ಮಲೇಬೆನ್ನೂರು, ಆ, 29 – ಯಾವ ರಾಜಕಾರಣಿಗಳೂ ಸಹ ರೈತರು ಮತ್ತು ಅವರ ಮಕ್ಕಳ ಬಗ್ಗೆ ಆಲೋಚನೆ ಮಾಡೋದಿಲ್ಲ, ವ್ಯರ್ಥ ಮಾನವ ದೇಹಗಳಂತೆ ರಾಜ್ಯದ 224 ರಾಜಕಾರಣಿಗಳು ಕಾಣುತ್ತಾರೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ವ್ಯಂಗ್ಯವಾಡಿದರು.
ಅವರು ಬುಧವಾರ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ನೂರಾರು ರೈತ ಕಾರ್ಯಕರ್ತರೊಂದಿಗೆ ಭದ್ರಾ ಜಲಾಶಯಕ್ಕೆ ತೆರಳಿ, ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ನಂತರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರಾಜಕಾರಣಿಗಳ ಕರ್ತವ್ಯ ಲೋಪಕ್ಕೆ ಭದ್ರಾ ನದಿಯಿಂದ ವ್ಯರ್ಥವಾದ ಆರು ಟಿಎಂಸಿ ನೀರು ಸಮುದ್ರದ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ತುಂಗಾ ನದಿಯಿಂದ 15 ಟಿಎಂಸಿ ನೀರು ಭದ್ರಾ ಜಲಾಶಯಕ್ಕೆ ಬರಬೇಕಿದೆ. ಭದ್ರೆಯಲ್ಲಿರುವ ಆರು ಟಿಎಂಸಿ ನೀರು ಸೇರಿ ಒಟ್ಟು 21 ಟಿಎಂಸಿ ನೀರನ್ನು ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಹರಿಸಲು ಸರ್ಕಾರ ಆದೇಶ ಮಾಡಿದೆ.ಆದರೆ ನಮ್ಮ ಪಾಲಿನ 15 ಟಿಎಂಸಿ ನೀರನ್ನು ತುಂಗಾ ಜಲಾಯಶದಿಂದ ತರದೇ ಅಧಿಕಾರಿಗಳು ಕಮೀಷನ್ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಹರಿಹಾಯ್ದರು.
ಇಷ್ಟರಲ್ಲೇ ಮೇಲ್ಕಂಡ ನಾಲ್ಕು ಜಿಲ್ಲೆಗಳ ರೈತ ಮುಖಂಡರೊಂದಿಗೆ ತುಂಗಾ ನದಿ ಸ್ಥಳಕ್ಕೆ ಭೇಟಿ ನೀಡಿ, ಇಂಜಿನಿಯರ್ ಗಳಿಂದ ಮಾಹಿತಿ ಸಂಗ್ರಹಿಸುವುದಕ್ಕಾಗಿ ದಿನಾಂಕ ನಿಗದಿ ಮಾಡಿ ನಂತರ ಸಮಗ್ರ ಹೋರಾಟ ರೂಪಿಸಲಾಗುವುದು ಎಂದರು.
ಈಗಾಗಲೇ ಹಾವೇರಿ, ಗದಗ, ಕೊಪ್ಪಳ ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಲು ಮನವಿ ಮಾಡಿದ್ದೇನೆ. ಒಬ್ಬ ಡಿಸಿ ಮಾತ್ರ ಆಸಕ್ತಿ ತೋರಿಸಿದ್ದಾರೆ ಎಂದು ಗಂಗಾಧರ್ ಹೇಳಿದರು,
ದಾವಣಗೆರೆ ಜಿಲ್ಲೆಯ ರೈತ ಮುಖಂಡ ವಾಸನದ ಓಂಕಾರಪ್ಪ ಮಾತನಾಡಿ, ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸದ ಸರ್ಕಾರಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡಿವೆ ಎಂದು ದೂರಿದ ಅವರು ಮೇಲ್ಭಾಗದ ರೈತರು ನೀರನ್ನು ವ್ಯರ್ಥ ಮಾಡದೇ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಲು ವಿಶಾಲ ಗುಣ ತೋರಬೇಕು ಎಂದರು. ಮಂಜಪ್ಪ ಗೌಡ, ಚಿಕ್ಕಮಗಳೂರು ಲವಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಯಶವಂತರಾವ್ ಘೋರ್ಪಡೆ ಮಾತನಾಡಿದರು.
ದಾವಣಗೆರೆ ಜಿಲ್ಲಾಧ್ಯಕ್ಷ ಕೆ. ಎನ್. ಹಳ್ಳಿ ಪ್ರಭುಗೌಡ, ರೈತ ಮುಖಂಡರಾದ ಪಾಳ್ಯ ಪಾಟೀಲ್, ದೇವರಾಜ್, ಲಕ್ಷ್ಮಣ, ಹನುಮಗೌಡ, ಬಸಪ್ಪ, ಮತ್ತಿತರೆ ನಾಲ್ಕು ಜಿಲ್ಲೆಗಳ ರೈತರು ಭಾಗವಹಿಸಿದ್ದರು.