಗಲೀ ಪ್ರಯತ್ನವಾಗಲೀ ಇಂದಿಗೂ ನಿಂತಿಲ್ಲ. ಹೀಗೆಯೇ ಸಂಬಂಧಗಳ ನಡುವೆ ಕೆಲವೊಮ್ಮೆ ಸಂಯಮ  ಕೈಕೊಟ್ಟು ಮಾತುಗಳು ಸ್ಫೋಟವಾಗಿ ಬಿಡುತ್ತವೆ. ಆ ಸ್ಫೋಟದ ಕ್ಷಣಗಳ  ಹಿಂದೆ ಅಂದಿನವರೆಗೂ ಇದ್ದ ಸಂಯಮವನ್ನು ಎದುರಿನವರು ಗ್ರಹಿಸದೇ ಉಳಿದುಬಿಡುತ್ತಾರೆ.  ಗೆಳೆಯನ ದೃಷ್ಟಿಯೆಲ್ಲಾ  ಸ್ಫೋಟದಿಂದ ಸುಟ್ಟು  ಹೋದ  ವಸ್ತುಗಳ ಮೇಲೆ… ನೆಲದ ಮೇಲೆ ಹರಡಿರುವ ಕರಿಮಸಿಯ ಮೇಲೆ..   ಆದರೆ   ಒಮ್ಮೆ ಆ  ಗೆಳೆಯನ ಹೃದಯದಲ್ಲಿದ್ದ ಸಂಯಮದ ಕಡೆಗೆ ಹೃದಯ ಕೊಟ್ಟು ಆಲಿಸಿದರೆ, ಸುಟ್ಟ ವಸ್ತುಗಳನ್ನು ಪ್ರೀತಿಯಿಂದಲೇ ಗುಡಿಸಿ ಎತ್ತಿಹಾಕಿ, ಕಣ್ಣೀರಿನಿಂದಲೇ ಕರಿ ಮಸಿಯನೆಲ್ಲಾ ಒರೆಸಿ, ಆ  ಜಾಗವನ್ನು ಕನ್ನಡಿಯಂತೆ ಫಳ ಫಳ ಮಾಡಿಬಿಡಬಲ್ಲ ಮತ್ತು ಅದೇ ಜಾಗದಲ್ಲಿ ಮತ್ತೊಂದು ಹೊಸ ಸ್ನೇಹ ನೌಕೆಯನ್ನು  ಹುಟ್ಟುಹಾಕಬಲ್ಲ. 

ಕನ್ನಡಿಯನ್ನು ಒಮ್ಮೆ ಒಡೆದರೆ ಮತ್ತೆ ಜೋಡಿಸಲಾಗುವುದಿಲ್ಲ ಎಂಬೆಲ್ಲ ನಿರ್ಜೀವ  ಮಾತುಗಳನ್ನು ಸಂಬಂಧಗಳ ನಡುವೆ ಬಳಸುವುದು  ಮೂರ್ಖತನವೆಂದು ನನಗೆ ಅನ್ನಿಸುವುದು. ಸಂಬಂಧವೆನ್ನುವುದು  ಒಡೆದು ಹೋಗುವ ಕನ್ನಡಿಯಲ್ಲ. ಆಗಾಗ್ಗೆ  ಬೆಸುಗೆ  ಬಿಡುವ ಗಟ್ಟಿಯಾದ ಕೊಂಡಿ ಅಷ್ಟೇ. ಬೆಸುಗೆ ಬಿಟ್ಟ ಜಾಗಕ್ಕೆ ಆಗಾಗ್ಗೆ  ಕ್ಷಮೆ,  ಪ್ರೀತಿ ಎಂಬ ಬಿಸಿ ಸುರಿದು ಕೊಂಡಿಯನ್ನು ಬೆಸೆಯಬೇಕು ಅಷ್ಟೇ. ತನ್ನ ಗೆಳೆಯನೋ,  ಸೋದರನೋ,  ತಾಯಿಯೋ,  ತಂದೆಯೋ ಯಾರಾದರೂ ಆಗಲಿ ಕೋಪದಿಂದ, ದುಡುಕಿನಿಂದ  ಆಡಬಾರದ್ದನ್ನು ಆಡಿದರೆ ಅದಕ್ಕಾಗಿ ಅವರನ್ನು ಶಿಕ್ಷಿಸುವುದು ಸರಿ. ಅವರೊಡನೆ ಮಾತು ಬಿಡುವುದೇ ಸೂಕ್ತ. 

