`ನನ್ನ ಆರೋಗ್ಯ ನನ್ನ ಸಂಪತ್ತು’ – ಜನಸಾಮಾನ್ಯರ ಕೈದೀವಿಗೆ

ಮಾನವನ ಶರೀರ ದೈವ ಸೃಷ್ಠಿಯ ಒಂದು ಅದ್ಭುತ! ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ಆವಿಷ್ಕಾರಗಳಾಗಿದ್ದರೂ ಇನ್ನೂ ನಮ್ಮ ಅರಿವಿಗೆ ಬಾರದ ಅನೇಕ ವೈಚಿತ್ರ್ಯಗಳನ್ನು ಈ ದೇಹ ಒಳಗೊಂಡಿದೆ. ಆರೋಗ್ಯವೇ ಭಾಗ್ಯ – ಸಂಪತ್ತು ಎಂಬ ಅನಿವಾರ್ಯತೆ ಪ್ರತಿಯೊಬ್ಬರಿಗೂ ಇದೆ. ನಮ್ಮ ಶರೀರವನ್ನು ಆರೋಗ್ಯವಾಗಿಡಲು ಬೇಕಾದ ಸರಳ ಸೂತ್ರಗಳನ್ನು ಅನುಸರಿಸುವ ವಿಧಾನಗಳನ್ನು, ಹಿರಿಯ ಪತ್ರಕರ್ತರಾದ – ಜಿಲ್ಲೆ ಸಮಾಚಾರ ಪತ್ರಿಕೆಯ ಸಂಪಾದಕರಾದ ವಿ.ಹನುಮಂತ ಪ್ಪನವರು `ನನ್ನ ಆರೋಗ್ಯ ನನ್ನ ಸಂಪತ್ತು’ ಎಂಬ ಪುಸ್ತಕದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಬರೆದಿದ್ದಾರೆ. 

ಇತ್ತೀಚೆಗೆ ಲೋಕಾರ್ಪಣೆಯಾದ ಈ ಕೃತಿ `ಸಂಜೀವಿನಿ’ ಮಾಸಪತ್ರಿಕೆಯಲ್ಲಿ ಪ್ರಕ ಟಣೆ ಕಂಡು ಅಸಂಖ್ಯಾತ ಓದುಗರ ಮೆಚ್ಚು ಗೆಗೆ ಪಾತ್ರವಾದ ಬಿಡಿ ಲೇಖನಗಳ ಸಂಗ್ರಹ. ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲರೂ ಓದಿ ಅರ್ಥಮಾಡಿಕೊಳ್ಳಬಹುದಾದ, ಅನುಸರಿ ಸಬಹುದಾದ ಸಂಗ್ರಹ ಯೋಗ್ಯ ಪುಸ್ತಕ ಇದಾಗಿದೆ. 

ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿ ಯಾಗಿರುವ ಈ ಕಾಲದಲ್ಲಿ ಹನುಮಂತಪ್ಪ ನವರು ಆರೋಗ್ಯ ಕಾಪಾಡಿಕೊಳ್ಳಬಹುದಾದ ಮುನ್ನೆಚ್ಚರಿಕೆ ಮತ್ತು ಸುಲಭ ಪರಿಹಾರಗಳನ್ನು ತಮ್ಮ 42 ಲೇಖನಗಳಲ್ಲಿ ಮೂಡಿಸಿದ್ದಾರೆ. ಲೇಖನಗಳ ಶೀರ್ಷಿಕೆಗಳು ಸಮಂಜಸ ಮತ್ತು ಆಕರ್ಷಕವಾಗಿರುವುದು ವಿಶೇಷ. ಪ್ರಕೃತಿಯಿಂದ ಪಡೆಯಬಹುದಾದ ನೈಸರ್ಗಿಕ ಭಾಗ್ಯ ಹೇಗೆ ನಮ್ಮ ಶರೀರವನ್ನು ಸುಸ್ಥಿತಿಯಲ್ಲಿಡುತ್ತದೆ ಎಂಬುದನ್ನು ಅವರ `ಜೀವ-ಜೀವ ಸೂರ್ಯ’ ಬಿಸಿಲು ಅಷ್ಟೇ ಅಲ್ಲವೇ? ಮನೆಗಿಂತ ಬಯಲು ಹೇಗೆ ಸುರಕ್ಷಿತ ಎಂಬುದನ್ನು ನಿಮ್ಮ ಮನೆಯಲ್ಲಿ ಆಕ್ಸಿಜನ್ ಇದೆಯೇ? ಎಂದು ಪ್ರಶ್ನಿಸುವುದರ ಮೂಲಕ ಓದುಗರ ಗಮನ ಸೆಳೆದಿದ್ದಾರೆ. 

