ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಪ್ರತಿಭಟನೆ
ದಾವಣಗೆರೆ, ಆ.27- ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಖಂಡಿಸಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೇತೃತ್ವ ದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರು, ಕಾರ್ಯಕ ರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಕೈಗಾರಿಕಾ ಹಾಗೂ ಕಾರ್ಖಾನೆಗಳ ಕಾಯ್ದೆ ಮತ್ತು ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಅವರಿಗೆ ಮನವಿ ಪತ್ರ ನೀಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಬೇಡಿಕೆಯನ್ನಿಟ್ಟರು.
ಪ್ರಗತಿಪರ ಮತ್ತು ರೈತರ ಪರ ಕಾಯ್ದೆ ಎಂದು ದೇಶಾದ್ಯಂತ ಹೆಗ್ಗಳಿಕೆಗೆ ಒಳಗಾಗಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ಸೆಕ್ಷನ್ 63ರ ತಿದ್ದುಪಡಿ ಮತ್ತು ಕಾಯ್ದೆಯ ಹೃದಯ ಭಾಗವಾಗಿರುವ ಸೆಕ್ಷನ್ 79-ಎ, 79-ಬಿ ಮತ್ತು 79-ಸಿ ಮತ್ತು ಸೆಕ್ಷನ್ 80 ಗಳನ್ನು ಪೂರ್ವಾನ್ವಯವಾಗುವಂತೆ ರದ್ದು ಮಾಡಲು ಹಾಗೂ ಸೆಕ್ಷನ್ 63 ಮತ್ತು 109 ರಲ್ಲಿನ ಸೆಕ್ಷನ್‍ಗಳಿಗೆ ವಿಧಿಸಿರುವ ಮೇಲಿನ ನಿರ್ಬಂಧನೆಗಳನ್ನು ಕಿತ್ತು ಹಾಕಿ ಕೃಷಿಕರಲ್ಲದವರು ರೈತರಿಂದ ಕೃಷಿ ಭೂಮಿಯನ್ನು ಖರೀದಿಸಲು ಅನುವು ಮಾಡಿಕೊಟ್ಟು ರೈತಾಪಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮಾಡಿರುವುದು ಕುತಂತ್ರವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಈ ಕೂಡಲೇ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಮಾಜಿ ಶಾಸಕರೂ ಆದ ಜೆಡಿಎಸ್ ಮುಖಂಡ ಹೆಚ್.ಎಸ್. ಶಿವಶಂಕರ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್, ಅಂಜಿನಪ್ಪ ಕಡತಿ, ಶೀಲಾ ಕುಮಾರ್, ಜೆ. ಅಮಾನುಲ್ಲಾ ಖಾನ್, ಟಿ. ಅಸ್ಗರ್, ಮನ್ಸೂರ್ ಅಲಿ, ಖಾದರ್ ಬಾಷಾ, ಜಗಳೂರು ಗುರುಸಿದ್ದಪ್ಪ, ಶ್ರೀನಿವಾಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.