ಮೌನದ ಸಾಮ್ರಾಜ್ಯ ಸ್ಥಾಪಿತವಾಗುವುದೇ ನ್ಯಾಯ. ಅಲ್ಲಿ ಮೌನದ ಪಾರುಪತ್ಯ ನಿಜಕ್ಕೂ ಆಪ್ತ.    ಸಮಯಕ್ಕೆ ಮೌನವೇ ಬಂಗಾರ,  ಮೌನವೇ ಶ್ರೇಷ್ಠ,  ಮೌನವೇ ಅಂತಿಮ. ಆದರೆ ಕೋಪದ,  ದುಡುಕಿನ  ಪೊರೆ ಕಳಚಿ ತನ್ನ ತಪ್ಪಿಗೆ ಪಶ್ಚಾತಾಪ ಪಟ್ಟು ಕ್ಷಮೆ ಕೇಳಿ ಬರುವ ಗೆಳೆಯನನ್ನೋ,  ಮಗನನ್ನೋ,  ಗೆಳತಿಯನ್ನೋ,  ಸೋದರಿಯನ್ನೋ  ಕ್ಷಮಿಸದೇ  ಉದ್ಧಟತನವನ್ನು ತೋರಿಸಿ,  ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಾ ಅಹಂಗೆ  ಶರಣಾಗಿ ಬಿಟ್ಟರೆ ಅಲ್ಲಿಗೆ ಮೌನದ ಘನತೆ ನೆಲಕಚ್ಚುತ್ತದೆ.  ಮೌನದ ಕಲಶ ಮಗುಚಿ  ಬೀಳುತ್ತದೆ, ಮೌನ ಬೆಲೆ ಕಳೆದುಕೊಳ್ಳುತ್ತದೆ.  ಸಂಬಂಧದ ಸುಂದರ ವನವು  ಸ್ಮಶಾನವಾಗಿಬಿಡುತ್ತದೆ. ಆಗ ದುಡುಕಿನ ಮೂರ್ಖತನಕ್ಕಿಂತ ಮೌನಕ್ಕೆ ಶರಣಾದವನ ಮೂರ್ಖತನ ತೂಕ ಗಳಿಸುತ್ತದೆ.

ಕ್ಷಮೆ ಕೇಳಿಕೊಂಡು ಬರುವವನನ್ನು ಕ್ಷಮಿಸಲಾಗದವನ ಹೃದಯಕ್ಕೆ ಅಂದಿನಿಂದ ಕುರುಡು ಆವರಿಸುತ್ತದೆ.  ಕ್ಷಮೆ ಕೋರುತ್ತಿರುವವನ ಹೃದಯದ ಮಿಡಿತ ಕೇಳಲಾಗದ ಕಿವುಡುತನ ಬಂದುಬಿಡುತ್ತದೆ. ಅಲ್ಲಿಯವರೆಗೂ  ಪ್ರೀತಿಗಾಗಿ ಮಾಡಿದ ತ್ಯಾಗ,  ನೀಡಿದ ಸಮಯ,  ಕಳೆದ ಮಧುರ ಕ್ಷಣಗಳು,  ಸಂಬಂಧದ ಸವಿ ಸವಿ,  ಸಂತೋಷದ ಘಮಘಮ ಏನನ್ನೂ  ಕಾಣಲಾಗದು.. ಕೇವಲ ಅಹಂ ಪ್ರತಿರೂಪದ ದುರ್ಯೋಧನನ ತಾಳಕ್ಕೆ ಕುಣಿಯುವ ಧೃತರಾಷ್ಟ್ರನಾಗಿ ಬಿಡುತ್ತಾನೆ.

