ಟೆಸ್ಟ್, ಪರಿಶೀಲನೆ, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ ಕೇಂದ್ರ ಸೂಚನೆ
ನವದೆಹಲಿ, ಸೆ. 5 – ಕೊರೊನಾ ಸಾವುಗಳು ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ, ಸಾವಿನ ಸಂಖ್ಯೆ ಕಡಿಮೆ ಮಾಡಲು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಅಲ್ಲದೇ, ಈ ರಾಜ್ಯಗಳಲ್ಲಿ ಯಾವ ಜಿಲ್ಲೆಗಳು ಕಳವಳಕಾರಿ ಪರಿಸ್ಥಿತಿಯಲ್ಲಿವೆ ಎಂಬುದನ್ನೂ ಸಹ ಕೇಂದ್ರ ಸರ್ಕಾರ ಗುರುತಿಸಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯೂ ಸೇರಿದೆ.
ದಾವಣಗೆರೆ, ಕೊಪ್ಪಳ, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳು ಆರ್.ಟಿ. – ಪಿಸಿಆರ್ ಪರೀಕ್ಷೆ ಸೌಲಭ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು, ಮನೆ – ಮನೆ ಪರಿಶೀಲನೆ ನಡೆಸಿ ಸಕ್ರಿಯ ಪ್ರಕರಣಗಳನ್ನು ಪತ್ತೆ ಮಾಡಬೇಕು ಹಾಗೂ ತಮ್ಮ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕಂಡು ಬಂದಿರುವ ಕೊರೊನಾ ಸೋಂಕುಗಳು ಹಾಗೂ ಸಾವುಗಳನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಸೂಚನೆ ನೀಡಿದ್ದು, ಕೊರೊನಾ ಹರಡುವ ಸರಣಿ ತುಂಡರಿಸಬೇಕು ಮತ್ತು ಸಾವಿನ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಹಂತಕ್ಕೆ ತರಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.
ಜಿಲ್ಲೆಯಲ್ಲಿ 406 ಪಾಸಿಟಿವ್ 7 ಸಾವು, 238 ಬಿಡುಗಡೆ
ದಾವಣಗೆರೆ, ಸೆ. 5- ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಒಂದೇ ದಿನ 406 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಳು ಜನರು ಸಾವನ್ನಪ್ಪಿದ್ದು, 238 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 10977 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, 7986 ಜನರು ಸೋಂಕು ಮುಕ್ತರಾಗಿ ದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2778 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 152, ಹರಿಹರ 33, ಜಗಳೂರು 26, ಚನ್ನಗಿರಿ 116, ಹೊನ್ನಾಳಿ 52 ಹಾಗೂ ಹೊರ ಜಿಲ್ಲೆಯ 27 ಜನರಲ್ಲಿ ಸೋಂಕು ಕಾಣಿಸಿದೆ.
ದಾವಣಗೆರೆಯ ಆಂಜನೇಯ ಮಿಲ್ ಕ್ವಾಟ್ರಸ್ನ 68 ವರ್ಷದ ಮಹಿಳೆ, ವಿನೋಬನಗರದ 66 ವರ್ಷದ ಮಹಿಳೆ, ಕೆ.ಬಿ. ಬಡಾವಣೆಯ 83 ವರ್ಷದ ವೃದ್ಧೆ, ಬೂದಿಹಾಳ್ನ 34 ವರ್ಷದ ಪುರುಷ, ಹರಪನಹಳ್ಳಿ ತಾಲ್ಲೂಕು ಪುಣಬಘಟ್ಟದ 35 ವರ್ಷದ ಪುರುಷ, ನ್ಯಾಮತಿಯ 65 ವರ್ಷದ ಪುರುಷ, ಜಗಳೂರು ತಾಲ್ಲೂಕು ಬಿದರಕೆರೆಯ 60 ವರ್ಷದ ಪುರುಷ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ವೆಂಟಿಲೇಟರ್ ಕೊರತೆ ನನ್ನ ಗಮನಕ್ಕೆ ಬಂದಿಲ್ಲ: ಭೈರತಿ
ದಾವಣಗೆರೆ, ಸೆ. 5- ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್ ದೊರಕದೆ ಇರುವಂತಹ ವರದಿಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಗರದಲ್ಲಿ ವೆಂಟಿಲೇಟರ್ ಸಿಗದೆ ಮರಣ ಹೊಂದುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿ ಕಾಪಾಡಲು ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ಸಚಿವರು ಹೇಳಿದರು
ಜಿಲ್ಲಾಸ್ಪತ್ರೆಗೆ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಸರ್ಕಾರಿ ಆಸ್ಪತ್ರೆಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಸಂಸದರು, ಶಾಸಕರು ಕೈ ಜೋಡಿಸಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಕೂಡಲೇ ನೀಗಿಸಲಾಗುವುದು ಎಂದರು.
