ಕೊರೊನಾ : ನೀವು ತಿಳಿದಿರಲೇಬೇಕಾದ ಕೆಲವು ವಿಷಯಗಳು

ಕೊರೊನಾ ವೈರಸ್‌ನಿಂದ ಬರುವ ಕೋವಿಡ್ ಕಾಯಿಲೆ ಕಳೆದ 6 ತಿಂಗಳುಗಳಿಂದ ನಮ್ಮಲ್ಲಿ  ಬೀಡುಬಿಟ್ಟಿದ್ದು ಲಕ್ಷಾಂತರ ಜನರು ಈ ಸೋಂಕಿನಿಂದ ನರಳಿ ಗುಣಮುಖರಾಗಿದ್ದಾರೆ. ಸಾವಿರಾರು ಜೀವಗಳ್ನೂ ಇದು ಬಲಿ ತೆಗೆದುಕೊಂಡಿದೆ. ಜೊತೆಗೆ ಇಡೀ ದೇಶಕ್ಕೆ ಆರ್ಥಿಕ ಹಿನ್ನಡೆಯೂ ಉಂಟಾಗಿದೆ. ಸದ್ಯಕ್ಕೆ ಇದರ ಉಪಟಳಕ್ಕೆ ಅಂತ್ಯ ಕಾಣಿಸುತ್ತಿಲ್ಲ.

ಕೊರೊನಾ ಎಂದಾಕ್ಷಣ, ಇದು ಕೇವಲ ಸಾಮಾನ್ಯ ಶೀತ ಜ್ವರದ ರೀತಿ, ಹಾಗೇ ಬಂದು ಹೋಗುತ್ತದೆ. ತುಂಬಾ ವಯಸ್ಸಾದವರಿಗೆ ಮಾತ್ರ ತೊಂದರೆ ಕೊಡುತ್ತದೆ ಎಂಬುದು ಕೆಲವರ ಅನಿಸಿಕೆ. ಮತ್ತೆ ಕೆಲವರು ಇದೊಂದು ಡೆಡ್ಲಿ ವೈರಸ್. ಮಾರಣಾಂತಿಕ ಬಂದರೆ ಜೀವನವೇ ಮುಗಿಯಿತು ಎನ್ನುವ ಹೆದರಿಕೆಯಿಂದ ಬದುಕುತ್ತಿದ್ದಾರೆ. ವಾಸ್ತವವಾಗಿ ಇವರು ಎರಡೂ ಅಲ್ಲ. ಕೆಲವರಲ್ಲಿ ಸಾಮಾನ್ಯ ಶೀತ ಜ್ವರದಂತೆ (ಫ್ಲ್ಯೂ) ಬಂದು ಹೋಗಬಹುದು. ಕೆಲವರಲ್ಲಿ ಮಾರಣಾಂತಿಕವೂ ಆಗಬಹುದು. ಗಮನೀಯ ಅಂಶವೇನೇಂದರೆ ಮರಣ ಹೊಂದುವವರು ಕೇವಲ ವಯಸ್ಸಾದವರು ಅಥವಾ ಇತರೆ ಗಂಭೀರ ಕಾಯಿಲೆ ಇರುವವರು ಆಗಲೇಬೇಕಿಲ್ಲ. ಆರೋಗ್ಯವಂತ  ವ್ಯಕ್ತಿಗಳೂ ಮರಣ ಹೊಂದಿರುವ ನಿದರ್ಶನಗಳೂ ಇವೆ. ಆದರೆ ಇವಕ್ಕೆಲ್ಲಾ ಸೂಕ್ತ ಕಾರಣಗಳಿವೆ ಮತ್ತು  ಬಹುತೇಕ ಮರಣಗಳನ್ನು ಸೂಕ್ತ ಮುಂಜಾಗ್ರತೆ ಗಳನ್ನು ತೆಗೆದುಕೊಂಡರೆ ತಪ್ಪಿಸಲೂಬಹುದು. ಈ ವಿಷಯವೇ ಈ ಬರಹದ ಮೂಲ ಉದ್ದೇಶ.