ನಮ್ಮ ಆಹಾರ ಪದ್ಧತಿಯ ಮೇಲೆ ಬೆಳಕು ಚೆಲ್ಲುವ `ಆಹಾರವೇ ಅಮೃತ’ ಲೇಖ ನದಲ್ಲಿ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಅನೇಕ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಹೆಣ್ಣು ಮಕ್ಕಳ `ಮುಟ್ಟು ಕ್ರಮ ತಪ್ಪಿದರೆ’ `ಹಲ್ಲಿನ ಶುಭ್ರತೆ’, `ಕ್ಯಾನ್ಸರ್ ತಡೆಗಟ್ಟುವ ಆಹಾರ ಕ್ರಮ’ ಇವು ಅಪರೂ ಪದ ಲೇಖನಗಳು. ಫಿಟ್ಸ್ ಬಗ್ಗೆ ಇರುವ ಅಹಿತಕರವಾದ ನಂಬಿಕೆಗಳನ್ನು ದೂರ ಮಾಡಿ, ನೈಜ ಚಿತ್ರಣವನ್ನು ಓದುಗರ ಮುಂ ದಿಟ್ಟು ಆತಂಕ ನಿವಾರಿಸಿದ್ದಾರೆ. ಸೋರಿಯಾ ಸಿಸ್‌ನಿಂದ ಬಳಲುತ್ತಿರುವವರಿಗೆ ಹೆದರ ಬೇಕಿಲ್ಲ ಎಂದು ಧೈರ್ಯ ಮೂಡಿಸಿದ್ದಾರೆ. 

ಆನಂದ ಅನುಭವಿಸುವ ವಿಧಾನ, ಸುಖ ನಿದ್ರೆ ಪಡೆಯುವ ರೀತಿ, ಅನಗತ್ಯ ಕೊಬ್ಬು ನಿವಾರಿಸಿಕೊಳ್ಳುವ ಸುಲಭ ಉಪಾಯ, ಸುಸಂತಾನ ಭಾಗ್ಯ, ತುರ್ತು ಪರಿಸ್ಥಿತಿಯ ನಿರ್ವಹಣೆ ಹೀಗೆ ಶರೀರದ ಅಂಗಗಳ ನಿರ್ವಹಣೆಯ ಜೊತೆಗೆ ಮಾನಸಿಕವಾಗಿ ಹೇಗೆ ಸದೃಢವಾಗಿರಬೇಕು ಎಂಬ ಅಂಶಗ ಳನ್ನು ಚರ್ಚಿಸಿದ್ದಾರೆ. ಒಂಟಿತನ ಇಂದಿನ ಶಾಪ. ಧ್ಯಾನದಿಂದ, ಆತ್ಮ ತೃಪ್ತಿಯಿಂದ, ಸಾಮಾಜಿಕ ಸೇವೆ ಮತ್ತು ಧನಾತ್ಮಕ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ.

ಆಸ್ಪತ್ರೆಗಳು ಸುರಕ್ಷಿತ ತಾಣವೆಂಬುದು ಜನಸಾಮಾನ್ಯರ ನಂಬಿಕೆ. ಆದರೆ, ಅಲ್ಲಿರ ಬಹುದಾದ ಸಂಚಿತ ಇನ್‌ಫೆಕ್ಷನ್‌ಗಳ ಹೊಸ ಅವತಾರಗಳನ್ನು ಅನಾವರಣಗೊಳಿಸಿ, ಎಚ್ಚ ರಿಕೆಯ ಗಂಟೆ ಮೊಳಗಿಸಿದ್ದಾರೆ ತಮ್ಮ ಲೇಖನ `ಇನ್‌ಫೆಕ್ಷನ್‌ಗಳ ಹೊಸ ಅವತಾರ’ದಲ್ಲಿ!

