ದಾವಣಗೆರೆ,ಆ.25- ಖಾಸಗಿ ಶಾಲೆಗಳು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತಂತೆ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ದೀಪಾ ಅವರನ್ನು ಇಂದು ಭೇಟಿ ಮಾಡಿದ ಒಕ್ಕೂಟದ ನಿಯೋಗವು, ಪ್ರಸಕ್ತ ಕೋವಿಡ್ 19 ಸಂದರ್ಭದಲ್ಲಿ ಸರ್ಕಾರವು `ವಿದ್ಯಾಗಮ’ ಯೋಜನೆಯನ್ನು ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಅಳವಡಿಸಿದ್ದು, ಖಾಸಗಿ ಸಂಸ್ಥೆಗಳ ಶಾಲೆಗಳಿಗೆ ಯೋಜನೆಯನ್ನು ಕೊಡದೇ ತಾರತಮ್ಯ ಧೋರಣೆ ಅನುಸರಿಸುತ್ತಿರುವ ಕ್ರಮವನ್ನು ಪ್ರಶ್ನಿಸಿತು.
2019-20ನೇ ಸಾಲಿನ ಆರ್.ಟಿ.ಇ. ಮರುಪಾವತಿ ಜಿಲ್ಲೆಯ ಕೆಲವು ಶಾಲೆಗಳಿಗೆ ಸಂದಾಯವಾಗಿಲ್ಲ. ಖಾಸಗಿ ಶಾಲೆಗಳು ಆನ್ ಲೈನ್ ಶಿಕ್ಷಣವನ್ನು ಕೊಡುತ್ತಿದ್ದು, ತಮ್ಮ ಒಕ್ಕೂಟದ ವತಿಯಿಂದ ಸದಸ್ಯ ಶಾಲೆಗಳು ಯಾವುದೇ ಕಾರಣಕ್ಕೂ ಆರ್.ಟಿ.ಇ. ವಿದ್ಯಾರ್ಥಿಗಳಿಂದ ಆನ್ ಲೈನ್ ಶಿಕ್ಷಣಕ್ಕೆ ಹಣ ಪಡೆಯಬಾರದು ಎಂದು ಸೂಚಿಸಲಾಗಿದೆ ಎಂದು ನಿಯೋಗವು ಜಿ.ಪಂ. ಅಧ್ಯಕ್ಷರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದೆ.
ಈ ವಿಷಯಗಳ ಕುರಿತಂತೆ ತಮ್ಮ ಮನವಿ ಯನ್ನು ಪುರಸ್ಕರಿಸುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಒಕ್ಕೂಟದ ಅಧ್ಯಕ್ಷ ಟಿ.ಎಂ. ಉಮಾಪತಯ್ಯ, ಕಾರ್ಯಾಧ್ಯಕ್ಷ ಲಿಂಗರಾಜ್ ಆನೆಕೊಂಡ, ಪ್ರಧಾನ ಕಾರ್ಯದರ್ಶಿ ಸಿ. ಶ್ರೀರಾಮಮೂರ್ತಿ, ಸಹ ಕಾರ್ಯದರ್ಶಿ ಪ್ರಸನ್ನ ಅತ್ತಿಗೆರೆ, ಖಜಾಂಚಿ ವಿಜಯರಾಜ್, ನಿರ್ದೇಶಕರುಗಳಾದ ಶ್ರೀಮತಿ ಸಹನಾ ರವಿ, ಜೆ.ಜೆ. ಮೈನುದ್ದೀನ್, ವಿಜಯಕುಮಾರ್ ಮತ್ತಿತರರು ಜಿ.ಪಂ. ಅಧ್ಯಕ್ಷೆ ದೀಪಾ ಅವರನ್ನು ಕೇಳಿಕೊಂಡಿದ್ದಾರೆ.