ಅಮೃತ ಮಹೋತ್ಸವದಲ್ಲಿ ಸಂತ ಪೌಲರ ಶಿಕ್ಷಣ ಸಂಸ್ಥೆ

ಒಂದು ಸಂಸ್ಥೆಯ ಜೀವಿತದಲ್ಲಿ ಅಮೃತ ಮಹೋತ್ಸವ ಒಂದು ಮೈಲಿಗಲ್ಲು. 75 ಸಂವತ್ಸರಗಳನ್ನು ಸಫಲವಾಗಿ ಪೂರೈಸಿರುವ ಸಂಭ್ರಮದಾಚರಣೆ ಅಮೃತ ಮಹೋತ್ಸವ.

ಸೂರ್ಯನು ಬೆಳಕು ಚೆಲ್ಲಿದಾಗ
ಭೂಮಂಡಲವೇ ಪ್ರಕಾಶಿಸುತ್ತದೆ
ಮೊಗ್ಗೆಲ್ಲಾ ಅರಳಿ ಹೂವಾಗುತ್ತದೆ
ಹೂ ಬನಗಳು ನಲಿದಾಡುತ್ತವೆ.
ಇರುಳು ದೂರವಾಗುತ್ತದೆ.

ಗಿಡವೊಂದಕ್ಕೆ ಗೊಬ್ಬರ ನೀಡಿ, ನೀರುಣಿಸಿ, ಬೆಳೆಸಿ, ಹೂ ಬಿಟ್ಟಾಗ ಸಂತೋಷವಾಗುತ್ತದೆ. ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರವಾದದ್ದು,  ಪ್ರಾತಃಸ್ಮರಣೀಯ ವಾದದ್ದು ಎಂಬುವುದರಲ್ಲಿ ಎರಡು ಮಾತಿಲ್ಲ.

ಸ್ವಾತಂತ್ರ್ಯ ಪೂರ್ವದಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ, ದೈವಕರೆಗೆ ಓಗೊಟ್ಟು, ಸರ್ವವನ್ನು ಪರಿತ್ಯಜಿಸಿ, ಸುವಾರ್ತೆಗೆಂದು, ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಪೂಜ್ಯ ಧರ್ಮಭಗಿನಿಯರ ಸೇವೆ ಅಪಾರ. ನಲ್ಮೆಯೊಂದಿಗೆ ಯಾರನ್ನೂ ತಿರಸ್ಕರಿಸದೆ, ಸರ್ವರನ್ನೂ ಅಂಗೀಕರಿಸಿ, ಸುಮಾರು 75 ವರ್ಷಗಳಿಂದ ದಾವಣಗೆರೆಯ ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಿಸ್ವಾರ್ಥ, ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸಿ ನಮ್ಮ CSST ಸಂಸ್ಥೆಯ ಧರ್ಮಭಗಿನಿಯರು ಬಿತ್ತಿದ ಜ್ಞಾನದ ಚಿಕ್ಕ ಬೀಜ ಮಣ್ಣಲ್ಲಿ ಮೊಳಕೆಯೊಡೆದು, ಗಿಡವಾಗಿ ಚಿಗುರಿ ಮರವಾಗಿ ಬೆಳೆದು ಇಂದು ಹೆಮ್ಮರವಾಗಿ ತನ್ನ ರೆಂಬೆ ಕೊಂಬೆಗಳಲ್ಲಿ ಸಾವಿರಾರು ಮಕ್ಕಳ ಭವ್ಯ ಜೀವನವನ್ನು ರೂಪಿಸುತ್ತಿರುವ ಸಂತ ಪೌಲರ ಶಿಕ್ಷಣ ಸಂಸ್ಥೆ ಇಂದು ಅಮೃತ ಮಹೋತ್ಸವದ ಕಳಸ ಹೊತ್ತು ಸಂಭ್ರಮಿಸುತ್ತಿದೆ.

ಸಂತ ಪೌಲರ ಶಿಕ್ಷಣ ಸಂಸ್ಥೆ, ದಾವಣಗೆರೆಯ ಇತಿಹಾಸದಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಶಿಸ್ತು, ಶುಚಿತ್ವ, ಸಂಸ್ಕೃತಿ ಸಂಸ್ಕಾರಗಳೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಅಚ್ಚುಕಟ್ಟಾಗಿ ಭವಿಷ್ಯದ ಪ್ರಜೆಗಳಿಗೆ ನೀಡಿ ಜನಸಾಮಾನ್ಯರ ಹೃನ್ಮನಗಳಲ್ಲಿ ಸದಾ ಹಚ್ಚ ಹಸಿರಾಗಿರುವ ಸಂಸ್ಥೆ ನಮ್ಮದು ಎಂದು ಹೇಳಲು ನಮಗೆ ಪರಮಾನಂದವಾಗುತ್ತದೆ.