ಸೋಂಕುಂಟಾದ ಸುಮಾರು ಶೇ. 60-70 ಜನರಲ್ಲಿ  ಯಾವುದೇ ಗುಣಲಕ್ಷಣಗಳು ಕಂಡು ಬರುವುದೇ ಇಲ್ಲ. ಇವರು ಸೋಂಕಿತರ ಸಂಪರ್ಕಕ್ಕೆ ಬಂದಿರುವವರು ಎಂಬ ಕಾರಣದಿಂದ ಅಥವಾ ಬೇರೆ ಯಾವುದೋ  ಕಾರಣಕ್ಕೆ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಪತ್ತೆಯಾಗಿರುತ್ತದೆ ಅಷ್ಟೆ. ಇವರಿಗೆ ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲ. ಬೇರೆಯವರಿಗೆ ಹರಡಬಾರದು ಎನ್ನುವ ಕಾರಣಕ್ಕೆ ಇವರು ಐಸೋಲೇಷನ್  ಮಾಡಿಕೊಂಡರೆ  ಸಾಕು.

ಕೋವಿಡ್ ಕಾಯಿಲೆಯು 15 ದಿನಗಳ ಒಂದು ಪಂದ್ಯವಿದ್ದಂತೆ. 15 ದಿನಗಳ ನಂತರ ಗೆಲುವು ಅಥವಾ ಸೋಲು ಬಹುತೇಕ ನಿರ್ಧಾರವಾಗುತ್ತದೆ. ಗುಣಲಕ್ಷಣ ಕಂಡು ಬರುವ ಕೋವಿಡ್ ಕಾಯಿಲೆಯನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಮೊದಲ 5 ದಿನ, ಮಧ್ಯದ 5 ದಿನ, ನಿರ್ಣಾಯಕ 5 ದಿನ.

ಮೊದಲ 5 ದಿನ : (ಆರಂಭಿಕ ಲಕ್ಷಣಗಳು) ಈ ಮೊದಲ 5 ದಿನದ ಪ್ರಮುಖ ಅಂಶ. ಅವೆಂದರೆ ಜ್ವರ, ಗಂಟಲು ನೋವು, ಮೈಕೈ ನೋವು, ಶೀತ. ಕೆಲವರಲ್ಲಿ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಇವುಗಳಲ್ಲಿ ಜ್ವರವನ್ನು ಪ್ರಮುಖ ಆರಂಭಿಕ ಲಕ್ಷಣ ಎಂದು ವೈದ್ಯರು ಪರಿಗಣಿಸುತ್ತಾರೆ.

ಮಧ್ಯದ 5 ದಿನ : ಈಗ ನಮ್ಮ ರೋಗ ನಿರೋಧಕ ಶಕ್ತಿಗಳ ಮಧ್ಯದ ಸಂಘರ್ಷವೇ ಈ 5 ದಿನಗಳ ಹೋರಾಟ. ಬಹುತೇಕ ಜನರಲ್ಲಿ ರೋಗ ನಿರೋಧಕ ಶಕ್ತಿ ವೈರಸ್ ಅನ್ನು ಹಿಮ್ಮೆಟ್ಟಿಸುತ್ತದೆ. ಹೀಗಾಗಿ 10 ದಿನಗಳ ಒಳಗೆ ತಾನೇ ಗುಣ ಹೊಂದುತ್ತಾರೆ. ಇವರಿಗೆ ಯಾವುದೇ ವಿಶೇಷ, ಔಷಧಿಗಳ ಅಗತ್ಯತೆ ಬರುವುದೇ ಇಲ್ಲ. ಜ್ವರ, ಮೈಕೈ ನೋವು, ಗಂಟಲು ನೋವಿಗೆ ಸಂಬಂಧಿ ಔಷಧಿ ಸಾಕು. (Symptomatic Treatment)

