ದಾವಣಗೆರೆ, ಆ.26- ನಗರದ ಪಟ್ಟಣ ಸಹಕಾರ ಬ್ಯಾಂಕ್ಗಳಲ್ಲೊಂದಾದ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲಾಗಿದೆ.
ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕಿನ ಆಡಳಿತ ಮಂಡಲಿ ಅಧ್ಯಕ್ಷ ಎಂ.ಜಯಕುಮಾರ್ ಅವರು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಕುಮಾರ್, ನಗರದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಅಳವಡಿಸಿಕೊಂಡಿರುವ ಪ್ರಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಪಾತ್ರವಾಗಿದೆ. ಗ್ರಾಹಕರಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಬಗೆಯ ಆಧುನಿಕ ಸೇವೆಗಳನ್ನು ಒದಗಿಸುವಂತಿದ್ದು, ಇದರೊಂದಿಗೆ ಲಾಕರ್, ಎಟಿಎಂ, ಎನ್ಇಎಫ್ಟಿ, ಆರ್ಟಿಜಿಎಸ್, ಐಎಂಪಿಎಸ್ ಸೌಲಭ್ಯಗಳನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ಬ್ಯಾಂಕಿನ ಉಪಾಧ್ಯಕ್ಷ ಎಸ್.ಓಂಕಾರಪ್ಪ ಮಾತನಾಡಿ, ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆ ಕೊಡುವ ಮೂಲ ಉದ್ದೇಶದಿಂದ ಬ್ಯಾಂಕು ಆಧುನಿಕ ತಂತ್ರಜ್ಞಾನ ಅಳವಡಿಸಿ, ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.
ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ಹೆಚ್.ವಿ.ಮಂಜುನಾಥ ಸ್ವಾಮಿ ಮಾತನಾಡಿ, ಗ್ರಾಹಕರು 24×7 ನಲ್ಲಿಯೂ ಸಹ ಸೇವೆ ಪಡೆಯಬಹುದು ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀಮತಿ ಜ್ಯೋತಿ ಆರ್.ಜಂಬಿಗಿ, ಕೆ.ಆರ್.ಪರಮೇಶ್ವರಪ್ಪ, ಎಂ.ಎಸ್.ಶಿವಯೋಗಿ, ಕೆ.ಜಿ.ಚನ್ನಬಸಪ್ಪ, ಕೆ.ಎಸ್.ಸತೀಶ್, ಕಣಕುಪ್ಪಿ ಮುರುಗೇಶಪ್ಪ ಉಪಸ್ಥಿತರಿದ್ದರು. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ಸಿಬ್ಬಂದಿ ಎಂ.ಎಸ್.ಅರುಣ್ ನಡೆಸಿಕೊಟ್ಟರು.
ಬ್ಯಾಂಕಿನ ವ್ಯವಸ್ಥಾಪಕ ಎಸ್.ಪಿ.ವೀರಭದ್ರಪ್ಪ ಸ್ವಾಗತಿಸಿ, ವಂದಿಸಿದರು.