`ಡಿಸೈನರ್ ಬೇಬಿಗಳ ಕಾಲ’, `ಹಾಲು ಹಾಲಾಹಲ’, `ಮಗುವಿನ ಕಾಮಧೇನು’, `ಡಿಜಿಟಲ್ ಅಡಿಕ್ಷನ್’ ಇವು ತಾಯಂದಿರಿಗೆ ಮಾರ್ಗದರ್ಶಿ ಲೇಖನಗಳು. ಒಂದೊಂದು ಲೇಖನವೂ ಅಮೂಲ್ಯ. ಹತ್ತಾರು ವೈದ್ಯಕೀಯ ಪುಸ್ತಕಗಳಿಂದ ಪಡೆಯಬಹುದಾದ ಮಾಹಿತಿಯನ್ನು ಲೇಖಕ ಹನುಮಂತಪ್ಪನವರು ತಮ್ಮ `ನನ್ನ ಆರೋಗ್ಯ ನನ್ನ ಸಂಪತ್ತು’ ಪುಸ್ತಕದ 231 ಪುಟಗಳಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ವೈದ್ಯಕೀಯ ಪಾರಿಭಾಷಿಕ ಶಬ್ಧಗಳು, ಅವುಗಳ ವಿವರಣೆ ಅವರ ಅಧ್ಯಯನ ಶೀಲತೆಯನ್ನು ಎತ್ತಿ ಹಿಡಿದಿದೆ. ವೈದ್ಯರೂ ಅಚ್ಚರಿಗೊಳ್ಳುವಂತಿದೆ.

ಅಲೋಪತಿಯನ್ನು ಮೆಚ್ಚುತ್ತಾ ಆಯು ರ್ವೇದ ಪದ್ಧತಿಯನ್ನೂ ಪುರಸ್ಕರಿಸುತ್ತಾ ಸರಳ ವ್ಯಾಯಾಮಕ್ಕೂ ಒತ್ತು ಕೊಡುವ ಈ ಹೊತ್ತಿಗೆ ಮಧುಮೇಹ, ವಿವಿಧ ಬಾವುಗಳು, ಮೂತ್ರಯಾತನೆಯಂತಹ ಕಾಡುವ ರೋಗಗಳ ಬಗ್ಗೆ – ಅದರ ನಿರ್ವಹಣೆ ಬಗ್ಗೆ ಮಾರ್ಗೋಪಾಯಗಳನ್ನು ಸೂಚಿಸಿದೆ. ದೀರ್ಘ ಆದರೆ, ಆರೋಗ್ಯಕರವಾದ ಆಯಸ್ಸು ಪಡೆಯುವ ವಿಧಾನದ ಜೊತೆಗೆ ಮೂಳೆಗಳ ರಕ್ಷಣೆಯೂ ಎಷ್ಟು ಮುಖ್ಯ ಎಂಬುದನ್ನು ಬರೆದಿದ್ದಾರೆ. ಸ್ಪಷ್ಟವಾದ ಗುರಿ ಸಾಧನೆಯಿಂದ ಜಪಾನೀಯರು ಹೇಗೆ ದೀರ್ಘಾಯುಗಳಾಗಿದ್ದಾರೆಂಬುದರ ಗುಟ್ಟು ಅರಿಯಬೇಕಾದರೆ ಈ ಪುಸ್ತಕ ಓದಲೇಬೇಕು.

