ಜಗಳೂರು ಶಾಸಕ ಎಸ್.ವಿ. ರಾಮಚಂದ್ರ
ಹರಪನಹಳ್ಳಿ, ಸೆ.4- ಜಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳು ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ನಂತರ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಪುನಃ ತಾಲ್ಲೂಕಿನ 7 ಗ್ರಾಮ ಪಂಚಾಯಿತಿ ಗಳನ್ನು ದಾವಣಗೆರೆ ಜಿಲ್ಲೆಗೆ ಮರು ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರಪ್ಪ ಹೇಳಿದರು.
ಉಚ್ಚಂಗಿದುರ್ಗದ ಬಳಿ ಇರುವ ಹಾಲಮ್ಮನ ತೋಪಿನಲ್ಲಿ ಜಗಳೂರು ಬಿಜೆಪಿ ಘಟಕ ಹಾಗೂ ಎಸ್.ವಿ. ರಾಮಚಂದ್ರಪ್ಪನವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಜಗಳೂರಿನ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ವರ್ಷ ನೀರು ತುಂಬಿಸುವ ಕೆಲಸವಾಗುತ್ತಿದ್ದು ಭರದ ನಾಡಿಗೆ ನೀರು ಬಂದರೆ ಜನ ಸಾಮಾನ್ಯರ ಬದುಕು ಹಸನಾಗುತ್ತದೆ ಎಂದರು.
ಉಚ್ಚಂಗಿದುರ್ಗದ ಹಾಲಮ್ಮನ ತೋಪಿನಲ್ಲಿ ಹಾಗೂ ಗುಡ್ಡದಲ್ಲಿರುವ ಉಚ್ಚೆಂಗೆಮ್ಮನ ದೇವಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಿದ್ದು, ಅವರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು, ಹಾಲಮ್ಮನ ತೋಪಿನಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣದ ಕೆಲಸ ಶೀಘ್ರವೇ ಪ್ರಾರಂಭಿಸಲಾಗವುದು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ಸ್ಥಳಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದ ಅವರು, ಈ ಅವಧಿಯಲ್ಲಿ ನನಗೆ ಮಂತ್ರಿ ಸ್ಥಾನಮಾನ ಸಿಗುವುದು ಅನುಮಾನವಾಗಿದ್ದು ಮುಂದಿನ ಬಾರಿ ಮತ್ತೊಮ್ಮೆ ಗೆದ್ದು ನಾನು ಮಂತ್ರಿಯಾಗಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯ್ಯಕ್ಷ ಕೆಂಚನಗೌಡ್ರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೊಕ್ಕೆ ನಾಗರಾಜ್ ಮಾತನಾಡಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ಸಿದ್ದಪ್ಪ, ಮುಖಂಡರಾದ ಪಣಿಯಾಪುರ ಲಿಂಗರಾಜ್, ಬಾನಳ್ಳಿ ಕೆಂಚನಗೌಡ್ರು, ಡಿ.ಎಸ್. ಹಾಲಪ್ಪ, ರವಿಗೌಡ್ರು, ಅಣಿಜಿಗೇರಿ ಭರಮನಗೌಡ್ರು, ಗಿರಿಯಪ್ಪ, ಕೆಂಚಪ್ಪ, ಎಸ್.ಕೆ. ವಿಶ್ವನಾಥಯ್ಯ, ಬಸವರಾಜ್, ನಂದೆಮ್ಮ, ಜಯಮ್ಮ, ನಿರ್ಮಲ, ಬಸಮ್ಮ, ತೌಡೂರು ಕೆ. ಮಂಜುನಾಥಯ್ಯ, ಕ್ಯಾರಕಟ್ಟಿ ಶಿವಯೋಗಿ, ಹೊಸಕೋಟಿ ಶರಣಪ್ಪ, ಜಾತಪ್ಪ ಪೂಜಾರ್ ಹುಚ್ಚಪ್ಪ, ಅತಾವುಲ್ಲಾ, ಈರಣ್ಣ ವಿಜಯ ಕುಮಾರ್, ರಿಯಾಜ್ ಯುವರಾಜ್, ವೀರೇಶ, ಉಮೇಶ, ಅಂಜಿನಪ್ಪ ಸೇರಿದಂತೆ ಇತರರು ಇದ್ದರು.