ದಾವಣಗೆರೆ, ಆ. 25- ಕೊರೊನಾ ಪಾಸಿಟಿವ್ ಬಂದು ಮೃತಪಟ್ಟ ಶವದ ಮುಖ ತೋರಿಸಲು ಹಾಗೂ ಶವ ನೀಡಲು ಸಂಬಂಧಿಕರಿಂದ ಜಿಲ್ಲಾಸ್ಪತ್ರೆಯಲ್ಲಿ 20 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಸಾಮಾನ್ಯ ಸಭೆ ಯಲ್ಲಿಂದು ಆರೋಪಿಸಿದರು.
ಮೃತಪಟ್ಟ ಸಂಬಂಧಿಕರು ಕೊನೆಯ ಬಾರಿಯಾದರೂ ಸತ್ತವರ ಮುಖ ನೋಡ ಬೇಕೆಂದು ಹಂಬಲಿಸುತ್ತಾರೆ. ಈ ವೇಳೆ ಕೊರೊನಾ ಬಂದು ಮೃತ ಪಟ್ಟವರ ಮುಖ ತೋರಿಸುವು ದಿಲ್ಲ ಎಂದು ಶವಾಗಾರದಲ್ಲಿ ಹೇಳಿ ಕಳುಹಿಸುತ್ತಾರೆ. ಆದರೆ 20 ಸಾವಿರ ರೂ. ಕೊಟ್ಟರೆ ಮುಖ ತೋರಿಸುವುದಷ್ಟೇ ಅಲ್ಲ, ನೀವು ಕೇಳಿದ ಸ್ಥಳಕ್ಕೆ ಶವ ಕಳುಹಿಸಿ ಕೊಡುತ್ತೇವೆ ಎಂದು ಹೇಳಲಾಗುತ್ತಿದೆ.
ಯಾವ ಅಧಿಕಾರಿಗಳು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಏನು ನಡೆಯುತ್ತಿದೆ ಎಂದು ಇದುವರೆಗೂ ಹೋಗಿ ನೋಡಿಲ್ಲ. ಬಡ ಜನರಿಂದ ಕೊರೊನಾ ಹೆಸರೇಳಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಬಸವಂತಪ್ಪ ಕಿಡಿಕಾರಿದರು.
ಒಂದೇ ರುದ್ರಭೂಮಿ: ಜಿಲ್ಲೆಯ ಯಾವ ಊರಿನ ವ್ಯಕ್ತಿ ಪಾಸಿಟಿವ್ ಬಂದು ಸತ್ತರೂ ಶ್ರೀರಾಮ ನಗರದ ಬಳಿಯ ರುದ್ರಭೂಮಿ ಯಲ್ಲಿ ಶವಸಂಸ್ಕಾರ ಮಾಡಲಾಗುತ್ತದೆ. ಆಯಾ ತಾಲ್ಲೂಕು ವ್ಯಾಪ್ತಿಗಳಲ್ಲೂ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬಸವಂತಪ್ಪ ಒತ್ತಾಯಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾಧ್ಯ ಮಾತನಾಡುತ್ತಾ, ಪ್ರಸ್ತುತ ಇರುವ ಆಕ್ಸಿಜನ್ ಬೆಡ್ಗಳಿಗಿಂತ ಬೇಡಿಕೆ ಹೆಚ್ಚಾಗಿದೆ. ವೆಂಟಿಲೇಟರ್ ಗಿಂತ ರೋಗಿಗಳಿಗೆ ಆಕ್ಸಿಜನ್ ನೀಡುವುದು ಉತ್ತಮ. ಆದರೆ ಪ್ರಸ್ತುತ ಇರುವ ಆಕ್ಸಿಜನ್ ಸಿಲಿಂಡರ್ ಫ್ಲೋ ಕಡಿಮೆ ಇದ್ದು, ಬಳ್ಳಾರಿ, ಕೊಪ್ಪಳದ ಮಾದರಿಯಲ್ಲಿ ದಾವಣಗೆರೆಯಲ್ಲೂ ಆಕ್ಸಿಜನ್ ಪ್ಲಾಂಟ್ ಗೆ ಜಿಲ್ಲಾಧಿಕಾರಿಗಳು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಗೆೆ ಹೊಸದಾಗಿ 10 ವೆಂಟಿಲೇಟರ್ಗಳು ಬಂದಿದ್ದು, ನಿರ್ವಹಿಸಲು ಸಿಬ್ಬಂದಿಗಳ ಕೊರತೆ ಇದೆ ಎಂದರು.