5-6ನೇ ದಿನದ ಆಸುಪಾಸಿಗೆ ರೋಗಾಣುಗಳು ಶ್ವಾಸಕೋಶವನ್ನು ಪ್ವರೇಶಿಸಿ ಅಲ್ಲಿ ಸೋಂಕುಂಟು ಮಾಡುವ ಸಂಭವವಿರುತ್ತದೆ. ಹಾಗಾದಾಗ ಶ್ವಾಸ ಕೋಶದ ಸೋಂಕಿನ ತೀವ್ರತೆಗೆ ಅನುಗುಣವಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ ಮತ್ತು ಜ್ವರದ ತೀವ್ರತೆಯೂ ಹೆಚ್ಚಾಗಬಹುದು ಮತ್ತು ಸುಸ್ತು ಹೆಚ್ಚಾಗಬಹುದು. ಈ ಹಂತದಲ್ಲಿ ವೈದ್ಯರ ಪಾತ್ರ ಬಹಳ ಮುಖ್ಯವಾದದ್ದು. ಇಂತಹ ಗುಣಲಕ್ಷಣಗಳು ಕಂಡು ಬಂದಲ್ಲಿ ತಡ ಮಾಡದೇ ವೈದ್ಯರ ಸಲಹೆ ಪಡೆಯಲೇಬೇಕು. ವೈದ್ಯರು ನಿಮ್ಮ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪಲ್ಸ್ ಆಕ್ಸಿಮೇಟರ್ ಎಂಬುದನ್ನು ನಿಮ್ಮ ಬೆರಳಿನ ತುದಿಗೆ ಸಿಕ್ಕಿಸುವ ಉಪಕರಣದ ಸಹಾಯದಿಂದ ಅಳೆಯುತ್ತಾರೆ. ಇದನ್ನು ನೀವು ಮನೆಯಲ್ಲಿಯೂ ನೋಡಿಕೊಳ್ಳಬ ಹುದು. ಅದು 94ರ ಒಳಗಿದ್ದಲ್ಲಿ ನಿಮ್ಮ ಶ್ವಾಸಕೋಶ ಗಳಿಗೆ  ತೊಂದರೆ ಉಂಟಾಗಿದೆ ಎಂದರ್ಥ. ಇದರ ಜೊತೆಗೆ ರಕ್ತದಲ್ಲಿನ ಸೋಂಕಿನ ತೀವ್ರತೆ ಬಿಂಬಿಸುವ ಕೆಲವು ಮಾಪಕಗಳನ್ನು ಪರೀಕ್ಷಿಸಲಾಗುತ್ತದೆ. ಇವು ಗಳಲ್ಲಿ ಮುಕ್ತವಾದವು ಗಳೆಂದರೆ ರಕ್ತದಲ್ಲಿ ಬಿಳಿಯ ರಕ್ತಕಣಗಳ ಸಂಖ್ಯೆ ಮತ್ತು ಲಿಂಪೋಸೈಟ್‌ಗಳ ಪ್ರಮಾಣ, CRP, D-Dimer, Ferritin ಮತ್ತು LDH. ಅಗತ್ಯಬಿದ್ದಲ್ಲಿ ಶ್ವಾಸಕೋಶದ X-Ray ಅಥವಾ CT Scan ಪರೀಕ್ಷೆ ಮಾಡಲಾಗುವುದು. ಇವೆಲ್ಲಾ ಪರೀಕ್ಷೆ ಮತ್ತು ವೈದ್ಯರ ತಪಾಸಣಾ ವರದಿ (Clinical Assessment) ಆಧಾರದ ಮೇಲೆ ಶ್ವಾಸಕೋಶದ ಸೋಂಕಿನ ಪ್ರಮಾಣವನ್ನು ನಿರ್ಧರಿಸಿ ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರು ಕ್ರಮ ತೆಗೆದುಕೊಳ್ಳುತ್ತಾರೆ.

ಸೋಂಕಿನ ಪ್ರಮಾಣ ಕಡಿಮೆ ಇದ್ದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲು ಹೇಳಬಹುದು. ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಮತ್ತು ದೇಹದ ಉಷ್ಣಾಂಶ ಮತ್ತು ಉಸಿರಾಟದ ತೊಂದರೆ ಬಗ್ಗೆ ವೈದ್ಯರಿಗೆ ವರದಿ ನೀಡಬೇಕಾಗುತ್ತದೆ. ಪರಿಸ್ಥಿತಿ ಬಿಗಡಾಯಿಸಿದಲ್ಲಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ.

