ತುಂಗಾದಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡಲು ತಕ್ಷಣ ಗಮನ ಹರಿಸಿ

ಮಲೇಬೆನ್ನೂರು, ಸೆ.1- ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.5 ಟಿಎಂಸಿ ನೀರನ್ನು ಹರಿಸಿದ ನಂತರ ವಾಣಿ ವಿಲಾಸ ಸಾಗಕ್ಕೆ ನೀರು ಕೊಡಿ ಎಂದು ರೈತ ಸಂಘದ ವಾಸನದ ಓಂಕಾರಪ್ಪ, ಕೆ.ಎನ್.ಹಳ್ಳಿ ಪ್ರಭುಗೌಡ, ಬಿ.ವಸಂತಪ್ಪ, ನಂದಿತಾವರೆ ಶಂಭುಲಿಂಗಪ್ಪ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತುಂಗಾ, ಭದ್ರಾದಿಂದ ಬರಗಾಲ ಸೀಮೆಯ ಚಿತ್ರದುರ್ಗಕ್ಕೆ ನೀರು ಹರಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಭದ್ರಾ ಅಚ್ಚುಕಟ್ಟಿನ ರೈತರಿಗೆ ತೊಂದರೆ ಮಾಡಿ, ಬೇರೆ ಕಡೆಗೆ ನೀರು ಹರಿಸುವುದು ಸರಿಯೇ ? ಎಂದು ಅವರು ಪ್ರಶ್ನಿಸಿದ್ದಾರೆ.

ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ತರುವ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ಟೆಂಡರ್ ಪ್ರಕ್ರಿಯೆ ಈಗ ಪ್ರಾರಂಭವಾಗುತ್ತಿದೆ. ಶರವೇಗದಲ್ಲಿ ಕಾಮಗಾರಿ ನಡೆದರೂ 2 ವರ್ಷ ಸಮಯ ಬೇಕಾಗುತ್ತದೆ ಎಂದು ಮಾಹಿತಿಗಳಿಂದ ತಿಳಿದಿದೆ ಎಂದು ರೈತ ಮುಖಂಡರು ಹೇಳಿದರು.

ಭದ್ರಾ ಜಲಾಶಯದಲ್ಲಿ ಸದ್ಯ 67.600 ಟಿಎಂಸಿ ನೀರಿದ್ದು, ಇದರಲ್ಲಿ ಕುಡಿಯುವುದಕ್ಕೆ 8 ಟಿಎಂಸಿ ಮತ್ತು ಬಳಸಲಾಗದ ನೀರು 8.5 ಟಿಎಂಸಿ ಸೇರಿ ಒಟ್ಟು 16.5 ಟಿಎಂಸಿ ಆಗುತ್ತದೆ.

ಉಳಿದ 51.5 ಟಿಎಂಸಿ ನೀರಿನಲ್ಲಿ ಚಿತ್ರದುರ್ಗಕ್ಕೆ ನೀರು ಹರಿಸಿದ ನಂತರ 45 ಟಿಎಂಸಿ ನೀರು ಉಳಿಯುತ್ತದೆ. ಭದ್ರಾ ಅಚ್ಚುಕಟ್ಟಿನ ರೈತರು ಮಳೆಗಾಲ ಮತ್ತು ಬೇಸಿಗೆ ಬೆಳೆ ಬೆಳೆಯಲು 60 ಟಿಎಂಸಿ ನೀರು ಬೇಕಾಗುತ್ತದೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರ ತಕ್ಷಣ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ಆರಂಭಿಸಿ, ತ್ವರಿತ ಗತಿಯಲ್ಲಿ ಮುಗಿಸಿ, ಮುಂದಿನ ಮಳೆಗಾಲದ ವೇಳೆಗೆ  ನೀರು ಹರಿಸಬೇಕೆಂಬುದು ರೈತ ಮುಖಂಡರ ಆಗ್ರಹವಾಗಿದೆ.

error: Content is protected !!