ಸಂಬಂಧವೆಂದರೆ ಬರೆಯಲು ತೆಗೆದಿಟ್ಟುಕೊಂಡ ನೋಟು ಪುಸ್ತಕದಂತೆ. ಬರೆಯುವಾಗ ತಪ್ಪಾದರೆ ಅದನ್ನು ಅಳಿಸಿ ಪುನಃ  ಬರೆಯಬಹುದು. ಹಾಳೆಯ ಮೇಲೆ ಏನಾದರೂ ಚೆಲ್ಲಿದರೆ ಆ ಹಾಳೆಯನ್ನು ಹರಿದು ಎಸೆಯಬಹುದು. ಆದರೆ ಪುಸ್ತಕವನ್ನೇ ಎಸೆದು ಬಿಡುವುದೆಂದರೆ ಅದು ದೊಡ್ಡ ನಷ್ಟವಲ್ಲವೇ… 

“ಮಾತಿನಿಂದ ಆದ ತಪ್ಪು ಮೌನದಿಂದಲೂ  ಆಗಬಹುದು.
ಅಸಾಂದರ್ಭಿಕ ಮಾತಿನಂತೆ ಅಸಾಂದರ್ಭಿಕ ಮೌನವೂ  ಅಪಾಯಕಾರಿ”.

ಪ್ರಶ್ನೆಗಳ ಬೇಗುದಿಯು ಎದೆಯನ್ನು  ಸುಡುವಾಗ
ಉತ್ತರ ನೀಡದ ಮೌನ  ಕ್ರೌರ್ಯವಾಗುತ್ತದೆ…
ಕ್ಷಮೆಯ ಭಿಕ್ಷೆ ಬೇಡಿದಾಗ
ಬಾಯಿ ಬಿಡದ ಮೌನ  ನಿರ್ದಯಿ…
ಮಾತುಗಳ ಕಹಿಯನ್ನಷ್ಟೇ  ಮೇಯ್ದು
ಹೃದಯದ ಪ್ರೀತಿಯನ್ನು ನಿರಾಕರಿಸುವ ಮೌನ ನಿಸ್ಸಾರ..

ಸ್ನೇಹವನ್ನು ಬೆಸೆಯದಾ ಮೌನ ನಿರ್ಜೀವ…
ಸಂಬಂಧವನ್ನು ಬದುಕಿಸದಾ ಮೌನ ಮೃತ್ಯು…

ಹಾಗಾದರೆ ಬುದ್ಧ ಹೇಳಿದ,  ನೂರಾರು ಸಾಧು ಸಂತರು  ಕಂಡುಕೊಂಡ ‘ಮೌನ’ ದ ಮಹತ್ವ   ಸುಳ್ಳೇ?  ಖಂಡಿತ  ಹಾಗಾಗದು.. ಆಕಾಶ-ಭೂಮಿಯ ನಡುವೆ, ಹೂ – ದುಂಬಿಯ ನಡುವೆ,  ಕಾರ್ಮೋಡ -ಮಳೆಯ ನಡುವೆ,  ನೆಲ- ಹಸಿರಿನ ನಡುವೆ ಇರುವುದೆಲ್ಲ ಮೌನದ ಸಾಮ್ರಾಜ್ಯವೇ. 

ಶಿಷ್ಯನು ತನ್ನನ್ನು ಮೀರಿದ ಬುದ್ಧಿವಂತನಾಗಿ,  ಕೀರ್ತಿವಂತನಾಗಿ ನಿಂತಾಗ ಗುರುವು ಕೂಗಿ  ಕೊಡುವ  `ಶಹಭಾಷ್’ ಮೌನ..  

ಎದೆಯುದ್ದ ಬೆಳೆದ ಮಗನನ್ನು ಸೊಸೆಯ ಕೈಗಿಟ್ಟು ಮುಂದೆ ನೀನವನ ತಾಯಿ ನಾವು ನಿಮ್ಮ ಮಕ್ಕಳು ಎಂದು ಹೇಳುವ ತಂದೆ, ತಾಯಿಯ ಮಾತು ಮೌನ..