ಜಿಲ್ಲಾಸ್ಪತ್ರೇಲಿ ಬೆಡ್ ಖಾಲಿ ಇರಲ್ಲ, ಖಾಸಗಿ ಆಸ್ಪತ್ರೇಲಿ ಚಿಕಿತ್ಸೆ ಕೊಡಲ್ಲ…
ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗ ತಾಸು ಗಟ್ಟಲೆ ಕುಳಿತರೂ ಬೆಡ್ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ಇದರಿಂದಾಗಿ ಕೋವಿಡ್ ಇರದಿದ್ದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸಾಮಾನ್ಯ ಸಭೆಯ ಆರಂಭದಲ್ಲಿಯೇ ಕೊರೊನಾ ಹಾಗೂ ಕೊರೊನೇತರ ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ರಮಗಳ ಬಗ್ಗೆ ಸದಸ್ಯ ಕೆ.ಎಸ್. ಬಸವಂತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ವಿಶ್ವನಾಥ್ ಸಹ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಆಸ್ಪತ್ರೆಗಳು ಹೆಚ್ಚಾಗಿ ಕೊರೊನಾ ಚಿಕಿತ್ಸೆಗೆ ಸೀಮಿತವಾಗಿವೆ. ಶೀತ, ಜ್ವರ ಬಂದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ಹಳ್ಳಿ ಜನರು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಚನೆಯಾಗದ ತಂಡ: ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಸದಸ್ಯರೊಂದಿಗೆ ಸಭೆ ನಡೆಸಿದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಪ್ರವೇಶಕ್ಕೆ ಅನುಕೂಲಮಾಡಿಕೊಡಲು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ತಂಡ ರಚನೆಗೆ ಸೂಚಿಸಿದ್ದರೂ, ಇಲ್ಲಿಯವರೆಗೆ ಯಾವ ತಂಡವೂ ರಚನೆಯಾಗಿಲ್ಲ ಎಂದರು.
ಪ್ರಸ್ತುತ ನಾನ್ ಕೋವಿಡ್ ರೋಗಿಗಳಿಗೂ ಆಕ್ಸಿಜನ್, ವೆಂಟಿಲೇಟರ್ ಅಗತ್ಯವಿರುತ್ತದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಆಕ್ಸಿಜನ್ ಬೆಡ್ಗಳು ಕೋವಿಡ್ ರೋಗಿಗಳಿಗೆ ಸೀಮಿತವಾಗಿವೆ. ನಾನ್ ಕೋವಿಡ್ ರೋಗಿಗಳು ಆಕ್ಸಿಜನ್ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂದರು.
ಸಿಇಒ ಪದ್ಮಾ ಬಸವಂತಪ್ಪ ಉತ್ತರಿಸುತ್ತಾ, ಬಹುತೇಕ ರೋಗಿಗಳು ಕಾಯಿಲೆ ಹೆಚ್ಚಾಗಿ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದರು.
ರಾಜಕೀಯದತ್ತ ಕೊರೊನಾ ಚರ್ಚೆ: ಮಾತಿನ ಚಕಮಕಿ
ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಡೆದ ಕೊರೊನಾ ಚರ್ಚೆ ರಾಜಕೀಯ ತಿರುವುದು ಪಡೆದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರುಗತಿಯ ಮಾತಿನ ಚಕಮಕಿಗೆ ಕಾರಣವಾಯಿತು.
ಸದಸ್ಯ ಬಸವಂತಪ್ಪ ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಆಗ ಬಿಜೆಪಿ ಸದಸ್ಯ ವಾಗೀಶ ಸ್ವಾಮಿ ಹಾಗೂ ಮಹೇಶ್ ಸರ್ಕಾರ ಹಾಗೂ ಅಧಿಕಾರಿಗಳ ಪರ ಮಾತನಾಡಿದರು.
ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, 70 ವರ್ಷಗಳ ವ್ಯವಸ್ಥೆಯನ್ನು ತಕ್ಷಣ ಬದಲಿಸಲಾಗದು ಎಂದು ಮಹೇಶ್ ಹೇಳಿದರು. ಚರ್ಚೆ ರಾಜಕೀಯ ತಿರುವು ಪಡೆದು ವಾಗ್ಯುದ್ಧಕ್ಕೆ ಕಾರಣವಾಯಿತು. ಮಾತಿನ ಚಕಮಕಿ ತಾರಕಕ್ಕೇರಿದಾಗ ಅಧ್ಯಕ್ಷೆ ದೀಪಾ ಜಗದೀಶ್, ಪಕ್ಷಗಳ ಬಗ್ಗೆ ಮಾತನಾಡು ವುದಾದರೆ ಸಭೆಯ ಹೊರಗಡೆ ಚರ್ಚಿಸಿ, ಈಗ ಸಮಸ್ಯೆಗಳ ಕುರಿತು ಮಾತನಾಡಿ ಎಂದು ಸೂಚಿಸಿದರು.
ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ನೀಡದ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯರಾದ ಸುರೇಂದ್ರನಾಯ್ಕ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಇವರು ಪ್ರತಿ ಕೊರೊನಾ ರೋಗಿಗೆ ಮೂರ್ನಾಲ್ಕು ಲಕ್ಷದವರೆಗೆ ಖರ್ಚು ತೋರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಯಮಾನುಸಾರ ಖರ್ಚಾಗುತ್ತಿರುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಿಸಬೇಕು ಎಂದರು.