ಸೋಂಕಿನ ಪ್ರಮಾಣ ತುಸು ಹೆಚ್ಚಿದ್ದು, ಜೊತೆಗೆ ಗಂಭೀರ  ಸ್ವರೂಪದ ತೊಂದರೆಗಳಿದ್ದಲ್ಲಿ ಅಥವಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಹಂತದಲ್ಲಿ ಅಗತ್ಯಕ್ಕೆ ತಕ್ಕಷ್ಟು ಆಮ್ಲಜನಕ, ಆಂಟಿವೈರಲ್ ಚಿಕಿತ್ಸೆ, ಆಂಟಿ ಬಯೋಟಿಕ್ಸ್, ಸ್ಟಿರಾಯಿಡ್ಸ್ ಮತ್ತು ರಕ್ತ ಹೆಪ್ಪುಗಟ್ಟದೇ ಇರಲು ಕೆಲವು ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಇದು ವೈದ್ಯರಿಗೆ ಬಿಟ್ಟ ವಿಷಯ ಮತ್ತು ಅವರಲ್ಲಿ ಪೂರ್ಣ ನಂಬಿಕೆ ಇಟ್ಟು ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇಲ್ಲಿಂದ ಮುಂದೆ ಗುಣಮುಖರಾಗಲು ಅನೇಕ ಅಂಶಗಳು ಗಣನೆಗೆ ಬರುತ್ತವೆ. ನಾವು ಆಸ್ಪತ್ರೆಗೆ  ಬಂದಾಗ ಇದ್ದ ರೋಗ ಪ್ರಮಾಣದ ತೀವ್ರತೆ, ವಯಸ್ಸು, ಸಕ್ಕರೆ ಕಾಯಿಲೆಯ ನಿಯಂತ್ರಣ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ ಮತ್ತು COPD ಕಾಯಿಲೆ, ಮೂತ್ರ ಪಿಂಡಗಳ ಕಾರ್ಯಕ್ಷಮತೆ ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ನಾವು ತಡ ಮಾಡಿ ಹೋದಲ್ಲಿ ಅಥವಾ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಅಪಾಯ ಹೆಚ್ಚು. ಯಾವುದೇ ಹಂತದಲ್ಲಿಯೂ ರೋಗಿಯು ಆತಂಕಕ್ಕೆ ಒಳಗಾ ಗದೇ ವೈದ್ಯರ ಮೇಲೆ ಭರವಸೆ ಇಟ್ಟು ಸಕಾರಾತ್ಮಕ ಭಾವನೆಯಿಂದ ಚಿಕಿತ್ಸೆ ತೆಗೆದುಕೊಂಡರೆ ದಡ ಸೇರುವುದು ಬಹುತೇಕ ಖಚಿತ.

ತೀವ್ರತೆ ಇನ್ನೂ ಹೆಚ್ಚಾದಲ್ಲಿ ಮತ್ತು ಉಸಿರಾಟ ದಲ್ಲಿ, ರಕ್ತದೊತ್ತಡದಲ್ಲಿ ಏರುಪೇರುಗಳಾದಾಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾ ಗುತ್ತದೆ. ಇಲ್ಲಿ ವೈದ್ಯರು, ದಾದಿಯರು ಇತರೆ ಸಿಬ್ಬಂ ದಿಯವರು ಸಮರೋಪಾದಿಯಲ್ಲಿ ಕೆಲಸ ಮಾಡಿ ರೋಗಿಯ ಜೀವ ಉಳಿಸಲು ಪ್ರಯತ್ನಿಸುತ್ತಾರೆ.

ಕೊರೊನಾದಲ್ಲಿ ಸಾವಿನ ಪ್ರಮಾಣ ಕೇವಲ 2%  ಕಡಿಮೆ ಎಂದು ಅಸಡ್ಡೆ ಮಾಡುವಂತಿಲ್ಲ. ಏಕೆಂದರೆ ಆ 2 % ರೋಗಿಗಳಲ್ಲಿ ನಮ್ಮ ಮನೆಯ ವರೇ ಇದ್ದರೆ ಹೇಗಾಗಬಹುದು ಊಹಿಸಿ. ಉಡಾಫೆ ಖಂಡಿತಾ ಬೇಡ. ಹಾಗಂತ ಅತ್ಯಂತ ಹೆದರಿಕೆಯೂ ಬೇಡ. ನಮ್ಮ ಜೊತೆಗೆ ಮೊದಲಿನಿಂದ ಬಂದಿರುವ ಕಾಯಿಲೆಗಳನ್ನು ನಾವು ತಕ್ಷಣ ಬದಲಾಯಿಸಲಾಗುವುದಿಲ್ಲ. ನಾವು ಅಪಾಯದಿಂದ ಪಾರಾಗಲು ಇರುವ ಮಾರ್ಗವೆಂದರೆ ಸೋಂಕುಂಟಾಗಿ ಐದು ದಿನದೊಳಗೆ ನಮಗೆ ಹುಷಾರಾಗಲಿಲ್ಲವೆಂದರೆ, ಜ್ವರ ಏರುತ್ತಲೇ ಇದ್ದರೆ, ಅಥವಾ ಉಸಿರಾಟದ ತೊಂದರೆ ಉಂಟಾದರೆ ತಡ ಮಾಡದೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ತೀರ ತಡಮಾಡಬಾರದು. ಇದರ ಜೊತೆಗೆ ರೋಗ ಬರದಂತೆ ತಡೆಯಲು ಇರುವ ಸಾಮಾನ್ಯ ಮಾರ್ಗ ಸೂಚಿಗಳಾದ ಮಾಸ್ಕ್ ಬಳಕೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಶುದ್ಧಿಮಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಇವುಗಳನ್ನು ಕ್ರಮ ಬದ್ಧವಾಗಿ ಪಾಲಿಸಬೇಕು.

