ದಾವಣಗೆರೆ, ಸೆ.3- ಛಳಿ ಇದೆ ಎಂದು ಹೊದ್ದು ಮಲಗುವಂತಿಲ್ಲ, ಮಳೆ ಬಂತೆಂದು ತಡ ಮಾಡುವಂತಿಲ್ಲ, ಮುಂಜಾನೆ ಬೀಳುವ ಸವಿಗನಸಿನ ಮಾತೇ ಇಲ್ಲ.
ಹೌದು ಇವರು ಪತ್ರಿಕಾ ವಿತರಕರು. ಸಂವಿಧಾನದ ನಾಲ್ಕನೇ ಅಂಗ ಎಂದು ಮಾಧ್ಯಮವನ್ನು ಕರೆದರೆ, ಇವರು ಮಾಧ್ಯಮದ ನಾಲ್ಕನೇ ಅಂಗ ಎನ್ನಲಾಗುತ್ತದೆ.
ಕೈಯ್ಯಲ್ಲಿ ಮೊಬೈಲ್ ಇದ್ದರೆ, ಮನೆಯಲ್ಲಿ ಟಿವಿ ಇದ್ದರೂ ಬೆಳಿಗ್ಗೆ ಪತ್ರಿಕೆ ಓದದಿದ್ದರೆ ಬಹುಪಾಲು ಜನಕ್ಕೆ ಇಂದಿಗೂ ಸಮಾಧಾನವಿ ರುವುದಿಲ್ಲ. ತುಸು ತಡವಾದರೂ ಯಾಕಪ್ಪಾ ಲೇಟು? ಎಂದು ಪತ್ರಿಕೆ ಹಾಕುವವನ್ನು ಕೇಳು ವಷ್ಟು ಪತ್ರಿಕೆ ಓದುವ ಗೀಳು. ಆದರೆ, ಅಷ್ಟೇ ಪ್ರಾಮಾಣಿಕ ಕೆಲಸ ಈ ಪತ್ರಿಕಾ ವಿತರಕರದ್ದು. ಬೆಳಿಗ್ಗೆ 4 ಗಂಟೆಯೊಳಗೆ ಕನಸಿನ ನಿದ್ರೆಗೆ ಬ್ರೇಕ್ ಹಾಕಿ ಹೊರಡಬೇಕು. ಪತ್ರಿಕೆಗಳನ್ನು ಜೋಡಿಸಿಕೊಂಡು ಸೈಕಲ್ ಅಥವಾ ಬೈಕ್‌ನಲ್ಲಿಟ್ಟುಕೊಂಡು ಓದುಗನಿಗೆ ತುಸು ತಡವಾಗದಂತೆ ಕೈ ಮುಟ್ಟಿಸುವ ಕಾಯಕವಿದು.
ಪಾರ್ಟ್ ಟೈಂ ಜಾಬ್ : ಹಲವಾರು ವಿದ್ಯಾರ್ಥಿಗಳಿಗೆ ಪತ್ರಿಕೆ ಹಂಚುವುದು ಪಾರ್ಟ್ ಟೈಂ ಕೆಲಸ. ಇದು ಅವರ ಓದಿಗೆ ಸಹಕಾರಿಯಾಗಿದೆ. ಬೆಳಿಗ್ಗೆ 4 ರಿಂದ 8ರ ಒಳಗೆ ಪತ್ರಿಕೆ ವಿತರಣೆ ಮುಗಿಸಿ ಸಾಧ್ಯವಾದರೆ ತುಸು ಹೊತ್ತು ವಿಶ್ರಾಂತಿ ಪಡೆದು ಶಾಲೆ ಅಥವಾ ಕಾಲೇಜುಗಳಿಗೆ ತೆರಳುವ ಹುಡುಗರೇ ಹೆಚ್ಚು.
ಇನ್ನು ಕೆಲವು ಏಜೆಂಟರು ಹಲವಾರು ವರ್ಷಗಳಿಂದ ಈ ವೃತ್ತಿ ನಡೆಸಿಕೊಂಡು ಬಂದಿದ್ದಾರೆ. ಕುಟುಂಬದವರು ಅನಾರೋಗ್ಯ ಪೀಡಿತರಾದರೂ, ಶುಭ ಕಾರ್ಯವಿದ್ದರೂ ಇವರು ತಮ್ಮ ಕಾಯಕ ಬಿಡುವಂತಿಲ್ಲ.
