ವಾಲ್ಮೀಕಿ ಭವನ ಕಾಮಗಾರಿ ಪರಿಶೀಲನೆ

ಎರಡನೇ ವಾಲ್ಮೀಕಿ ಭವನಕ್ಕೂ ಅನುದಾನ ಶಾಸಕ ಎಸ್.ವಿ.ರಾಮಚಂದ್ರ ಭರವಸೆ

ದಾವಣಗೆರೆ, ಆ.30- ನಗರದ ಬಿ.ಟಿ. ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ವೀಕ್ಷಿಸಿದರು.

4.90 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಯಿಂದ ನಿರ್ಮಾಣವಾಗುತ್ತಿರುವ ಈ ಭವನದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ-ಸೂಚನೆಗಳನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಸುಸಜ್ಜಿತ ವಾದ ಎರಡನೇ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೂ ಸಹ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು. ಸಮಾಜದ ಮುಖಂಡರು ನಗರದ ಪಿ.ಬಿ. ರಸ್ತೆಯ ಬಳಿ ಜಾಗ ಹುಡುಕಿ ದೂಡಾಗೆ ಮನವಿ ಮಾಡಿದರೆ ನಾನೂ ಸಹ ನಿವೇಶನ ನೀಡುವ ಸಂಬಂಧ ಅಧ್ಯಕ್ಷರ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. 15 ರಿಂದ 20 ಕೋಟಿ ವೆಚ್ಚದಲ್ಲಿ ಎರಡನೇ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿ ಸಮಾಜಕ್ಕೆ ಆಸ್ತಿಯನ್ನಾಗಿಸಿದರೆ ಇದರಿಂದ ಬರುವ ಆದಾಯವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಬಹುದು ಎಂದು ತಿಳಿಸಿದರು.

ಈಗಾಗಲೇ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನದಲ್ಲಿ 300 ಜನರು ಕುಳಿತುಕೊಂಡು ಊಟ ಮಾಡುವಂತಹ ಡೈನಿಂಗ್ ಹಾಲ್, ಸಾರ್ವಜನಿಕರು ಕುಳಿತುಕೊಳ್ಳಲು 700 ಚೇರ್‌ಗಳು, 13 ಕೊಠಡಿಗಳು ಸೇರಿದಂತೆ ಹೆಚ್ಚುವರಿ ಕಾಮಗಾರಿಗಾಗಿ 3.5 ಕೋಟಿ ಅವಶ್ಯವಿದೆ ಎಂದು ಎಇಇ ಪುಟ್ಟಸ್ವಾಮಿ ಅವರು ರಾಮಚಂದ್ರ ಅವರ ಗಮನಕ್ಕೆ ತಂದರು.

ಆಗ ರಾಮಚಂದ್ರ ಅವರು, ಶೀಘ್ರವೇ 3.5 ಕೋಟಿ ಹಣ ಮಂಜೂರು ಮಾಡಲಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ಮದುವೆ ಸಮಾರಂಭಗಳಲ್ಲದೆ ಸಮಾವೇಶಗಳಿಗೂ ಅನುಕೂಲವಾಗಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಓಬಳಪ್ಪ ಮಾತನಾಡಿ, ರಾಜ್ಯದಲ್ಲೇ ಮಾದರಿಯಾದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಕೊಡಿಸಬೇಕು. ಭವನದಲ್ಲಿ ಅಳವಡಿಸಿರುವ ಶೀಟ್ ಅನ್ನು ತೆಗೆದು ಕಾಂಕ್ರೀಟ್ ಅಳವಡಿಸಬೇಕು. ಹಾಲಿ ಕಟ್ಟಡಕ್ಕೆ ಹೊಸ ಯೋಜನೆ ರೂಪಿಸಬೇಕು ಎಂದು ರಾಮಚಂದ್ರ ಅವರಿಗೆ ಹೇಳಿದರು.

ರೈತ ಮುಖಂಡ ಮಲ್ಲಾಪುರ ದೇವರಾಜು ಮಾತನಾಡಿ, 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಭವನ ಮಾದರಿಯಾಗಬೇಕು. ನಮ್ಮದೇ ಪಾರಂಪರಿಕ ಮತ್ತು ಆಕರ್ಷಕ ಶೈಲಿಯಲ್ಲಿರಬೇಕೆಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ತಾಲ್ಲೂಕು ಅಧ್ಯಕ್ಷ ಹದಡಿ ಹಾಲಪ್ಪ, ನಾಯಕರ ಹಾಸ್ಟೆಲ್ ನಿರ್ದೇಶಕ ಆಂಜನೇಯ ಗುರೂಜಿ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

error: Content is protected !!