ಡ್ರಗ್ ಮಾಫಿಯಾ ವಿರುದ್ಧ ಉಸ್ತುವಾರಿಯಾಗಿ ಗೃಹ ಸಚಿವರು, ಮುಖ್ಯಮಂತ್ರಿಗಳು ನಿರ್ವಹಿಸುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ಅನುಭವಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಇದೇ ಸಂದರ್ಭದಲ್ಲಿ ಭೈರತಿ ಹೇಳಿದರು.
ಸಕ್ರಿಯವಾಗಿ ಟೆಸ್ಟ್ಗಳ ಸಂಖ್ಯೆ ಹೆಚ್ಚಿಸಬೇಕು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಸೋಂಕಿತರಿಗೆ ದಕ್ಷವಾಗಿ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕಂಡು ಬಂದಿರುವ ಕೊರೊನಾ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಕರ್ನಾಟಕಗಳು ಮುಂಚೂಣಿ ಯಲ್ಲಿದ್ದು, ಇವುಗಳ ಪಾಲು ಶೇ.46ರಷ್ಟಾಗಿದೆ. ಸಾವುಗಳಲ್ಲೂ ಸಹ ಈ ರಾಜ್ಯಗಳು ಶೇ.52ರಷ್ಟು ಪಾಲು ಹೊಂದಿವೆ.
ಈ ಮೂರು ರಾಜ್ಯಗಳು ಕೊರೊನಾ ಸಾವುಗಳಲ್ಲಿ ಶೇ.52ರಷ್ಟು ಪಾಲು ಹೊಂದಿವೆ. ಮಹಾರಾಷ್ಟ್ರ ಒಂದೇ ರಾಜ್ಯ ಸಾವಿನ ಶೇ.35ರಷ್ಟು ಪಾಲು ಹೊಂದಿದೆ ಎಂದು ಸಚಿವಾಲಯ ಹೇಳಿದೆ. ದೇಶದ ಒಟ್ಟು ಸಕ್ರಿಯ ಸೋಂಕಿತರಲ್ಲಿ ಐದು ರಾಜ್ಯಗಳು ಶೇ.60ಕ್ಕೂ ಹೆಚ್ಚು ಪಾಲು ಹೊಂದಿವೆ. ಇವುಗಳಲ್ಲಿ ಮಹಾರಾಷ್ಟ್ರ ಶೇ.25 ಸಕ್ರಿಯ ಸೋಂಕಿತರನ್ನು ಹೊಂದಿದೆ. ಶೇ.12.06ರೊಂದಿಗೆ ಆಂಧ್ರ ಪ್ರದೇಶ ಎರಡು ಹಾಗೂ ಶೇ.11.71 ಪ್ರಕರಣಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಶೇ.6.92 ಪ್ರಕರಣಗಳನ್ನು ಹೊಂದಿರುವ ಉತ್ತರ ಪ್ರದೇಶ ನಾಲ್ಕು ಹಾಗೂ ಶೇ.6.10ರೊಂದಿಗೆ ತಮಿಳುನಾಡು ಐದನೇ ಸ್ಥಾನದಲ್ಲಿದೆ.
ಈ ಪೈಕಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಕರ್ನಾಟಕಗಳೇ ಶೇ.49ರಷ್ಟು ಸಕ್ರಿಯ ಪ್ರಕರಣಗಳ ಪಾಲು ಹೊಂದಿವೆ. ಶೇ.57ರಷ್ಟು ಕೊರೊನಾ ಸಾವುಗಳು ಇದೇ ರಾಜ್ಯಗಳಲ್ಲಿ ಸಂಭವಿಸಿವೆ. ಶನಿವಾರದಂದು ದೇಶದ ಒಟ್ಟು ಸೋಂಕಿತರ ಸಂಖ್ಯೆ 40,23,179ಕ್ಕೆ ತಲುಪಿದೆ. ಒಂದೇ ದಿನ ದಾಖಲೆಯ 86,432 ಸೋಂಕಿತರು ಕಂಡು ಬಂದಿದ್ದಾರೆ. ಸಾವಿನ ಸಂಖ್ಯೆ 69,561ಕ್ಕೆ ಏರಿಕೆಯಾಗಿದೆ.