ಭಾರತ ರತ್ನ ಪ್ರಣಬ್ ಇನ್ನಿಲ್ಲ

ಭಾರತ ರತ್ನ ಪ್ರಣಬ್ ಇನ್ನಿಲ್ಲ - Janathavaniಪಕ್ಷದ ಗಡಿ ಮೀರಿ ಬೆಳೆದ ಮುತ್ಸದ್ಧಿ ನಾಯಕ

ನವದೆಹಲಿ, ಆ. 31- ದೇಶದ ಅತ್ಯಂತ ಗೌರವಾನ್ವಿತ ಹಾಗೂ ಮೆಚ್ಚುಗೆ ಪಡೆದ ನಾಯಕರಲ್ಲೊಬ್ಬರಾದ ಭಾರತ ರತ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾಗಿ ದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಪ್ರಣಬ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಳು ದಿನಗಳ ಸಂತಾಪ ಪ್ರಕಟಿಸಿದೆ.

ತಮ್ಮ ರಾಜಾಜಿ ಮಾರ್ಗ್ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 10ರಂದು ಮೆದುಳಿ ನಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆ ಸಲಾಗಿತ್ತು. ನಂತರದಲ್ಲಿ ಶ್ವಾಸಕೋಶದ ಸೋಂಕು ಸಹ ಕಾಣಿಸಿಕೊಂಡಿದ್ದು ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಲು ಕಾರಣವಾಯಿತು.

ಸಾವು – ಬದುಕಿನ ಹೋರಾಟ ನಡೆಸಿದ ಮುಖರ್ಜಿ, ಸೋಮವಾರ ಸಂಜೆ ಸೈನಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಐದು ದಶಕಗಳ ಸುದೀರ್ಘ ರಾಜಕೀಯ ಜೀವನ ನಡೆಸಿದ್ದ ಮುಖರ್ಜಿ, ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಹಲವು ಪ್ರಧಾನಿ ಗಳ ಸಂಪುಟದಲ್ಲಿ ಕಾರ್ಯ ನಿರ್ವಹಿಸಿದ್ದ ಅವರು, 2012ರಲ್ಲಿ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದರು.

ರಾಜಕೀಯಕ್ಕೆ ಬರುವ ಮುಂಚೆ ಶಿಕ್ಷಕ ಹಾಗೂ ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದ ಅವರು, 1969ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಹೆಜ್ಜೆ ಇರಿಸಿದ್ದರು. ನಂತರ ನಾಲ್ಕು ಬಾರಿ ರಾಜ್ಯಸಭೆಗೆ ಪುನರಾಯ್ಕೆಯಾಗಿದ್ದ ಅವರು, 2004ರಲ್ಲಿ ಪಶ್ಚಿಮ ಬಂಗಾಳದ ಜಂಗಿಪುರದಿಂದ ಲೋಕಸಭೆಗೆ ಕಾಲಿರಿಸಿದ್ದರು. 2009ರಲ್ಲಿ ಅವರು ಪುನರಾಯ್ಕೆಯಾಗಿದ್ದರು.

ರಾಜಕೀಯ ತಂತ್ರಗಾರಿಕೆಯಲ್ಲಿ ಪರಿಣಿತರಾಗಿದ್ದ ಮುಖರ್ಜಿ, ಉತ್ತಮ ಸಂಸದೀಯ ಪಟುವಾಗಿದ್ದರು. ತೀಕ್ಷ್ಣಮತಿ ಹಾಗೂ ಅಚ್ಚರಿಗೊಳಿಸುವ ಹಂತದ ಜ್ಞಾಪಕ ಶಕ್ತಿ ಹೊಂದಿದ್ದ ಮುಖರ್ಜಿ, 1972ರಲ್ಲಿ ಇಂದಿರಾ ಗಾಂಧಿ ಸಂಪುಟ ಸೇರಿದ್ದರು. ನಂತರದ ಸುದೀರ್ಘ ರಾಜಕೀಯ ಜೀವನದಲ್ಲಿ ಹಣಕಾಸು, ವಾಣಿಜ್ಯ, ವಿದೇಶಾಂಗ ವ್ಯವಹಾರ ಹಾಗೂ ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. 

ಪ್ರಣಬ್ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರಾದರೂ, ತಮ್ಮ ಬಯಕೆಯ ಪ್ರಧಾನ ಮಂತ್ರಿ ಹುದ್ದೆ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ. 1980ರಲ್ಲಿ ತಾವೇ ಆರ್.ಬಿ.ಐ. ಗವರ್ನರ್ ಆಗಿ ನೇಮಿಸಿದ್ದ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದೂ ವಿಶೇಷ.

ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾಗಿದ್ದರೂ ಸಹ, ಪಕ್ಷಾತೀತವಾಗಿ ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದರು.  2012ರಲ್ಲಿ ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸಲು ಕಾಂಗ್ರೆಸ್ ಅಭ್ಯರ್ಥಿ ಎಂಬುದಕ್ಕಿಂತ, ಪಕ್ಷಾತೀತವಾಗಿ ಅವರು ಹೊಂದಿದ್ದ ಗೌರವವೇ ಕಾರಣವಾಗಿತ್ತು.

ಪ್ರಣಬ್ ಮುಖರ್ಜಿ ಅವರಿಗೆ ಗೌರವ ನಮನ ಸಲ್ಲಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, 2014ರಲ್ಲಿ  ತಾವು ಗುಜರಾತ್‌ನಿಂದ ದೆಹಲಿಗೆ ಮೊದಲ ಬಾರಿಗೆ ಬಂದಾಗ ತಮಗೆ ಪ್ರಣಬ್ ಮಾರ್ಗದರ್ಶನ ಮಾಡಿದ್ದರು ಎಂದಿದ್ದಾರೆ.

ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಉನ್ನತ ವಿದ್ವಾಂಸ ಹಾಗೂ ದಿಗ್ಗಜ ಮುತ್ಸದ್ಧಿಯಾಗಿದ್ದ ಅವರು, ಪಕ್ಷಾತೀತವಾಗಿ ಹಾಗೂ ಸಮಾಜದ ಎಲ್ಲ ವರ್ಗಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮುಖರ್ಜಿ ನಿಧನದೊಂದಿಗೆ ಒಂದು ಯುಗ ಅಂತ್ಯವಾಗಿದೆ ಎಂದಿರುವ ರಾಷ್ಟ್ರಪತಿ ರಾಮ ನಾಥ ಕೋವಿಂದ್, ಋಷಿ ಭಾವದಿಂದ ಅವರು ಭಾರತ ಮಾತೆಯ ಸೇವೆ ಸಲ್ಲಿಸಿದ್ದರು. ದೇಶದ ಅಮೂಲ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡು ದೇಶ ಶೋಕ ತಪ್ತವಾಗಿದೆ ಎಂದಿದ್ದಾರೆ.

error: Content is protected !!