ಹಠ ಬಿದ್ದ ಮಗುವನ್ನು ಊಟ ಮಾಡಿಸಲು ತಾಯಿ ಅದರ ಗಲ್ಲ ಹಿಡಿದು ಲಲ್ಲಗರೆಯುವಾಗ ಅಲ್ಲಿರುವುದು  ಮೌನ… 

ಜಾತಿ, ಮೂಢನಂಬಿಕೆಗಳ ಕಂದಾಚಾರದಿಂದ ಹೊರತರಲು ವಚನಕಾರರು ಕಟ್ಟಿದ ವಚನಗಳಲ್ಲಿ ಇರುವುದು ಮೌನವೇ.. ವಕೀಲನೊಬ್ಬ ನ್ಯಾಯಕ್ಕಾಗಿ ಮಾಡುವ ವಾಗ್ವಾದ ಮೌನ… 

ಎಲ್ಲಕ್ಕಿಂತ ಮಿಗಿಲಾಗಿ ತನ್ನ  ದುಡುಕಿನ,  ಕೋಪದ,  ತೊಳಲಾಟದ ಫಲದಿಂದ  ಆದ  ತಪ್ಪಿಗೆ ಕ್ಷಮೆ ಕೋರಿ ಬಂದವನನ್ನು  ಅದ್ಯಾವ ಮಹಾ ತಪ್ಪು?  ನಾನು ಮಾಡಿದ್ದು?  ಬದುಕು ಚಿಕ್ಕದು.. ನಿನಗಿಂತ ದೊಡ್ಡದಲ್ಲ ಎಂದೇಳುತ್ತಾ ತಬ್ಬಿ ಭೋರ್ಗರೆಯುವುದಲ್ಲವೇ  ಮೌನ..?  

ಮೌನ ಎಂದಿಗೂ ಬಂಧಿಸುತ್ತದೆ-ಛೇಧಿಸುವುದಿಲ್ಲ.
ಎಲ್ಲರನ್ನೂ ಸೇರಿಸುತ್ತದೆ-ಸಾಯಿಸುವುದಿಲ್ಲ.

ಮೌನವು ಎಲ್ಲವನ್ನು ಕ್ಷಮಿಸುತ್ತದೆ- ಶಿಕ್ಷಿಸುವುದಿಲ್ಲ.
ಮೌನವು ಶಾಂತಿ ನೀಡುತ್ತದೆ-ಮನಸ್ಸನ್ನು ಕದಡುವುದಿಲ್ಲ.
ಮೌನವು ಸಾಂಗತ್ಯ ನೀಡುತ್ತದೆ-ಒಂಟಿ  ಮಾಡುವುದಿಲ್ಲ.
ಮೌನ  ಹೃದಯದಲ್ಲಿರುತ್ತದೆ -ಬಾಯಿಯಲ್ಲಿ ಅಲ್ಲ. 

ಕಡಲ ಭೋರ್ಗರೆತ ಮೌನ, ಅಲೆಗಳ ಮೊರೆತವೂ ಮೌನ, ಕಾರ್ಮೋಡಗಳ ಗುದ್ದಾಟ ಮೌನ, ಗಾಳಿಯ ಸುಂಯ್ ಗುಡುವಿಕೆ -ದುಂಬಿಯ ಗುಂಯ್ ಗುಡುವಿಕೆ,  ಗೂಡೊಳಗೆ ಗುಬ್ಬಿಗಳ ಜಗಳ   ಇದೆಲ್ಲವೂ ಮೌನವೇ.. 

ಮೌನದ ಫಲವೇ ಸಕಲ ಜೀವಾಂಕುರಗಳಲ್ಲಿ ಸಂಚಲನ ಮತ್ತು ಜೀವಾಂಕುರಗಳ ಸಂಚಯನಕ್ಕೆ ಕಾರಣ. ಮೌನವೆಂದೂ  ನಿರ್ಜೀವವಲ್ಲ.. ಮೌನವೆಂದು ನಿಶ್ಯಬ್ದವಲ್ಲ… ಸತ್ಕಾರಣಕ್ಕಾಗಿ, ಸತ್ಫಲಕ್ಕಾಗಿ ಹೃದಯಮಾರ್ಗವಾಗಿ  ಗಂಟಲ ಹೆದ್ದಾರಿಯಿಂದ  ಹೊರಡುವ ಶಬ್ದವೇ ಮೌನ…

ಇದಲ್ಲದೆ ” ಮೌನವೆಂದರೆ ಮಾತು ಬಿಡುವುದೇ…? “… 


ಮೌನವೆಂದರೆ ಮಾತು ಬಿಡುವುದೇ...? - Janathavani

ಮಮತಾ ಪ್ರಭು 
ಹಾಸನ.
[email protected]

error: Content is protected !!