ನಮ್ಮ ಜೀವ ನಮ್ಮ ಜವಾಬ್ದಾರಿ, ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ. ಇದಕ್ಕಾಗಿ ಬೇರೆಯ ವರನ್ನು (ಸರ್ಕಾರ, ವೈದ್ಯ ಸಿಬ್ಬಂದಿ, ಆಸ್ಪತ್ರೆ) ದೂರುವುದರಲ್ಲಿ ಯಾವುದೇ ಅರ್ಥವಿಲ್ಲ.  ಎಲ್ಲರೂ ವಿಶೇಷವಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತಮ್ಮ ಪ್ರಾಣ ಒತ್ತೆ ಇಟ್ಟು ರೋಗಿಗಳ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಕಡಿಮೆ ಪ್ರಕರಣಗಳಿದ್ದಾಗ ಇರುವಷ್ಟೇ ಸಿಬ್ಬಂದಿ ಈಗಲೂ ಅತಿ ಹೆಚ್ಚು ಪ್ರಕರಣಗಳಿದ್ದಾಗಲೂ ಇದ್ದಾರೆ. ಅವರಲ್ಲಿ ಕೆಲವರು ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ನಾವು ವ್ಯವಸ್ಥೆಯಲ್ಲಿ ಹುಳುಕುಗಳನ್ನು ಹುಡುಕಿ ದೊಡ್ಡದು ಮಾಡದೇ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕು. ಎಲ್ಲೋ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಪದೇ ಪದೇ ಬೆಳಿಗ್ಗೆಯಿಂದ ಸಂಜೆ ಅದನ್ನೇ ತೋರಿಸುವ ದೃಶ್ಯ ಮಾಧ್ಯಮಗಳಿಂದ ತುಸು ದೂರವಿರಿ. ಆಸ್ಪತ್ರೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಒತ್ತಡವಿದೆ. ಎಲ್ಲರೊಂದಿಗೆ ಸಹಕರಿಸಿ. ಆಸ್ಪತ್ರೆಯ ಮೂಲಭೂತ ಸೌಲಭ್ಯಗಳಿಗಿಂತ ಮುಖ್ಯವಾದದ್ದು ಚಿಕಿತ್ಸೆ ಮತ್ತು ಜೀವ. ಇದರ ಬಗ್ಗೆ ಗಮನ ಕೊಡಿ. ವೈದ್ಯರೂ ಇಂತಹ ಪರಿಸ್ಥಿತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದಿಲ್ಲ. ಅವರಿಗೂ ಅವರದೇ ಆದ ಜವಾಬ್ದಾರಿಗಳಿವೆ.

ಮರೆಯದಿರಿ ; ಸಕಾಲದಲ್ಲಿ ಆಸ್ಪತ್ರೆಗೆ ಹೋದರೆ ನಾವು ಸುರಕ್ಷಿತರಾಗಿ ಮನೆಗೆ ಮರಳು ವುದು ನಿಶ್ಚಿತ. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮೇಲೆ ವಿಶ್ವಾಸವಿಡಿ. ನಂಬಿಕೆ ಇದ್ದಲ್ಲಿ ಚಿಕಿತ್ಸೆ ಫಲ ಕಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.


ಕೊರೊನಾ : ನೀವು ತಿಳಿದಿರಲೇಬೇಕಾದ ಕೆಲವು ವಿಷಯಗಳು - Janathavaniಡಾ. ಹೆಚ್.ಎಂ. ರವೀಂದ್ರನಾಥ್
ದೃಷ್ಟಿ ಕಣ್ಣಿನ ಆಸ್ಪತ್ರೆ, ದಾವಣಗೆರೆ

error: Content is protected !!