ಹೆಲ್ತ್ ಗ್ಯಾಜೆಟ್ಸ್‌ ಉಪಯೋಗ ಮತ್ತು ಲಭ್ಯತೆಯನ್ನೂ ಸಚಿತ್ರವಾಗಿ ನಮೂದಿಸಿದ್ದಾರೆ. `ಡಿಜಿಟಲ್ ಹೆಲ್ತ್ ಬ್ಲೂ ಪ್ರಿಂಟ್’ ಯೋಜನೆಯ ಉಪಯುಕ್ತತೆ, ಬದಲಾಗುತ್ತಿರುವ ಪರೀಕ್ಷಾ ಮತ್ತು ಚಿಕಿತ್ಸಾ ವಿಧಾನಗಳು ನ್ಯಾನೋ ಔಷಧಗಳು, ಆನ್‌ಲೈನ್ ವೈದ್ಯ ಸೌಲಭ್ಯ ನಮಗೆ ಹೇಗೆ ಹಣ ಮತ್ತು ಸಮಯವನ್ನು ಉಳಿಸಿ, ಆರೋಗ್ಯ ಕಾಪಾಡುತ್ತದೆ ಎಂಬುದನ್ನು ತಿಳಿಯಲು ಈ ಪುಸ್ತಕ ಸಹಕಾರಿಯಾಗಿದೆ.

ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ಪುಸ್ತಕವನ್ನು ಓದಿದರೆ, ನಮ್ಮಲ್ಲಿರುವ ಅನೇಕ ತಪ್ಪು ಕಲ್ಪನೆ, ಭಯ, ಸಮಸ್ಯೆಗಳು ನಿವಾರಣೆಯಾಗುವುದಂತೂ ಖಂಡಿತ. ಸ್ವತಃ ವೈದ್ಯರಾಗಿರುವ ಡಾ|| ಶಶಿಕಲಾ ಕೃಷ್ಣಮೂರ್ತಿಯವರು ಈ ಪುಸ್ತಕವನ್ನು ವೈದ್ಯಕೀಯ ಸಾಹಿತ್ಯ ಕೃತಿಯ ಗುಂಪಿಗೆ ಸೇರಿಸಿ, ತಮ್ಮ ಮುನ್ನುಡಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಂದರ ಅಷ್ಟೇ ಅರ್ಥಪೂರ್ಣವಾದ ರಕ್ಷಾಕವಚ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಾ. ಈಶ್ವರ ಶರ್ಮಾ ಅವರು ಬೆನ್ನುಡಿಯಲ್ಲಿ `ನನ್ನ ಆರೋಗ್ಯ ನನ್ನ ಸಂಪತ್ತು’ ವೈದ್ಯ ಲೇಖನಗಳ ಮಾಲಿಕೆಯು `ಆರೋಗ್ಯ ಕ್ಷೇತ್ರದ ದಾಖಲೆ’ ಎಂದು ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸತ್ಯ ಕೂಡ.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ.ಹಲಸೆ ಮತ್ತು ಸಂಜೀವಿನಿ ನರ್ಸಿಂಗ್‌ ಹೋಂನ ಡಾ|| ಜಿ.ಮಂಜುನಾಥಗೌಡರಿಗೆ ಅರ್ಪಿಸಿರುವ ಈ ಅಪರೂ ಪದ ಪುಸ್ತಕದ ಬೆಲೆ 250 ರೂ. ಗಳು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತ ವಿ. ಹನುಮಂತಪ್ಪನವರ ಈ ಪ್ರಯತ್ನ ಅನನ್ಯ ಮತ್ತು ಶ್ಲಾಘನೀಯ. ಮನೆ-ಮನೆಗಳಲ್ಲಿ ಇರಬೇಕಾದ ಮಾರ್ಗದರ್ಶಿ ಸಂಗ್ರಹ ಯೋಗ್ಯ ಪುಸ್ತಕ ಇದಾಗಿದೆ.


`ನನ್ನ ಆರೋಗ್ಯ ನನ್ನ ಸಂಪತ್ತು' - ಜನಸಾಮಾನ್ಯರ ಕೈದೀವಿಗೆ - Janathavaniಜಸ್ಟಿನ್ ಡಿ’ಸೌಜ
ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ದಾವಣಗೆರೆ

error: Content is protected !!