ಉದ್ಯೋಗ ಖಾತ್ರಿ ಕೆಲಸದ ಅವಧಿ ಹೆಚ್ಚಳಕ್ಕೆ ಆಗ್ರಹ

ಜಿಲ್ಲೆಯ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ

ದಾವಣಗೆರೆ, ಸೆ.2- ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಅವಧಿಯನ್ನು 200 ದಿನಗಳಿಗೆ ಹೆಚ್ಚಿ ಸಲು ಒತ್ತಾಯಿಸಿ, ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಹಾಗೂ ಎಐವೈ ಎಫ್ ಗ್ರಾಮ ಘಟಕಗಳಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, ಇಡೀ ರೈತರನ್ನು ಕೃಷಿ ರಂಗದಿಂದಲೇ ಹೊರಹಾಕುವ ಸಂಚು ನಡೆದಿದೆ. ಭೂ ಸುಧಾರಣೆ ಕಾಯ್ದೆಯಿಂದ ಬಂಡವಾಳ ಶಾಹಿ ಪರ ತಿದ್ದುಪಡಿ ಮಾಡಿ, ರೈತರ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಲಪಟಾಯಿಸಿ, ರೈತರನ್ನೇ ಬೀದಿಪಾಲು ಮಾಡುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾರ್ಪೊರೇಟ್ ಕಂಪನಿಗಳಿಗೆ ಕೋಟ್ಯಾಂತರ ರೂ. ರಿಯಾಯಿತಿ ನೀಡುವ ಮೋದಿ ಸರ್ಕಾರ ರೈತರ ಸಾಲವನ್ನು ಒಂದೇ ಒಂದು ಬಾರಿ ಮನ್ನಾ ಮಾಡಲು ಮನಸ್ಸು ಮಾಡುತ್ತಿಲ್ಲ. ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನೀಡಲು ತಯಾರಿಲ್ಲ. ಕೊರೊನಾದಿಂದ ಮತ್ತೆ ತಮ್ಮ ಹಳ್ಳಿಗಳಿಗೆ ಸಣ್ಣಪುಟ್ಟ ಪಟ್ಟಣ ನಗರಗಳಿಂದ ಯುವಕರು ಮರಳಿ ವಾಪಸ್ಸಾಗಿದ್ದಾರೆ. ಆದ್ದರಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ. ತಿಪ್ಪೇಶಿ, ಜಿಲ್ಲಾ ಉಪಾಧ್ಯಕ್ಷ ಕಾಂ. ಫಜುಲುಲ್ಲಾ, ಜಿಲ್ಲಾ ಉಪಾಧ್ಯಕ್ಷ ಗದಿಗೇಶ್ ಪಾಳೇದ, ಜಿಲ್ಲಾ ಉಪಾಧ್ಯಕ್ಷ ಇರ್ಫಾನ್, ಜಿಲ್ಲಾ ಸಹಕಾರ್ಯದರ್ಶಿ ಮಂಜುನಾಥ್‌ ಹೆಚ್.ಎಂ., ಜಿಲ್ಲಾ ಸಹಕಾರ್ಯದರ್ಶಿ ಮಂಜುನಾಥ ದೊಡ್ಡಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಹರಳಯ್ಯನಗರ, ಉಪಾಧ್ಯಕ್ಷರು ರುದ್ರೇಶ್ ಮಳಲಕೆರೆ, ಜಿಲ್ಲಾ ಖಜಾಂಚಿ ಅಂಜಿನಪ್ಪ ಮಳಲಕೆರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ . ಮಂಜುನಾಥ ಮಳಲಕೆರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಲೋಹಿತ್ ಎಸ್.ಓ.ಜಿ. ಕಾಲೋನಿ, ಜಿಲ್ಲಾ ಉಪಾಧ್ಯಕ್ಷರು  ತಿಪ್ಪೇಶಿ ಹೊನ್ನೂರು, ದಾವಣಗೆರೆ ತಾ. ಉಪಾಧ್ಯಕ್ಷರು, ಹನುಮಂತಪ್ಪ ಹಾಲೇಕಲ್ಲು, ತಾ. ಕಾರ್ಯದರ್ಶಿ ಆರ್.ಮಂಜುನಾಥ, ನಗರ ಸಂಘಟನಾ ಕಾರ್ಯದರ್ಶಿ  ಎ.ಮಂಜುನಾಥ, ಸಂಚಾಲಕರು ಪರಶುರಾಮ ಹೆಚ್.ಗುದ್ದಾಳ್, ಸಂಚಾಲಕರು ಎ.ರಂಗಸ್ವಾಮಿ, ಹೊನ್ನೂರು ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!