ವಿಶೇಷ ವಿವಾಹ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ
ನವದೆಹಲಿ, ಸೆ. 3 – ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಬಯಸುವವರು ತಮ್ಮ ಖಾಸಗಿ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂಬ ನಿಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಿಸಲಾಗಿದೆ.
ಖಾಸಗಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಮದುವೆ ಹಕ್ಕಿನ ಮೇಲೆ ಕರಾಳ ಪರಿಣಾಮ ಬೀರುತ್ತದೆ. ಮದುವೆಯಾಗುವ ಸಲುವಾಗಿ ಖಾಸಗಿತನದ ಹಕ್ಕು ಬಿಟ್ಟುಕೊಡಿ ಎಂದು ಹೇಳಿದಂತಾಗುತ್ತದೆ. ಇದು ಘನತೆ ಹಾಗೂ ಮದುವೆ ಹಕ್ಕಿಗೆ ವಿರುದ್ಧವಾಗಿದೆ ಎಂದು ಕೇರಳದ ಕಾನೂನು ವಿದ್ಯಾರ್ಥಿನಿ ನಂದಿನಿ ಪ್ರವೀಣ್ ಅವರು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.
ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಯಾಗಲು ಬಯಸುವವರು 30 ದಿನಗಳ ಮುಂಚೆ ತಮ್ಮ ಖಾಸಗಿ ವಿವರಗಳನ್ನು ಸಾರ್ವಜನಿಕರ ಪರಿ ಶೀಲನೆಗಾಗಿ ಪ್ರಕಟಿಸಬೇಕಿದೆ. ಇದಕ್ಕೆ ಯಾರು ಬೇಕಾದರೂ ಆಕ್ಷೇಪಣೆಗಳನ್ನು ಸಲ್ಲಿಸಬಹು ದಾಗಿದೆ. ಈ ಸಂದರ್ಭದಲ್ಲಿ ಮದುವೆ ಅಧಿಕಾರಿ ಆಕ್ಷೇಪಣೆಗಳ ಬಗ್ಗೆ ತನಿಖೆ ನಡೆಸಬಹುದಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ರೀತಿಯ ನಿಯಮಗಳು ಹಿಂದೂ ವಿವಾಹ ಕಾಯ್ದೆಯಲ್ಲಿ ಇಲ್ಲ. ಸಾಂಪ್ರದಾಯಿಕ ಇಸ್ಲಾಮ್ ಕಾನೂನಿನಲ್ಲೂ ಇಲ್ಲ. ಹೀಗಿರುವಾಗ ವಿಶೇಷ ವಿವಾಹ ಕಾಯ್ದೆಯಡಿ ಪಕ್ಷಪಾತ ಮಾಡುವುದು ಸಮಾನತೆ ಹಕ್ಕಿನ ಉಲ್ಲಂಘನೆ ಎಂದು ಅರ್ಜಿದಾರರು ಹೇಳಿದ್ದಾರೆ.
ಕಾಯ್ದೆಯ ಪ್ರಕಾರ ಮದುವೆಯಾಗಲು ಬಯಸುವವರು ತಮ್ಮ ಹೆಸರು, ಜನ್ಮ ದಿನಾಂಕ, ವಯಸ್ಸು, ವೃತ್ತಿ, ಪೋಷಕರ ಹೆಸರು ಹಾಗೂ ವಿವರ, ವಿಳಾಸ, ಪಿನ್ ಕೋಡ್, ಗುರುತಿನ ಮಾಹಿತಿ, ಫೋನ್ ಸಂಖ್ಯೆ ಇತ್ಯಾದಿ ಬಹಿರಂಗ ವಾಗಿ ಪ್ರಕಟಿಸ ಬೇಕಿದೆ. ಇದು ಕಾಯ್ದೆಯ ವಿಚಿತ್ರ ಅಗತ್ಯವಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.