ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಕಮ್ಯುನಿಸ್ಟ್ ಆಗ್ರಹ

ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಕಮ್ಯುನಿಸ್ಟ್ ಆಗ್ರಹ - Janathavani

ದಾವಣಗೆರೆ, ಆ.25- ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎರಡು ಕಡೆಯ ಸ್ಮಶಾನಗಳಲ್ಲಿ ಮೃತದೇಹಗಳ ದಹನಕ್ಕೆ ವಿದ್ಯುತ್ ಚಿತಾಗಾರವನ್ನು ನಿರ್ಮಿಸುವುದು ಸೇರಿದಂತೆ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ‌‌ ನಗರದ   ಸಾರ್ವಜನಿಕರ ಪರವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನಗರ ಪಾಲಿಕೆಗೆ‌ ಆಗಮಿಸಿದ ಸಂಘಟನೆಯ ಮುಖಂಡರು, ಕಾರ್ಯಕರ್ತರು  ಚಳವಳಿ ನಡೆಸಿದರು. ನಂತರ  ಮೃತದೇಹವನ್ನು ಸಾಗಿಸಲು ಉಚಿತವಾಗಿ ವಾಹನ ಸೌಕರ್ಯದ ವ್ಯವಸ್ಥೆ ಹಾಗೂ ಮೃತದೇಹವನ್ನು ಹೂಳಲು ಸ್ಮಶಾನದಲ್ಲಿ 1985ರಲ್ಲಿ ನಗರಸಭೆಯಿಂದ ಉಚಿತವಾಗಿ ಗುಂಡಿ ತೋಡಿಕೊಡುತ್ತಿದ್ದು, ಇನ್ನು ಮುಂದೆಯೂ ನಗರಪಾಲಿಕೆಯಿಂದ ಉಚಿತವಾಗಿ ಗುಂಡಿ ತೋಡಿಸಿಕೊಡಬೇಕೆಂದು ಆಗ್ರಹಿಸಿ ಮೇಯರ್ ಅಜಯ್ ಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರುಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಯಿತು.

ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿರುವ ನಿವಾಸಿಗಳಲ್ಲಿ‌ ಯಾರಾದರೂ ಮೃತರಾದರೆ ಮೃತ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ದಹನ ಮಾಡಬೇಕೆಂದರೆ ಮುಂದುವರೆದ ಈ ಕಾಲದಲ್ಲಿಯೂ ಕಟ್ಟಿಗೆಯನ್ನು ಜೋಡಿಸಿ ಶವ ಸಂಸ್ಕಾರಕ್ಕೆ ಬಂದಿರುವ ಸಂಬಂಧಿಕರು, ಸ್ನೇಹಿತರು ಮತ್ತಿತರೆಯವರ ಎದುರಿನಲ್ಲಿಯೇ ಮೃತದೇಹಕ್ಕೆ ಬೆಂಕಿಯಿಟ್ಟು ಸುಡುವುದನ್ನು ನೋಡಲು ತುಂಬಾ ಬೇಸರವೆನಿಸುತ್ತದೆ. ಅಲ್ಲದೇ, ಪರಿಸರ ಮಾಲಿನ್ಯಕ್ಕೆ ಹಾನಿಯೂ ಕೂಡ. 

ಈ ಹಿನ್ನೆಲೆಯಲ್ಲಿ ನಗರವು ಸ್ಮಾರ್ಟ್ ಸಿಟಿಯಾಗಿದ್ದು, ಬೂದಾಳ್ ರಸ್ತೆಯಲ್ಲಿರುವ ಪಾಲಿಕೆಯ ಸ್ಮಶಾನ ಹಾಗೂ ಎಸ್ಓಜಿ ಕಾಲೋನಿ ಎಸ್.ಎಸ್. ಆಸ್ಪತ್ರೆ ಬಳಿಯ ಪಾಲಿಕೆ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರಗಳನ್ನು ನಿರ್ಮಿಸಿ, ಉಚಿತವಾಗಿ ಮೃತರ ಅಂತ್ಯಕ್ರಿಯೆ ದಹನಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಲಾಯಿತು.

ನಗರ ಪಾಲಿಕೆಯ ವ್ಯಾಪ್ತಿಯು ತುಂಬಾ ವಿಸ್ತಾರವಾಗಿದ್ದು, ದೂರದ ಸ್ಥಳದಿಂದ ಸಂಬಂಧಿಸಿರುವ ಸ್ಮಶಾನಕ್ಕೆ ಮೃತದೇಹಗಳನ್ನು ಸಾಗಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೃತ ದೇಹವನ್ನು ಸಂಬಂಧಿಸಿದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಪಾಲಿಕೆಯಿಂದ ಕನಿಷ್ಠ ನಾಲ್ಕು ಶವ ಸಾಗಿಸುವ ಆಂಬ್ಯುಲೆನ್ಸ್ ವಾಹನಗಳನ್ನು ಉಚಿತವಾಗಿ ಒದಗಿಸಲು ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಶವಗಳನ್ನು ಊಳಲು ಸಂಬಂಧಿಸಿದ ಸ್ಮಶಾನಗಳಲ್ಲಿ ಪಾಲಿಕೆಯಿಂದ ಗುಂಡಿ ತೋಡಿಸಿ ಉಚಿತವಾಗಿ ಮೃತದೇಹದ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಶಾಸಕರುಗಳು, ಸಂಸದರು, ಪಾಲಿಕೆ ಸದಸ್ಯರುಗಳು ಈ ಪವಿತ್ರ ಕೆಲಸಗಳನ್ನು ಮಾಡಿಸಲು ಕ್ರಮ ವಹಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ, ಸಹ ಕಾರ್ಯದರ್ಶಿಗಳಾದ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಖಜಾಂಚಿ ಆನಂದರಾಜ್, ತಾಲ್ಲೂಕು ಕಾರ್ಯದರ್ಶಿ ಆವರಗೆರೆ ವಾಸು, ಸಿ. ರಮೇಶ್, ಐರಣಿ ಚಂದ್ರು, ಕೆ. ಬಾನಪ್ಪ, ಗದ್ದಿಗೇಶ್ ಪಾಳೇದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!