ದಾವಣಗೆರೆ, ಆ.29- ಅಡುಗೆ ತಯಾರಕರು, ಸಹಾಯಕರು ಹಾಗೂ ಮನೆಗೆಲಸಗಾರರಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ನಿನ್ನೆ ಕರ್ನಾಟಕ ರಾಜ್ಯ ಅಡುಗೆ ಕೆಲಸ ಮಾಡುವವರ ಮತ್ತು ಸಹಾ ಯಕರ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನೆ ನೇತೃತ್ವದಲ್ಲಿ ಅಡುಗೆ ತಯಾರಕರು, ಸಹಾಯಕರು ಹಾಗೂ ಮನೆಗೆಲಸಗಾರರು ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರಿಗೆ, ಕ್ಷೌರಿಕರಿಗೆ ಮತ್ತು ದೋಬಿಗಳಿಗೆ ತಾತ್ಕಾಲಿಕ ಜೀವನ ನಿರ್ವಹಣೆಗಾಗಿ 5 ಸಾವಿರ ನಗದು ಹಣವನ್ನು ನೀಡಿದಂತೆ ನಮಗೂ ಸಹ ಸಹಾಯ ಹಸ್ತ ನೀಡಬೇಕು. ಇಡೀ ರಾಜ್ಯಾದ್ಯಂತ ಇರುವ ಮದುವೆ ಕಲ್ಯಾಣ ಮಂಟಪಗಳಲ್ಲಿ, ಸಮುದಾಯ ಭವನಗಳಲ್ಲಿ ಹಾಗೂ ಮನೆಗಳಲ್ಲಿ ಕೆಲಸ ಮಾಡುವಂತಹ ಈ ವರ್ಗದ ಜನರಿಗೆ ಜಿಲ್ಲಾಡಳಿತದಿಂದ ಕನಿಷ್ಠ ಮೂರು ತಿಂಗಳಿಗೆ ಸಾಕಾಗುವಷ್ಟು ದವಸ-ಧಾನ್ಯದ ಕಿಟ್ ಗಳನ್ನು ನೀಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ನಮ್ಮ ಕುಟುಂಬಗಳನ್ನು ಒಳಗೊಂಡಂತೆ ವಿವಿಧ ಸೌಲತ್ತುಗಳನ್ನು ನೀಡಲು ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಲ್ಯಾಣ ಮಂಡಳಿಯನ್ನು ರಚಿಸಬೇಕು. ನಮ್ಮ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಇಎಸ್ ಐ, ಪಿಎಫ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಹೆಚ್.ಜಿ. ಉಮೇಶ್, ಸಂಸ್ಥಾಪಕ ಅಧ್ಯಕ್ಷ ಬಿ.ಜಿ. ಶಂಕರರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಾದ್ರಿ, ಉಪಾಧ್ಯಕ್ಷ ಕೆ.ಹೆಚ್. ರಂಗನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದಪ್ಪ, ಶಿವಯೋಗಪ್ಪ, ಡಿ. ಮಂಜುನಾಥ, ಟಿ. ರಂಗಯ್ಯ, ಐಗೂರು ಅಂಜನಿ, ಉಮೇಶ್ ನಾಯ್ಕ, ಎಂ.ವೈ. ಸತೀಶ್, ಉಮೇಶ್ ದುಗ್ಗಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.