12ನೇ ಶತಮಾನದ ಶರಣ ಕ್ರಾಂತಿ ಅತ್ಯದ್ಭುತ ಪವಾಡ

12ನೇ ಶತಮಾನದ ಶರಣ ಕ್ರಾಂತಿ ಅತ್ಯದ್ಭುತ ಪವಾಡ - Janathavaniಸಾಣೇಹಳ್ಳಿ, ಆ.31- ಭಾರತದ ಯಾವುದೇ ಭಾಷೆಯಲ್ಲಿ ನಡೆಯಲಾರದೇ ಇರುವಂತಹ ಅತ್ಯದ್ಭುತ ಪವಾಡ 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದದ್ದು ಶರಣ ಚಳುವಳಿಯಿಂದ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಸಾಣೇಹಳ್ಳಿಯ ಶ್ರೀಮಠದ ವತಿಯಿಂದ ಹಮ್ಮಿಕೊಂಡಿದ್ದ `ಮತ್ತೆ ಕಲ್ಯಾಣ’ ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

12ನೇ ಶತಮಾನದ ಕ್ರಾಂತಿ ಅದ್ಭುತ ಪವಾಡ. ಏಕೆಂದರೆ, ದೇಶೀ ಭಾಷೆಗಳಿಗೆ ಶಕ್ತಿ ಬಂತು. ಸಮಾಜದ ಎಲ್ಲ ಸ್ತರಗಳ, ಎಲ್ಲ ಕುಲ, ಜಾತಿ, ಕಸುಬು, ಗಂಡು, ಹೆಣ್ಣು ಎಲ್ಲರೂ ಸೇರಿಕೊಂಡು ಭೇದ ಭಾವವವಿಲ್ಲದೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಸ್ವಾತಂತ್ರ್ಯ ಸಿಕ್ಕಿತು. ಬಸವಣ್ಣನವರ ನೇತೃತ್ವದಲ್ಲಿ ಎಲ್ಲ ಶರಣರು ಕೂಡಿಕೊಂಡು ಕ್ರಾಂತಿ ಮಾಡಿದರು. ಅಲ್ಲಿಯರೆಗೂ ದೇವರ ಜೊತೆ ಸಂಸ್ಕೃತದಲ್ಲಿ ಮಾತ್ರ ಮಾತನಾಡಬೇಕಿತ್ತು. ಆದರೆ ಶರಣರ ಕ್ರಾಂತಿಯಿಂದ ನಮ್ಮ ದೇವರ ಜೊತೆ ನಾವೇ ಮಾತನಾಡುವಂತಾಯಿತು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ವಚನಕಾರರ ಕಾಲಕ್ಕೆ ಪರಿಸರ ಬೇರೆ, ಮಾನವ ಬೇರೆ ಎನ್ನುವ ಭಿನ್ನತೆ ಇರಲಿಲ್ಲ. ಕೈಗಾರಿಕಾ ಕ್ರಾಂತಿಯ ನಂತರ ಪರಿಸರ ಪ್ರಜ್ಞೆ ಹೆಚ್ಚಾಗಿದೆ. ಕೈಗಾರಿಕೆಗಳ ಹಿಂದೆಯೇ ಹಸಿರು ಕ್ರಾಂತಿ ಸಹ ಆರಂಭವಾಗಿ, ಅಣೆಕಟ್ಟುಗಳ ನಿರ್ಮಾಣದ ಯೋಜನೆಗಳಿಗಾಗಿ ಫಲವತ್ತಾದ ಭೂಪ್ರದೇಶ, ಕಾಡು, ಗುಡ್ಡ-ಬೆಟ್ಟಗಳ ನಾಶ ಅನಿವಾರ್ಯವಾಯ್ತು. ಆಧುನಿಕತೆ ಕಾಲಿಟ್ಟಂತೆ ಪರಿಸರವೇ ಬೇರೆ ಮಾನವನೇ ಬೇರೆ ಆಗಿರುವುದೇ, ತನ್ನ ಸ್ವಾರ್ಥಕ್ಕೆ ಎನ್ನುವ ದುರ್ಬುದ್ಧಿ ಬೆಳೆಯುತ್ತಾ ಹೋಗಿ ಪರಿಸರ ವಿನಾಶದ ಅಂಚು ತಲುಪುತ್ತಾ ಅನೇಕ ದುರಂತಗಳಿಗೆ ಕಾರಣವಾಗಲಾರಂಭಿಸಿತು ಎಂದು ಹೇಳಿದರು.

`ವಚನಗಳಲ್ಲಿ ಪರಿಸರ ಪ್ರೇಮ’ ವಿಷಯ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಮುಖ್ಯಲೆಕ್ಕಾಧಿಕಾರಿ ಡಿ.ಪಿ. ಪ್ರಕಾಶ್, ಬಸವಾದಿ ಶಿವಶರಣರ ವಚನಗಳಲ್ಲಿ ಪರಿಸರದ ನಡುವಿನ ಸಂಬಂಧ ಹಾಸುಹೊಕ್ಕಾಗಿದೆ. ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಹೋಲಿಕೆಗೆ ಆರಿಸಿಕೊಂಡಿರುವುದು ಪರಿಸರವನ್ನು. ಶರಣರಿಗೆ ಪರಿಸರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟವಾದ ಅಭಿಮತವಿದೆ ಎಂದರಲ್ಲದೇ, ಶರಣರ ವಚನಗಳನ್ನು ಉದಾಹರಿಸುವ ಮೂಲಕ ವಿಷಯ ಮಂಡನೆ ಮಾಡಿದರು.

ಶಿವಸಂಚಾರ ಕಲಾವಿದರಾದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಸಾಹಿತ್ಯ ಮತ್ತು ಹೆಚ್.ಎಸ್. ನಾಗರಾಜ್ ತಬಲಾ ಸಾಥಿ ಶರಣ್ ಕುಮಾರ್ ವಚನ ಗೀತೆಗಳನ್ನು ಹಾಡಿದರು. ಅದಿತಿ ಮತ್ತು ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆ ಮಕ್ಕಳು ವಚನ ನೃತ್ಯರೂಪಕ ನೀಡಿದರು. ಶಿವಸಂಚಾರದ ಬಿ. ರಾಜು ಲಕ್ಕಮುತ್ತೇನಹಳ್ಳಿ ಸ್ವಾಗತಿಸಿದರು.

ದಾವಣಗೆರೆ ಬಸವ ಬಳಗ, ಕೊಟ್ಟೂರು ತಾಲ್ಲೂಕಿನ ಜಿ.ಇ. ನಿರ್ಮಲ ಜಿ. ಈಶ್ವರಪ್ಪ ಕುಟುಂಬ, ಬ್ಯಾಡಗಿ ತಾಲ್ಲೂಕು ಆರ್.ಎಸ್. ಪಾಟೀಲ, ಹೊಸಪೇಟೆ ವೈದ್ಯ ಡಾ. ಮಹಾಬಲೇಶ್, ಸಾಣೇಹಳ್ಳಿ ತುಂಗಮ್ಮ ಮತ್ತು ಶ್ರೀಧರನ್ ಕುಟುಂಬದವರು ಕಾರ್ಯಕ್ರಮದ ದಾಸೋಹಿಗಳಾಗಿದ್ದರು.

error: Content is protected !!