ಪರರ ಸೇವೆಯಲ್ಲಿಯೇ ಪರಮಾತ್ಮನನ್ನು ಕಾಣುತ್ತಿರುವ CSST ಸಂಸ್ಥೆಯ ಕನ್ಯಾಭಗಿನಿಯರು, ಶಾಲೆಯ ಮುಖ್ಯ ಧ್ಯೇಯವಾದ ಪ್ರೀತಿ, ಪ್ರಾರ್ಥನೆ, ಕೆಲಸ ಎಂಬ ತ್ರೈಮಾಣಿಕ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕತೆಯ, ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಅನೇಕ ಬಡ ಮಕ್ಕಳಿಗೆ, ನಿರ್ಗತಿಕರಿಗೆ ಆಶ್ರಯ ತಾಣವಾಗಿ ಜಾತಿ, ಮತ, ಪಂಥಗಳನ್ನು ನೋಡದೆ, ಜೀವನ ಮೌಲ್ಯಗಳನ್ನು ಸಾರುತ್ತಿರುವುದು ಗಮನಾರ್ಹ.

ಪ್ರಸ್ತುತ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಶುವಿಹಾರದಿಂದ ಪದವಿ ಪೂರ್ವಕಾಲೇಜಿನವರೆಗೆ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿಯನ್ನು ಸಂತ ಪೌಲರ ಶಿಕ್ಷಣ ಸಂಸ್ಥೆಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ.

`ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ನಮ್ಮ ಸಂತ ಪೌಲರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಸಾಧನೆಗೈಯ್ಯದ ಕ್ಷೇತ್ರವಿಲ್ಲ ಎನ್ನಬಹುದು.

`ಸ್ತ್ರೀ ಅಬಲೆಯಲ್ಲ, ಸಬಲೆ’, `ತೊಟ್ಟಿಲು ತೂಗುವ ಕೈಗಳೇ ನಾಡನ್ನಾಳುತ್ತವೆ’ ಎನ್ನುವ ನುಡಿಯಂತೆ, ನಮ್ಮ ಸಂಸ್ಥೆಯ ಸಾವಿರಾರು ವಿದ್ಯಾರ್ಥಿನಿಯರು, ತಮ್ಮ ಪ್ರತಿಭೆಯನ್ನು ಶಿಕ್ಷಣ, ಕ್ರೀಡೆ, N.C.C. Guides, I.T. ವಿಜ್ಞಾನ, ಸಮಾಜ ಸೇವೆ, ಕರಕುಶಲ, ನಾಟ್ಯ ಮತ್ತು ಸಂಗೀತ ಹೀಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಹತ್ತು ಹಲವಾರು ಸಾಧನೆಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿದ್ದಾರೆ.

ಸಂತ ಪೌಲರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿನಿಯರು ಪ್ರಸ್ತುತ ವಿಶ್ವದಾದ್ಯಂತ ಡಾಕ್ಟರ್, ಎಂಜಿನಿಯರ್, ನರ್ಸ್, ನ್ಯಾಯವಾದಿಗಳು, ಭಾರತೀಯ ನಾಗರಿಕ ಸೇವೆ (IAS) ಧರ್ಮಭಗಿನಿಯರಾಗಿ, ಸಮಾಜ ಸೇವಕರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಗೊಳಿಸುತ್ತಿದೆ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ನಮ್ಮ ಸಂತ ಪೌಲರ ಶಿಕ್ಷಣ ಸಂಸ್ಥೆ ತನ್ನ ಸೇವೆಯನ್ನು ಮುಂದುವರೆಸಿ ಶತಮಾನೋತ್ಸವ ಕಾಣಲಿ ಎಂದು ಹಾರೈಸುತ್ತೇವೆ. 


ಸಂತ ಪೌಲರ ಶಿಕ್ಷಣ ಸಂಸ್ಥೆ

error: Content is protected !!