ಸೆ.19ಕ್ಕೆ ಮೆಗಾ ಇ-ಲೋಕ ಅದಾಲತ್ ಕಾರ್ಯಾರಂಭ

ಹೈ ಕೋರ್ಟ್ ನ್ಯಾಯಾಮೂರ್ತಿ ಅರವಿಂದ ಕುಮಾರ್ 

ದಾವಣಗೆರೆ, ಆ.28- ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥದ ಉದ್ದೇಶದಿಂದ ದೇಶದಲ್ಲಿ ಪ್ರಪ್ರಥಮವಾಗಿ ಸೆ.19ರಂದು ಮೆಗಾ ಇ-ಲೋಕ ಅದಾಲತ್ ಕಾರ್ಯ ಪ್ರಾರಂಭ ಮಾಡಲಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ತಿಳಿಸಿದರು.

ಅವರು, ಇಂದು ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸರ್ವರಿಗೂ ನ್ಯಾಯ ಒದಗಿಸುವುದೇ ಮೆಗಾ ಇ-ಲೋಕ ಅದಾಲತ್ ಉದ್ದೇಶ. ಜಾತಿ, ಧರ್ಮ, ಆರ್ಥಿಕ ಸ್ಥಿತಿ ಹಾಗೂ ಯಾವುದೇ ಮತ-ಪಂಥ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡುವುದಾಗಿದೆ. ಈ ಅದಾಲತ್ ಮುಖಾಂತರ ಕಕ್ಷಿದಾರರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಲು ಸೆ.18ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆ.19ರಂದು ಅದಾಲತ್ ಪ್ರಾರಂಭವಾಗುವುದು ಎಂದು ಹೇಳಿದರು.

ಎರಡು ಪಕ್ಷಗಳ ಕಕ್ಷಿಗಾರರು ಹಾಗೂ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಈ ಅದಾಲತ್‍ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಶವಾಗಿ ಚರ್ಚಿಸಿ ರಾಜೀ ಮಾಡುವ ಮುಖಾಂತರ ಪಕ್ಷಗಾರರಿಗೆ ಶೀಘ್ರ ಹಾಗೂ ಪಾರದರ್ಶಕ ನ್ಯಾಯದಾನವನ್ನು ಮೆಗಾ ಇ-ಲೋಕ ಅದಾಲತ್ ಮುಖಾಂತರ ನೀಡಲಾಗುವುದು ಎಂದರು.

ಮೆಗಾ ಇ-ಲೋಕ ಅದಾಲತ್‍ನಲ್ಲಿ ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕುಟುಂಬ ವಿವಾದಗಳು ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು, ರಾಜಿ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ವಿಡಿಯೋ ಕಾನ್ಪ್‍ರೆನ್ಸ್ ಮೂಲಕ ಪಕ್ಷಗಾರರನ್ನು ಸಂಪರ್ಕಿಸಿ ಹಾಗೂ ಕರೆಸಿ ಅವರು ರಾಜೀಯಾಗುವಂತಿದ್ದರೆ ಅವರ ಮಧ್ಯೆ ಮಾತನಾಡಿ ರಾಜೀ ಸಂಧಾನದಿಂದ ತೀರ್ಪು ಪ್ರಕಟಿಸಬಹುದಾಗಿದೆ. ಪಕ್ಷಗಾರರು ನಿರ್ಭೀತಿಯಿಂದ ತಾವು ರಾಜೀ ಮಾಡಿಕೊಳ್ಳುವ ಎಲ್ಲ ಪ್ರಕರಣಗಳನ್ನು ಅವರು ಸ್ವತಃ ನ್ಯಾಯಾಲಯಕ್ಕೆ ಅಥವಾ ವಕೀಲರ ಮೂಲಕ ಹಾಜರಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಮೆಗಾ ಇ-ಲೋಕ ಅದಾಲತ್ ಮಾಡಲಾಗಿದೆ ಎಂದರು.

ಕಾನ್ಫರೆನ್ಸ್ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಮಾತನಾಡಿ, ಈಗಾಗಲೇ ಅತೀ ಹೆಚ್ಚು ಪ್ರಕರಣಗಳ ಬಾಕಿ ಇವೆ. ಅವಶ್ಯಕತೆ ಇರುವ ಪ್ರಕರಣಗಳನ್ನು ನಾವು (ನ್ಯಾಯಾಧೀಶರು) ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತದೆ. ಅಲ್ಲದೇ ಕಕ್ಷಿದಾರರಿಗೂ ಸಹ ಪಕ್ಷಗಾರರು ಇಬ್ಬರು ರಾಜೀ ಸಂಧಾನದ ಮೂಲಕ ತೀರ್ಮಾನ ಮಾಡಿಕೊಂಡಾಗ ಪರಸ್ಪರ ವೈಮನಸ್ಸು ಕಡಿಮೆಯಾಗುತ್ತದೆ. ಈ ಎಲ್ಲಾ ಮೂಲ ಉದ್ದೇಶದಿಂದ 2 ತಿಂಗಳಿಗೊಮ್ಮೆ ಲೋಕ ಅದಾಲತ್ ಮಾಡುತ್ತಿದ್ದೆವು. ಕೋವಿಡ್‍ನಿಂದ 5 ತಿಂಗಳಿಂದ ಜನತಾ ನ್ಯಾಯಾಲಯದಿಂದ ಯಾವುದೇ ಕಾರ್ಯ ಕಲಾಪಗಳು ನಡೆಯದೇ ಸ್ಥಗಿತಗೊಂಡಿದ್ದವು. ಆದ್ದರಿಂದ ಪಕ್ಷಗಾರರಿಗೆ ಅನುಕೂಲದ ಉದ್ದೇಶದಿಂದ ಮೆಗಾ ಇ-ಲೋಕ ಅದಾಲತ್ ಮಾಡುತ್ತಿದ್ದೇವೆಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಶ್ರೀಧರ್ ಇದ್ದರು.

error: Content is protected !!