ಸದಸ್ಯ ಎಸ್.ಕೆ.ಮಂಜುನಾಥ್ ಮಾತನಾಡಿ, ನಗರದಲ್ಲಿರುವ ಬೇರೇ ಬೇರೆ ಜನೌಷಧಿ ಕೇಂದ್ರಗಳಲ್ಲಿ ಒಂದೇ ಮಾತ್ರೆಗೆ ಬೇರೆ ಬೇರೆ ದರ ನಿಗದಿ ಇದ್ದು. ಇದರ ಬಗ್ಗೆ ಕ್ರಮ ವಹಿಸುವಂತೆ ಹೇಳಿದರು.
ಯೂರಿಯಾ ಕೊರತೆ ನೀಗಿಸಿ : ಸದಸ್ಯ ಡಿ.ಜಿ.ವಿಶ್ವನಾಥ ಮಾತನಾಡಿ, ಜಿಲ್ಲೆಯಲ್ಲಿ ರೈತರು ಯೂರಿಯಾ ಗೊಬ್ಬರ ಸಿಗದೇ ಪರಿತಪಿಸುತ್ತಿದ್ದಾರೆ. ಯೂರಿಯಾ ಗೊಬ್ಬರ ದರ 300 ರೂ. ಇದ್ದರೂ 500 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಡೀಲರ್ಗಳು ಯೂರಿಯಾ ಗೊಬ್ಬರದ ಕೊರತೆಯನ್ನು ಸೃಷ್ಟಿಸಿ ತಾವು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಯೂರಿಯಾ ಕೊರತೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಲೋಡ್ ಬರುವುದು ವಿಳಂಬವಾಗಿದೆ. 800 ಟನ್ ಯೂರಿಯಾ ನಾಳೆ ಸರಬರಾಜಾಗಲಿದೆ. ಹಂತ ಹಂತವಾಗಿ ಸರಬರಾಜಾಗುತ್ತಿದ್ದು ಕೊರತೆ ನೀಗಲಿದೆ. ಡೀಲರ್ಗಳ ಪಿಓಎಸ್ ಮಷಿನ್ಗಳನ್ನು ಪರಿಶೀಲಿಸಿ, ದಾಸ್ತಾನು ಚೆಕ್ ಮಾಡಿಸಿ 26 ಡೀಲರ್ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. 8 ಡೀಲರ್ಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಶೇ.5 ರಷ್ಟು ಕೃಷಿಕರು ಕೃಷಿಯಿಂದ ಅಡಿಕೆಗೆ ಅಂದರೆ ತೋಟಗಾರಿಕೆಗೆ ವಾಲಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿದೆ. ಆದರೆ ಮುಂದೆ ತೋಟ ಅಭಿವೃದ್ದಿಯನ್ನು ಎಚ್ಚರಿಕೆಯಿಂದ ಮಾಡಬೇಕು. ಕೊಳವೆಬಾವಿ, ಮಣ್ಣು, ನೀರಿನ ಸಂರಕ್ಷಣೆಗಾಗಿ ಬದು ನಿರ್ಮಾಣ, ತೋಟ ತಂಪಾಗಿರಿಸಲು ಸುತ್ತ ಗಿಡಗಳನ್ನು ಬೆಳೆಸಬೇಕು. ಈ ಬಾರಿ ಬೆಳೆ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಜಿಲ್ಲೆ 7ನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 22 ಎಕರೆ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಸಸಿ ಮಾಡದೇ ಭತ್ತದ ಮೊಳಕೆಯನ್ನು (ಜರ್ಮಿನೇಟೆಡ್ ಭತ್ತ)ವನ್ನು ಹಾಕಲಾಗಿದೆ. ಇದು ಯಶಸ್ವಿಯಾದರೆ ಮುಂದೆ ಈ ವಿಧಾನವನ್ನು ಹೆಚ್ಚಿನ ಪ್ರದೇಶದಲ್ಲಿ ಕೈಗೊಳ್ಳಬಹುದು ಎಂದರು.
ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯರಾದ ಜಿ.ಸಿ.ನಿಂಗಪ್ಪ, ಮಂಜುಳಾ ಟಿವಿ ರಾಜು, ಎಲ್ಲ ತಾಲ್ಲೂಕುಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದರು.
ಸಭೆಗೂ ಮುನ್ನ ಎಸ್.ಎಸ್.ಎಲ್.ಸಿ ಕನ್ನಡ ಭಾಷೆಯಲ್ಲಿ 124 ಅಂಕ ಗಳಿಸಿರುವ ಸರ್ಕಾರಿ ಬಾಲಮಂದಿರ ಶಾಲೆಯ ವಿದ್ಯಾರ್ಥಿ ಸಚಿನ್ ಹಾಗೂ 625 ಕ್ಕೆ 616 ಅಂಕ ಪಡೆದ ಸರ್ಕಾರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿ ಕಿರಣ್ ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಡಿಯಾ ಸಂಸ್ಥೆಯ ಡಾ. ಜಿ.ಟಿ ಸುದರ್ಶನ್ ಜೀವ ವೈವಿಧ್ಯತೆ ಅವನತಿಗೆ ಕಾರಣ ಹಾಗೂ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಹರಿಹರ ಶಾಸಕ ಎಸ್.ರಾಮಪ್ಪ, ಜಿ.ಪಂ.ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಫಕ್ಕೀರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಇತರರಿದ್ದರು.