2ನೇ ಸ್ಥಾನಕ್ಕೆ ಬಂದರೂ ತಗ್ಗದ ಕೊರೊನಾ ವೇಗ

ನವದೆಹಲಿ, ಸೆ. 6 – ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 41.93 ಲಕ್ಷಕ್ಕೆ ತಲುಪಿದ್ದು, ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸೋಂಕಿತರ ದೇಶವಾಗಿದೆ. ಇಷ್ಟಾದರೂ, ಹೊಸ ಸೋಂಕಿತರು ಪತ್ತೆಯಾಗುವ ವೇಗ ತಗ್ಗಿಲ್ಲ.

ಖಾಸಗಿ ಸುದ್ದಿ ಸಂಸ್ಥೆಯಾದ ಪಿಟಿಐ, ಭಾನುವಾರ ಸಂಜೆಯವರೆಗಿನ ಕೊರೊನಾ ಸೋಂಕಿತರ ಸಂಖ್ಯೆ  41,93,237 ಎಂದು ವರದಿ ಮಾಡಿದೆ. 

ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಭಾನುವಾರ ಒಂದೇ ದಿನ 90,632 ಸೋಂಕಿತರು ಪತ್ತೆಯಾಗಿದ್ದಾರೆ. ಮೊದಲ ಬಾರಿಗೆ ಒಂದೇ ದಿನದಲ್ಲಿ ಸೋಂಕಿತರು ಪತ್ತೆಯಾದ ಪ್ರಮಾಣ 90 ಸಾವಿರದ ಗಡಿ ದಾಟಿದೆ. 

ವಿಶ್ವ ಆರೋಗ್ಯ ಸಂಘಟನೆಯ ವರದಿಯ ಪ್ರಕಾರ ಬ್ರೆಜಿಲ್ ಸೋಂಕಿತರ ಸಂಖ್ಯೆ 40.41 ಲಕ್ಷವಾಗಿದೆ. ಅಮೆರಿಕದ ಮಾತ್ರ ಒಟ್ಟು ಸೋಂಕಿತರಲ್ಲಿ ಭಾರತಕ್ಕಿಂತ ಮುಂದಿದ್ದು, ಅಲ್ಲಿ 60 ಲಕ್ಷಕ್ಕೂ ಹೆಚ್ಚು ಸೋಂಕಿತರು ಇದುವರೆಗೂ ಪತ್ತೆಯಾಗಿದ್ದಾರೆ.

ಭಾರತ ಹೊರತು ಪಡಿಸಿದರೆ ಬೇರೆ ಯಾವುದೇ ದೇಶದಲ್ಲಿ ಇದುವರೆಗೂ ಒಂದೇ ದಿನ 75 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಬ್ರೆಜಿಲ್ ಹಾಗೂ ಅಮೆರಿ ಕಗಳಲ್ಲಿ ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಈ ಎರಡೂ ದೇಶಗಳಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ 40ರಿಂದ 50 ಸಾವಿರಗಳ ನಡುವಿದೆ.

ಕಳೆದೆರಡು ವಾರಗಳಲ್ಲಿ ಭಾರತಕ್ಕೆ ಹೋಲಿಸಿದರೆ ಬ್ರೆಜಿಲ್‌ನಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಅರ್ಧದಷ್ಟು ಕಡಿಮೆ ಇದೆ. ಕೆಲ ದಿನಗಳಲ್ಲಿ 20 ಸಾವಿರಕ್ಕೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ನಾಲ್ಕರಿಂದ 5 ಸಾವಿರದಷ್ಟು ಕಡಿಮೆ ಹಂತಕ್ಕೆ ತಲುಪಿದೆ. ಆದರೆ, ಭಾರತದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಸಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಸೋಂಕಿತರು ಪತ್ತೆಯಾಗುವ ಸಂಖ್ಯೆ 80 ಸಾವಿರಕ್ಕಿಂತ ಹೆಚ್ಚಾಗಿಯೇ ಇದೆ.

ಒಂದೆಡೆ ಬ್ರೆಜಿಲ್ ಹಾಗೂ ಅಮೆರಿಕಗಳ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಸೋಂಕಿತರು ಹೆಚ್ಚಾಗುತ್ತಿರುವುದರಿಂದ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ದೇಶದತ್ತ ಮುನ್ನಡೆಯುವಂತಾಗಿದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಟೆಸ್ಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಟೆಸ್ಟ್ ನಡೆಸುವ ಪ್ರಮಾಣ ದಿನಕ್ಕೆ 4ರಿಂದ 5 ಲಕ್ಷದಷ್ಟಿತ್ತು. ಅದೀಗ ಪ್ರತಿದಿನಕ್ಕೆ ಹತ್ತು ಲಕ್ಷದವರೆಗೂ ತಲುಪಿದೆ. 

ಸಾವಿನ ಸಂಖ್ಯೆಯೂ ಸಹ ಭಾರತದಲ್ಲಿ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ 70,626ಕ್ಕೆ ತಲುಪಿದೆ. ಬ್ರೆಜಿಲ್ ಹಾಗೂ ಅಮೆರಿಕಗಳಲ್ಲಿ ಮಾತ್ರ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯ ಕೊರೊನಾ ಸಾವುಗಳು ಸಂಭವಿಸಿವೆ. ಆದರೆ, ಒಟ್ಟಾರೆ ಜನಸಂಖ್ಯೆ ಪರಿಗಣಿಸಿದಾಗ ಭಾರತದ ಸ್ಥಿತಿ ಉತ್ತಮವಾಗಿದೆ. 

error: Content is protected !!