ಇಂದು ಪತ್ರಿಕಾ ವಿತರಕರ ದಿನಾಚರಣೆ
ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗುತ್ತಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 3 ಗಂಟೆಯಿಂದ 7.30 ಗಂಟೆವರೆಗೆ ಪತ್ರಿಕೆ ಜೋಡಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಅಧಿಕಾರಿಗಳು ಸ್ಪಂದಿಸಬೇಕಿದೆ ಎಂದು ಹಿರಿಯ ಪತ್ರಿಕಾ ವಿತರಕ ಎ.ಎನ್. ಕೃಷ್ಣಮೂರ್ತಿ ಹೇಳಿದರು.
ಅಂದ ಹಾಗೆ ಇವರಿಗೆ ಸಿಗುವುದು ವರ್ಷದಲ್ಲಿ ನಾಲ್ಕು ರಜೆಗಳು ಮಾತ್ರ. ಯುಗಾದಿ, ಗಣೇಶನ ಹಬ್ಬ, ದಸರಾ ಹಾಗೂ ದೀಪಾವಳಿಯಲ್ಲಿ ಮಾತ್ರ ಇವರಿಗೆ ರಜೆ.
ಈಡೇರಲೇ ಇಲ್ಲ ಕಟ್ಟಡದ ಬೇಡಿಕೆ: ಪ್ರತಿ ದಿನ ವಿತರಿಸಬೇಕಾದ ಪತ್ರಿಕೆಗಳನ್ನು ಜೋಡಿಸಿ ಕೊಳ್ಳಲು ದಾವಣಗೆರೆಯಲ್ಲಿ ಒಂದು ಕಟ್ಟಡ ವಿಲ್ಲ. ಹಳೇ ಬಸ್ ನಿಲ್ದಾಣದ ಮುಂಭಾಗ ಹಾಗೂ ಸುತ್ತ ಮುತ್ತಲಿನ ಮಳಿಗೆಗಳ ಮುಂದೆ ಕುಳಿತು ಪತ್ರಿಕೆ ಜೋಡಿಸಿಕೊಳ್ಳುವ ಪರಿಸ್ಥಿತಿ ಇವರದ್ದು. ಈ ಬಗ್ಗೆ ವಿತರಕರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಇವರಿಗೊಂದು ಜಾಗ ಕಲ್ಪಿಸಿಕೊಡಬೇಕಿದೆ.
ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ 2018ರ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 2 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಇನ್ನೂ ಯೋಜನೆ ರೂಪುಗೊಂಡು ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದು ವಿತರಕರ ಬೇಸರದ ನುಡಿ.
ಪತ್ರಿಕೆ ಹಂಚುವವರಿಗಾಗಿ ಕ್ಷೇಮ ನಿಧಿ ಸ್ಥಾಪಿಸಲು 2 ಕೋಟಿ ರೂ. ಮೀಸಲಿಟ್ಟಿದ್ದು, ಜಿಲ್ಲೆಯಲ್ಲಿನ ಪತ್ರಿಕಾ ಏಜೆಂಟರು ಹಾಗೂ ವಿತರಕರು ವಿವರ ಸಲ್ಲಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಿ.ರೂಪಾ ವಾರ್ತಾಧಿಕಾರಿಗಳಿಗೆ 2018ರ ಅಕ್ಟೋಬರ್ 17 ರಂದು ಪತ್ರ ಬರೆದಿದ್ದರು.
ಇದರನ್ವಯ ಈಗಾಗಲೇ ವಿವರ ನೀಡಲಾಗಿದ್ದು, ಮುಂದಿನ ಪ್ರಕ್ರಿಯೆಗಳು ಇನ್ನೂ ನಡೆದಿಲ್ಲ. ಸರ್ಕಾರ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸದೇ ಇರುವುದು ಪ್ರಕ್ರಿಯೆಯ ವಿಳಂಬಕ್ಕೆ ಕಾರಣವಾಗಿದೆ ಎಂದು ಕಾರ್ಯದರ್ಶಿಗಳು ಹೇಳಿದ್ದಾಗಿ ಕೃಷ್ಣಮೂರ್ತಿ ತಿಳಿಸಿದರು.
ವಿಶೇಷ ಪ್ಯಾಕೇಜ್‌ಗೆ ಮನವಿ: ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಗರದ ಹಿರಿಯ ಪತ್ರಿಕಾ ವಿತರಕರ ಎ.ಎನ್. ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.